ನವದೆಹಲಿ : ಜಪಾನ್ ನ ಕಾಕಾಮಿಗಹರಾದಲ್ಲಿ ಮೇ 29 ರಿಂದ ಜೂನ್ 6 ರವರೆಗೆ ನಡೆಯಲಿರುವ ಮುಂಬರುವ ಪುರುಷರ ಅಂಡರ್-18 ಏಷ್ಯಾ ಕಪ್‌ಗಾಗಿ ಹಾಕಿ ಇಂಡಿಯಾ ಗುರುವಾರ 18 ಸದಸ್ಯರ ತಂಡವನ್ನು ಪ್ರಕಟಿಸಿದೆ.
ಈ ಟೂರ್ನಿಗೆ ಕೇತನ್ ಕುಶ್ವಾಹಾ ಅವರನ್ನು ತಂಡದ ನಾಯಕರನ್ನಾಗಿ ನೇಮಕ ಮಾಡಲಾಗಿದೆ. ಭಾರತೀಯ ಕ್ರೀಡಾ ಪ್ರಾಧಿಕಾರದ (SAI) ಭೋಪಾಲ್ ನ ಉದ್ಧವ್ ದಾಸ್ ಮೆಹ್ತಾ ಸೆಂಟ್ರಲ್ ಸೆಂಟರ್‌ನಲ್ಲಿ ಸರ್ದಾರ್ ಸಿಂಗ್ ಮತ್ತು ರಜನೀಶ್ ಮಿಶ್ರಾ ಅವರ ತರಬೇತಿ ಸಿಬ್ಬಂದಿಯ ಉಸ್ತುವಾರಿಯಲ್ಲಿ ನಡೆದ ಕಠಿಣ ರಾಷ್ಟ್ರೀಯ ತರಬೇತಿ ಶಿಬಿರದ ನಂತರ ಈ ತಂಡವನ್ನು ಆಯ್ಕೆ ಮಾಡಲಾಗಿದೆ. ಟೂರ್ನಿಯ ಫಾರ್ಮ್ಯಾಟ್ ಪ್ರಕಾರ, ಭಾರತವನ್ನು ಪೂಲ್ ‘ಎ’ ನಲ್ಲಿ ದಕ್ಷಿಣ ಕೊರಿಯಾ, ಆತಿಥೇಯ ಜಪಾನ್, ಚೈನೀಸ್ ತೈಪೆ ಮತ್ತು ಕಜಕಿಸ್ತಾನ್ ಜೊತೆಗೆ ಇರಿಸಲಾಗಿದೆ.ಭಾರತದ ಪಂದ್ಯಗಳ ವೇಳಾಪಟ್ಟಿಭಾರತ ತಂಡವು ಮೇ 29 ರಂದು ಕಜಕಿಸ್ತಾನ್ ವಿರುದ್ಧದ ಪಂದ್ಯದೊಂದಿಗೆ ತನ್ನ ಪೂಲ್-ಹಂತದ ಅಭಿಯಾನವನ್ನು ಪ್ರಾರಂಭಿಸಲಿದೆ. ಇದಾದ ನಂತರ ತಂಡವು ತನ್ನ ಮುಂದಿನ ಪಂದ್ಯದಲ್ಲಿ ಮೇ 31 ರಂದು ಆತಿಥೇಯ ಜಪಾನ್ ತಂಡವನ್ನು ಎದುರಿಸಲಿದೆ. ಜೂನ್ 1 ರಂದು ಭಾರತ ತಂಡ ದಕ್ಷಿಣ ಕೊರಿಯಾವನ್ನು ಎದುರಿಸಲಿದ್ದು, ಜೂನ್ 3 ರಂದು ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಚೈನೀಸ್ ತೈಪೆ ವಿರುದ್ಧ ಸೆಣಸಲಿದೆ.
ಈ ಕಠಿಣ ಗ್ರೂಪ್ ಹಂತದ ನಂತರ, ಪೂಲ್ ‘ಎ’ ಮತ್ತು ಪೂಲ್ ‘ಬಿ’ ನ ಅಗ್ರ ಎರಡು ತಂಡಗಳು ನೇರವಾಗಿ ಜೂನ್ 5 ರಂದು ನಡೆಯಲಿರುವ ಸೆಮಿಫೈನಲ್ ಗೆ ಪ್ರವೇಶಿಸಲಿವೆ. ಇನ್ನು ಟೂರ್ನಿಯ ಪ್ರಶಸ್ತಿ ಜಯಿಸುವ ಫೈನಲ್ ಪಂದ್ಯ ಜೂನ್ 6 ರಂದು ನಡೆಯಲಿದೆ. ತಂಡದ ಸಿದ್ಧತೆಯ ಭಾಗವಾಗಿ ಭೋಪಾಲ್‌ನಲ್ಲಿ ಆಸ್ಟ್ರೇಲಿಯಾ ಅಂಡರ್-18 ತಂಡದ ವಿರುದ್ಧ ಹೈ-ಪ್ರೊಫೈಲ್ ನಾಲ್ಕು ಪಂದ್ಯಗಳ ಸರಣಿಯನ್ನು ಆಯೋಜಿಸಲಾಗಿತ್ತು, ಇದು ಎಕ್ಸ್‌ಪೋಶರ್ ಪ್ರವಾಸದ ಭಾಗವಾಗಿತ್ತು. ಫಾರ್ವರ್ಡ್ ಆಟಗಾರ ಕೇತನ್ ಕುಶ್ವಾಹಾ ಏಷ್ಯಾ ಕಪ್ ತಂಡದ ನಾಯಕತ್ವ ವಹಿಸಲಿದ್ದು, ಏಷ್ಯಾದ ಅಗ್ರ ಯೂತ್ ತಂಡಗಳ ವಿರುದ್ಧ ಸ್ಪರ್ಧಿಸಲು ತಂಡವು ಶೀಘ್ರದಲ್ಲೇ ಪ್ರಯಾಣ ಬೆಳೆಸಲಿದೆ. ಟೂರ್ನಿಯ ಸಿದ್ಧತೆಯ ಭಾಗವಾಗಿ ಭಾರತ ತಂಡ ಆಸ್ಟ್ರೇಲಿಯಾ ಅಂಡರ್-18 ವಿರುದ್ಧ ಒಂದು ಪಂದ್ಯವನ್ನು ಗೆದ್ದು, ಒಂದು ಪಂದ್ಯದಲ್ಲಿ ಸೋಲನ್ನು ಅನುಭವಿಸಿತ್ತು. ಇನ್ನುಳಿದ ಎರಡು ಪಂದ್ಯಗಳು ಡ್ರಾ ಆಗಿದ್ದವು. ಟೂರ್ನಿಯ ಅಂತಿಮ ತಂಡದ ಕುರಿತು ಪ್ರತಿಕ್ರಿಯಿಸಿದ ಕೋಚ್ ಸರ್ದಾರ್ ಸಿಂಗ್ ಮಾತನಾಡಿ “ಆಯ್ಕೆ ಪ್ರಕ್ರಿಯೆಯು ತುಂಬಾ ಕಠಿಣವಾಗಿತ್ತು, ಆದರೆ ನಾವು ನಮಗೆ ಸರಿಯಾದ ತಾಂತ್ರಿಕ ಸಮತೋಲನವನ್ನು ನೀಡುವ 18 ಆಟಗಾರರ ತಂಡವನ್ನು ಆಯ್ಕೆ ಮಾಡಿದ್ದೇವೆ. ಭೋಪಾಲ್ ನಲ್ಲಿ ನಮ್ಮ ತರಬೇತಿ ಮತ್ತು ಆಸ್ಟ್ರೇಲಿಯಾದಂತಹ ಉನ್ನತ ತಂಡದ ವಿರುದ್ಧದ ಪಂದ್ಯಗಳು ಈ ಆಟಗಾರರಿಗೆ ಅಂತರರಾಷ್ಟ್ರೀಯ ಒತ್ತಡ ಮತ್ತು ಪಂದ್ಯದ ವೇಗವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡಿದೆ ಎಂದಿದ್ದಾರೆ.
“ನಾವು ಕಳೆದ ಕೆಲವು ವಾರಗಳಲ್ಲಿ ನಮ್ಮ ತಾಂತ್ರಿಕ ಶಿಸ್ತು, ಪೆನಾಲ್ಟಿ ಕಾರ್ನರ್ ರೂಟೀನ್ ಮತ್ತು ರಚನೆಯ (structure) ಮೇಲೆ ಕಠಿಣ ಶ್ರಮ ವಹಿಸಿದ್ದೇವೆ. ಆಟಗಾರರು ತುಂಬಾ ಉತ್ಸಾಹದಲ್ಲಿದ್ದಾರೆ, ಏಷ್ಯಾ ಕಪ್ ನಂತಹ ದೊಡ್ಡ ಟೂರ್ನಿಗೆ ಹೋಗುವ ಮೊದಲು ನಮ್ಮ ಗುರಿ ಸ್ಪಷ್ಟವಾಗಿದೆ. ನಾವು ನಮ್ಮ ಯೋಜನೆಗಳನ್ನು ಉತ್ತಮವಾಗಿ ಜಾರಿಗೊಳಿಸಲು, ನಮ್ಮ ಗ್ರೂಪ್‌ನಲ್ಲಿ ಅಗ್ರಸ್ಥಾನದಲ್ಲಿರಲು ಮತ್ತು ಟ್ರೋಫಿಯನ್ನು ಮನೆಗೆ ತರಲು ನಮ್ಮನ್ನು ಅತ್ಯುತ್ತಮ ಸ್ಥಿತಿಯಲ್ಲಿರಿಸಿಕೊಳ್ಳಲು ಬಯಸುತ್ತೇವೆ ಎಂದಿದ್ದಾರೆ.
ಗೋಲ್‌ಕೀಪರ್ ಗಳು : ಸಾವನ್ ಕುಮಾರ್, ಆಯುಷ್ ರಜಕ್
ಡಿಫೆಂಡರ್‌ಗಳು : ಅನ್ಶ್ ಬಹುತಾ, ಅರ್ಮಾನ್ ಸೋರೆಂಗ್, ಆಶಿಶ್ ತಾನಿ ಪೂರ್ತಿ, ಅರ್ಶದೀಪ್ ಸಿಂಗ್, ಅವಿ ಮಾಣಿಕ್‌ಪುರಿ, ರೋಮಿತ್ ಪಾಲ್
ಮಿಡ್ ಫೀಲ್ಡರ್‌ಗಳು : ರಾಹುಲ್ ಯಾದವ್, ಪ್ರೇಮಚಂದ್ ಸೋಯ್, ವರಿಂದರ್ ಸಿಂಗ್, ಕರಣ್ ಗೌತಮ್, ಸಿದ್ಧಾರ್ಥ್ ಬೆನ್
ಫಾರ್ವರ್ಡ್‌ಗಳು : ಕೇತನ್ ಕುಶ್ವಾಹಾ (ನಾಯಕ), ಆಕಾಶ್ ದೀಪ್, ಗಾಜಿ ಖಾನ್, ಶಾರುಖ್ ಅಲಿ, ಪ್ರಹ್ಲಾದ್ ರಾಜ್‌ಭರ್ (ಏಜೆನ್ಸಿಸ್)



