ಹನೂರು : ತಾಲೂಕಿನ ಕುರಟ್ಟಿಹೊಸೂರು ಸಮೀಪದ ಅರಬಗೆರೆ-75 ಗ್ರಾಮದಲ್ಲಿ ಮುತ್ತುರಾಜು ಅವರಿಗೆ ಸೇರಿದ ಏಳು ಕುರಿಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ.
ಮೇವು ಮೇಯಲು ಕರೆದೊಯ್ದ ವೇಳೆ ಕೆರೆಯ ನೀರು ಕುಡಿದ ಬಳಿಕ ಕುರಿಗಳು ಏಕಾಏಕಿ ಬಿದ್ದು ಮೃತಪಟ್ಟಿವೆ ಎಂದು ತಿಳಿದುಬಂದಿದೆ.
ಸುದ್ದಿ ತಿಳಿಯುತ್ತಿದ್ದಂತೆ ತಾಲ್ಲೂಕು ಪಶುವೈದ್ಯಾಧಿಕಾರಿ ಡಾ. ಸಿದ್ದರಾಜು ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಾವಿನ ನಿಖರ ಕಾರಣ ತಿಳಿಯಲು ನೀರಿನ ಮಾದರಿ ಸಂಗ್ರಹಿಸಿ, ಮರಣೋತ್ತರ ಪರೀಕ್ಷೆ ಕೈಗೊಳ್ಳಲಾಗಿದೆ.
ಈ ಕುರಿತು ಮಾತನಾಡಿದ ಡಾ. ಸಿದ್ದರಾಜು, ಕುರಿಗಳು ವಿಷಪೂರಿತ ನೀರನ್ನು ಸೇವಿಸಿರುವ ಸಾಧ್ಯತೆ ಇರುವುದಾಗಿ ಶಂಕೆ ವ್ಯಕ್ತಪಡಿಸಿದರು. ಮೃತ ಕುರಿಗಳ ಮಾಲೀಕರಿಗೆ ತಲಾ 7,500 ರೂ.ಗಳಂತೆ ಒಟ್ಟು 52,500 ರೂ. ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.



