Wednesday, May 13, 2026
Google search engine

Homeರಾಜ್ಯವಾಲ್ಮೀಕಿ ವೇದಿಕೆಯಿಂದ ಸಿದ್ದರಾಮಯ್ಯರಿಗೆ ಹಲವು ಬೇಡಿಕೆ : ಸುಳ್ಳು ಜಾತಿ ಪ್ರಮಾಣ ಪತ್ರಕ್ಕೆ ಕಠಿಣ ಕ್ರಮಕ್ಕೆ...

ವಾಲ್ಮೀಕಿ ವೇದಿಕೆಯಿಂದ ಸಿದ್ದರಾಮಯ್ಯರಿಗೆ ಹಲವು ಬೇಡಿಕೆ : ಸುಳ್ಳು ಜಾತಿ ಪ್ರಮಾಣ ಪತ್ರಕ್ಕೆ ಕಠಿಣ ಕ್ರಮಕ್ಕೆ ಒತ್ತಾಯ

ಬೆಂಗಳೂರು : ಪರಿಶಿಷ್ಟರ ಮೀಸಲಾತಿ ಹೆಚ್ಚಳ, ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಸರ್ವ ಪಕ್ಷಗಳ ಸಭೆ ಕರೆಯುವಂತೆ ಕರ್ನಾಟಕ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದೆ.

ಮಾಜಿ ಸಂಸದ ವಿ.ಎಸ್‌‍. ಉಗ್ರಪ್ಪ ನೇತೃತ್ವದಲ್ಲಿಂದು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ನಿಯೋಗ, ಹಲವು ಬೇಡಿಕೆಗಳನ್ನು ಮುಂದಿಟ್ಟಿದೆ. ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟರು (ಎಸ್‌‍.ಸಿ) ಶೇ.17.1 ರಷ್ಟು ಮತ್ತು ಪರಿಶಿಷ್ಟ ಪಂಗಡ (ಎಸ್‌‍ ಟಿ) ಶೇ.6.95ರಷ್ಟಿದ್ದಾರೆ. ಜನಸಂಖ್ಯೆಗೆ ಅನುಗುಣಕ್ಕೆ ಮೀಸಲಾಗಿ ನೀಡಬೇಕು ಎಂಬುದು ಸಂವಿಧಾನದ ಆಶಯ, ಅದರಂತೆ ಲೋಕಸಭೆ, ವಿಧಾನಸಭೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲಾಗಿದೆ. ರಾಜ್ಯದಲ್ಲೂ ಎಸ್‌‍ಸಿಪಿ ಮತ್ತು ಟಿಎಸ್‌‍ಪಿ ಕಾಯ್ದೆ ರೂಪಿಸಿ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ನೀಡಲಾಗುತ್ತಿದೆ.

ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಎಸ್‌‍ಸಿಗೆ ಶೇ.15ರ ಬದಲು ಶೇ.17, ಎಸ್‌‍ಟಿಗೆ ಶೇ.3ರ ಬದಲು ಶೇ.7ರಷ್ಟು ಮೀಸಲಾತಿ ನೀಡಬೇಕೆಂದು ದಶಕಗಳಿಂದ ಹೋರಾಟ ನಡೆಯುತ್ತಿದೆ. ಹೈಕೋರ್ಟ್‌ ರಿಟ್‌ ಅರ್ಜಿ ಸಂಖ್ಯೆ 16852/2015 ರಲ್ಲಿ ಕರ್ನಾಟಕ ರಾಜ್ಯ ನಾಯಕ ವಿದ್ಯಾರ್ಥಿ ಸಂಘವು ದಾಖಲಿಸಿದ ಮನವಿಯನ್ನು ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಈ ಕುರಿತು ತೀರ್ಮಾನ ಕೈಗೊಳ್ಳಲು ಮತ್ತು ಪ್ರಾಯೋಗಿಕ ದತ್ತಾಂಶವನ್ನು ಸಂಗ್ರಹಿಸಲು ರಾಜ್ಯ ಸರ್ಕಾರ 2017ರ ಜು. 22ರಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್‌‍ರವರ ನೇತೃತ್ವದಲ್ಲಿ ಆಯೋಗ ನೇಮಿಸಿತ್ತು.

