ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಹೈ-ವೋಲ್ಟೇಜ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಗುಜರಾತ್ ಟೈಟನ್ಸ್ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಸಾಯಿ ಸುದರ್ಶನ್ ಅವರ ಆಕರ್ಷಕ ಶತಕದ ಹೊರತಾಗಿಯೂ, ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕಲ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಬೆಂಗಳೂರು ಈ ಸೀಸನ್‌ನಲ್ಲಿ ತನ್ನ 5ನೇ ಗೆಲುವು ಸಂಭ್ರಮಿಸಿದೆ. ಈ ಗೆಲುವಿನೊಂದಿಗೆ ಆರ್‌ಸಿಬಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.
ಸುದರ್ಶನ್ ಆಕರ್ಷಕ ಶತಕ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್, ಸಾಯಿ ಸುದರ್ಶನ್ ಅವರ ಭರ್ಜರಿ ಶತಕದ ನೆರವಿನಿಂದ ನಿಗದಿತ ಓವರ್‌ಗಳಲ್ಲಿ 205 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಸುದರ್ಶನ್ ಕೇವಲ 58 ಎಸೆತಗಳಲ್ಲಿ 100 ರನ್ ಸಿಡಿಸಿದರು. ಇದು ಅವರ ಐಪಿಎಲ್ ವೃತ್ತಿಜೀವನದ 3ನೇ ಶತಕವಾಗಿದೆ.
ಕೊಹ್ಲಿ-ಪಡಿಕಲ್ ‘ತೂಫಾನ್’ ಬ್ಯಾಟಿಂಗ್
206 ರನ್ ಗಳ ಗುರಿ ಬೆನ್ನಟ್ಟಿದ ಬೆಂಗಳೂರಿಗೆ ಆರಂಭಿಕ ಆಘಾತ ಎದುರಾಯಿತು. ಜ್ಯಾಕೋಬ್ ಬೆಥೆಲ್ (14 ರನ್) ಬೇಗನೆ ನಿರ್ಗಮಿಸಿದರು. ಆದರೆ ನಂತರ ಜೊತೆಯಾದ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕಲ್ ಗುಜರಾತ್ ಬೌಲರ್ ಗಳ ಬೌಲ್ ಗಳನ್ನು ಮನಬಂದಂತೆ ದಂಡಿಸಿದರು.
ವಿರಾಟ್ ಕೊಹ್ಲಿ : 44 ಎಸೆತಗಳಲ್ಲಿ 81 ರನ್‌ಗಳ ಸ್ಫೋಟಕ ಇನಿಂಗ್ಸ್ ಆಡುವ ಮೂಲಕ ಮತ್ತೆ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡರು.
ದೇವದತ್ ಪಡಿಕಲ್: ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಪಡಿಕಲ್, ಒಟ್ಟಾರೆ 27 ಎಸೆತಗಳಲ್ಲಿ 55 ರನ್ ಚಚ್ಚಿದರು.
ಈ ಜೋಡಿ ಎರಡನೇ ವಿಕೆಟ್‌ಗೆ ಕೇವಲ 59 ಎಸೆತಗಳಲ್ಲಿ 115 ರನ್‌ಗಳ ಅಮೋಘ ಜೊತೆಯಾಟವಾಡಿತು.
ಮಧ್ಯಮ ಕ್ರಮಾಂಕದ ಕುಸಿತ ಮತ್ತು ರೋಚಕ ಅಂತ್ಯ
ಒಂದು ಹಂತದಲ್ಲಿ 1 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿ ಸುಲಭವಾಗಿ ಗೆಲ್ಲುವ ಹಾದಿಯಲ್ಲಿದ್ದ ಬೆಂಗಳೂರು, ದಿಢೀರ್ ಕುಸಿತ ಕಂಡಿತು. ಕೇವಲ 16 ಎಸೆತಗಳ ಅಂತರದಲ್ಲಿ 4 ವಿಕೆಟ್ ಕಳೆದುಕೊಂಡು ಆತಂಕ ಸೃಷ್ಟಿಸಿತು. ಆದರೆ, ಕೃನಾಲ್ ಪಾಂಡ್ಯ (12 ಎಸೆತಗಳಲ್ಲಿ 23 ರನ್) ಮತ್ತು ಟಿಮ್ ಡೇವಿಡ್ (ಔಟಾಗದೆ 10 ರನ್) ಜವಾಬ್ದಾರಿಯುತ ಆಟವಾಡಿ, ಪಂದ್ಯ ಮುಗಿಯಲು 7 ಎಸೆತ ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿದರು.



