ಬೆಂಗಳೂರು: ನಗರದ ಬ್ಯಾಡರಹಳ್ಳಿಯಲ್ಲಿ ನಡೆದ ಕಿರಣ್ ಎಂಬಾತನ ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ಮತ್ತೊಂದು ಭಾಯನಕ ಸತ್ಯ ಹೊರಬಿದ್ದಿದೆ. ಸದ್ಯ ಕಿರಣ್ ಪ್ರೇಯಸಿ ಪ್ರೇಮಾ ಪೊಲೀಸರ ವಶದಲ್ಲಿದ್ದು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾಳೆ.
ತನಿಖೆ ವೇಳೆ ದೊರೆತ ಮಾಹಿತಿ ಪ್ರಕಾರ, ಕಳೆದ ವರ್ಷ ಆಗಸ್ಟ್‌ನಲ್ಲಿ ಪ್ರೇಮಾ ಮತ್ತು ಕಿರಣ್ ನಡುವೆ ಪರಿಚಯವಾಗಿ, ಸ್ನೇಹವಾಗಿತ್ತು. ಈ ವರ್ಷದ ಫೆಬ್ರವರಿ 14ರ ‘ವ್ಯಾಲೆಂಟೈನ್ಸ್ ಡೇ’ ದಿನ ಪ್ರೇಮಾ ತನ್ನ ಪ್ರೀತಿಯನ್ನು ಹೇಳಿಕೊಂಡಿದ್ದಳು, ಕಿರಣ್ ಕೂಡ ಒಪ್ಪಿಕೊಂಡಿದ್ದ
ಕೊಲೆಯಾದ ಕಿರಣ್‌ಗೆ, ಪ್ರೇಮಾ ಬರೋಬ್ಬರಿ 4.5 ಲಕ್ಷ ರೂಪಾಯಿ ಮೌಲ್ಯದ ಬೈಕ್ ಮತ್ತು ಮೊಬೈಲ್ ಫೋನ್ ಕೊಡಿಸಲು ಮುಂದಾಗಿದ್ದಳು. ಕೊಲೆ ನಡೆದ ದಿನವೂ ಇಬ್ಬರೂ ಸೇರಿ ಬೈಕ್ ನೋಡಲು ಹೋಗಿದ್ದರು ಎಂದು ತಿಳಿದುಬಂದಿದೆ.
ಆದರೆ, ಇತ್ತೀಚೆಗೆ ಕಿರಣ್ ಪ್ರೇಮಾಳಿಂದ ಅಂತರ ಕಾಯ್ದುಕೊಳ್ಳಲು ಶುರು ಮಾಡಿದ್ದ. ಇದರಿಂದ ಮನನೊಂದಿದ್ದ ಪ್ರೇಮಾ, ಆತನನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನಿಸಿದ್ದಳು. ಅದಕ್ಕಾಗಿಯೇ ಪೆಟ್ರೋಲ್ ಮತ್ತು ಸೀಮೆಎಣ್ಣೆಯನ್ನು ಮೊದಲೇ ಖರೀದಿಸಿ ತಂದಿಟ್ಟುಕೊಂಡಿದ್ದಳು. ಮದುವೆ ವಿಚಾರವಾಗಿ ಮನೆಯಲ್ಲಿ ಮತ್ತೆ ಗಲಾಟೆ ಆರಂಭವಾದಾಗ, ಪ್ಲಾನ್ ಪ್ರಕಾರ ಕಿರಣ್‌ನನ್ನು ಮಂಚಕ್ಕೆ ಕಟ್ಟಿ ಹಾಕಿ ಬೆಂಕಿ ಹಚ್ಚಿದ್ದಾಳೆ ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ.