ಆಯೋಗವು ವ್ಯಾಪಕ ಅಧ್ಯಯನ ನಡೆಸಿ, ಎಸ್‌‍ಸಿ ಮತ್ತು ಎಸ್‌‍ಟಿ ಮೀಸಲಾತಿ ಪ್ರಮಾಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಶೇ.15ರ ಬದಲು 17, ಶೇ.3ರ ಬದಲು ಶೇ.7ಕ್ಕೆ ಹೆಚ್ಚಿಸಲು 2020ರ ಜುಲೈ 2ರಂದು ವರದಿ ನೀಡಿತ್ತು. ಈ ವರದಿಯನ್ನು ಅವಲೋಕಿಸಲು ರಾಜ್ಯ ಸರ್ಕಾರ ಮತ್ತೊಂದು ಆಯೋಗವನ್ನು ನ್ಯಾಯಮೂರ್ತಿ ಸುಭಾಷ್‌ ಅಡಿರವರ ನೇತೃತ್ವದಲ್ಲಿ ನೇಮಕ ಮಾಡಿ ಆ ಆಯೋಗವು 2022ರ ಅ.7ರಂದು ನೀಡಿದ ವರದಿಯಲ್ಲಿಯೂ ಎಸ್‌‍ಸಿ ಮತ್ತು ಎಸ್‌‍ಟಿ ಮೀಸಲಾತಿಯನ್ನು ಶೇ.17 ಮತ್ತು ಶೇ.7ಕ್ಕೆ ಅನುಕ್ರಮವಾಗಿ ಹೆಚ್ಚಿಸಲು ತಿಳಿಸಿತ್ತು ಎಂದು ವಿವರಿಸಿದ್ದಾರೆ.

ಈ ಎಲ್ಲಾ ಕಾರಣಗಳಿಂದ ಸರ್ವ ಪಕ್ಷಗಳ ಸಹಕಾರದಿಂದ ರಾಜ್ಯ ಸರ್ಕಾರ ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಅಧಿನಿಯಮ 2022 ನ್ನು ಜಾರಿಗೆ ತರಲಾಯಿತು. ಈ ಕಾನೂನು ಸಂವಿಧಾನದ 9ನೇ ಷೆಡ್ಯೂಲ್‌ಗೆ ಸೇರದಿದ್ದರೆ ತೊಂದರೆಯಾಗುತ್ತದೆ. ಈ ಕುರಿತು ಕ್ರಮವಹಿಸಲು ನಿರಂತರ ಹೋರಾಟ ನಡೆಯುತ್ತಿದೆ.

2023ರ ಮಾ.23 ಅಂದಿನ ಮುಖ್ಯ ಕಾರ್ಯದರ್ಶಿಯವರು ಕೇಂದ್ರ ಸರ್ಕಾರದ ಗೃಹ ಇಲಾಖೆಗೆ ಪತ್ರ ಬರೆದು ಮನವಿ ಮಾಡಿದ್ದರು. ಕೇಂದ್ರ ಸರ್ಕಾರದ ಗೃಹ ಇಲಾಖೆಯ ಕಾರ್ಯದರ್ಶಿಯವರು 2023ರ ಮೇ 11ರಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಸದರಿ ವಿಚಾರ ನಮ್ಮ ಇಲಾಖೆಗೆ ಬರುವುದಿಲ್ಲ. ನೀವು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಮತ್ತು ಬುಡಕಟ್ಟು ಜನಾಂಗ ಇಲಾಖೆಯನ್ನು ಸಂಪರ್ಕಿಸಿ ಪರಿಹಾರ ರೂಪಿಸಿಕೊಳ್ಳಿ ಎಂದು ಬರೆದಿರುತ್ತಾರೆ. ಆದರೆ ರಾಜ್ಯ ಸರ್ಕಾರ ಅನೇಕ ವರ್ಷಗಳ ಕಾಲ ಈ ಹಿನ್ನೆಲೆಯಲ್ಲಿ ಯಾವುದೇ ಕ್ರಮ ಜರುಗಿಸಿರುವುದಿಲ್ಲ ಎಂದು ಆಕ್ಷೇಪಿಸಿದ್ದಾರೆ.

