ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಮತ್ತೆ ಚರ್ಚೆಗೆ ಗ್ರಾಸವಾಗಿರುವ ಮುಖ್ಯಮಂತ್ರಿ ಬದಲಾವಣೆ ಮತ್ತು ಸಚಿವ ಸಂಪುಟ ಪುನಾರಚನೆ ವಿಚಾರಕ್ಕೆ ಸಿಎಂ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರಡ್ಡಿ ಹೊಸ ತಿರುವು ನೀಡಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮಗೆ ಸ್ವತಃ “ನಾನು ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಆಗುವುದಿಲ್ಲ” ಎಂದು ಹೇಳಿದ್ದಾರೆ ಎಂದು ರಾಯರಡ್ಡಿ ಬಹಿರಂಗಪಡಿಸಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಖರ್ಗೆ ಅವರನ್ನು ಭೇಟಿ ಮಾಡಿ ರಾಜ್ಯದ ರಾಜಕೀಯ ಪರಿಸ್ಥಿತಿ ಹಾಗೂ ಆಡಳಿತದ ಕುರಿತು ಸುದೀರ್ಘ ಚರ್ಚೆ ನಡೆಸಿದ್ದಾಗಿ ತಿಳಿಸಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಮತ್ತೊಮ್ಮೆ ಬಲವಾಗಿ ಉಳಿಸಬೇಕಾದರೆ ಮುಂದಿನ ಎರಡು ವರ್ಷ ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ಪರಿಣಾಮಕಾರಿ ಆಡಳಿತ ಅಗತ್ಯವಿದೆ ಎಂದು ಖರ್ಗೆ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾಗಿ ಹೇಳಿದರು.
ಒಂದು ವೇಳೆ ಅನಿವಾರ್ಯವಾಗಿ ಮುಖ್ಯಮಂತ್ರಿ ಬದಲಾವಣೆ ಅಗತ್ಯವಾದರೆ, ಬೇರೆ ಯಾರಿಗಿಂತ ನೀವೆ ಸಿಎಂ ಆಗಿ ಜವಾಬ್ದಾರಿ ವಹಿಸಿಕೊಳ್ಳಿ ಎಂದು ಖರ್ಗೆ ಅವರಿಗೆ ಸಲಹೆ ನೀಡಿದ್ದಾಗಿ ರಾಯರಡ್ಡಿ ಹೇಳಿದರು. ಆದರೆ, ತಮ್ಮ ವಯಸ್ಸಿನ ಕಾರಣದಿಂದ ಸಿಎಂ ಹುದ್ದೆ ನಿಭಾಯಿಸುವುದು ಕಷ್ಟ ಎಂದು ಖರ್ಗೆ ನಿರಾಕರಿಸಿದ್ದಾಗಿ ವಿವರಿಸಿದರು.
ಇನ್ನು ಈ ರಾಜಕೀಯ ಬೆಳವಣಿಗೆಗಳ ಕುರಿತು ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ನಾಯಕತ್ವದೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಖರ್ಗೆ ಭರವಸೆ ನೀಡಿದ್ದಾರೆ ಎಂದೂ ಹೇಳಿದರು.
ಇದೇ ವೇಳೆ ದಲಿತ ಮುಖ್ಯಮಂತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿದ ರಾಯರಡ್ಡಿ, ಖರ್ಗೆ ಅವರು ಅನುಭವ ಸಂಪನ್ನ ಮತ್ತು ಹಿರಿಯ ನಾಯಕರು. ಅವರು ಸಿಎಂ ಆದರೆ ರಾಜ್ಯಕ್ಕೆ ಸಮರ್ಥ ದಲಿತ ಮುಖ್ಯಮಂತ್ರಿ ಸಿಗುತ್ತಾರೆ ಎಂಬ ದೃಷ್ಟಿಯಿಂದ ಮಾತ್ರ ಆ ಮಾತು ಹೇಳಿದ್ದಾಗಿ ಸ್ಪಷ್ಟಪಡಿಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಥವಾ ಇತರರು ಮುಖ್ಯಮಂತ್ರಿ ಆಗಬಾರದು ಎಂದು ಹೇಳುವ ಹಕ್ಕು ತಮಗಿಲ್ಲ ಎಂದು ಹೇಳಿದ ಅವರು, ಸದ್ಯದ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರ ನಾಯಕತ್ವವೇ ರಾಜ್ಯಕ್ಕೆ ಅಗತ್ಯವಾಗಿದೆ. ಹೀಗಾಗಿ ಮುಂದಿನ ಎರಡು ವರ್ಷ ಅವರೇ ಮುಖ್ಯಮಂತ್ರಿ ಆಗಿ ಮುಂದುವರಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಸಚಿವ ಸಂಪುಟ ಪುನಾರಚನೆ ಕುರಿತೂ ಪ್ರತಿಕ್ರಿಯಿಸಿದ ರಾಯರಡ್ಡಿ, ಇತ್ತೀಚೆಗೆ ಸಚಿವರು ವಿಧಾನಸೌಧಕ್ಕೆ ಬರುತ್ತಿರುವ ಪ್ರಮಾಣ ಕಡಿಮೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಜಕೀಯದಲ್ಲಿ ನೀರು ಹರಿಯುತ್ತಲೇ ಇರಬೇಕು ನಿಂತ ನೀರು ಕೆಟ್ಟಂತೆ ಆಡಳಿತದಲ್ಲೂ ಚೈತನ್ಯ ಅಗತ್ಯ. ಅದಕ್ಕಾಗಿ ಸಚಿವ ಸಂಪುಟ ಪುನಾರಚನೆ ಅನಿವಾರ್ಯ ಎಂದು ಹೇಳಿದರು.