2022 ರ ಕಾನೂನಿನ ಶೇ.56 ಮೀಸಲಾತಿಯ ರೀತ್ಯಾ 2023-24, 2024-25ನೇ ಸಾಲುಗಳಲ್ಲಿ ಎಸ್‌‍ಸಿ ಮತ್ತು ಎಸ್‌‍ಟಿ ಹಾಗೂ ಇತರ ಹಿಂದುಳಿದ ವರ್ಗದವರು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಪಡೆದಿದ್ದಾರೆ. ಹೈಕೋರ್ಟ್‌ ಶೇ.56ರಷ್ಟು ಮೀಸಲಾತಿ ಕಾನೂನಿಗೆ ತಡೆಯಾಜ್ಞೆ ನೀಡಿರುವ ಕಾರಣ ಎಸ್‌‍ಸಿ ಮತ್ತು ಎಸ್‌‍ಟಿ ಹಾಗೂ ಇತರ ಹಿಂದುಳಿದ ವರ್ಗಗಳ ಜನರ ಸಾಮಾಜಿಕ ನ್ಯಾಯಕ್ಕೆ ಬಹು ದೊಡ್ಡ ಹಿನ್ನಡೆಯಾಗಿರುತ್ತದೆ. ರಾಜ್ಯ ಸರ್ಕಾರ 2025ರ ಡಿಸೆಂಬನರ್‌ನಲ್ಲಿ ಬೆಳಗಾವಿಯ ಅಧಿವೇಶನದಲ್ಲಿ ಸರ್ವ ಸಮತ ನಿರ್ಣಯವನ್ನು ಕೈಗೊಂಡು ಕಾನೂನನ್ನು ಸಂವಿಧಾನದ 9ನೇ ಷೆಡ್ಯೂಲ್‌ಗೆ ಸೇರಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕಿದೆ.

ಮುಖ್ಯ ಕಾರ್ಯದರ್ಶಿಯವರು ಪತ್ರ ಬರೆಯುತ್ತಿರುವುದು ಸೇರಿದಂತೆ ಎಲ್ಲವೂ ತೋರುಗಾಣಿಕೆಯ ಪ್ರಯತ್ನವಾಗಿದೆ. ಅದನ್ನು ಬಿಟ್ಟು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಎಸ್‌‍ಸಿ ಮತ್ತು ಎಸ್‌‍ಟಿ ಸುಳ್ಳು ಜಾತಿ ಪ್ರಮಾಣ ಪತ್ರಗಳ ಮೂಲಕ ಉದ್ಯೋಗಾವಕಾಶ ಪಡೆದಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ವಿಚಾರವಾಗಿ ಚರ್ಚಿಸಲು ಮೊದಲು ಸರ್ವ ಪಕ್ಷಗಳ ಸಭೆಯನ್ನು ಕರೆಯಬೇಕು, ಪ್ರಧಾನಿ ಬಳಿಗೆ ಸರ್ವ ಪಕ್ಷಗಳ ನಿಯೋಗವನ್ನು ಕೊಂಡೊಯ್ಯಬೇಕು. ಹೈಕೋರ್ಟ್‌ನಲ್ಲಿರುವ ತಡೆಯಜ್ಞೆ ತೆರವುಗೊಳಿಸಲು ಸಮರ್ಪಕ ವಕೀಲರನ್ನು ನೇಮಕ ಮಾಡಬೇಕು. ತಡೆಯಾಜ್ಞೆ ತೆರವಾಗದಿದ್ದರೆ, ವಿಶೇಷ ಅರ್ಜಿಯನ್ನು ದಾಖಲು ಮಾಡಬೇಕು. ಎಸ್‌‍ಸಿ ಮತ್ತು ಎಸ್‌‍ಟಿ ಹಾಗೂ ಇತರ ಹಿಂದುಳಿದ ವರ್ಗಗಳ ಜನ ಪ್ರತಿನಿಧಿಗಳ ಮತ್ತು ನಾಯಕರುಗಳ ತುರ್ತು ಸಭೆ ಕರೆದು ಚರ್ಚೆ ನಡೆಸಬೇಕು ಎಂದಿದ್ದಾರೆ.ಮುಖಂಡರಾದ ಎಂ.ನರಸಿಂಹಯ್ಯ, ಈ.ರಾಜಪ್ಪ ಮತ್ತಿತರರು ನಿಯೋಗದಲ್ಲಿದ್ದರು.

RELATED ARTICLES
- Advertisment -
Google search engine

Most Popular