ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗಳು ಒಳಗೊಳಗೆ ಕುದಿಯುತ್ತಿದ್ದರೆ, ಇತ್ತ ವಿರೋಧ ಪಕ್ಷದ ಸಾಲಿನಲ್ಲಿರುವ ಜೆಡಿಎಸ್ ತನ್ನ ಹಳೆಯ ವೈಭವವನ್ನು ಮರಳಿ ಪಡೆಯಲು ಭರ್ಜರಿ ತಯಾರಿ ನಡೆಸುತ್ತಿದೆ. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಜೆಡಿಎಸ್ ಅನ್ನು ಮತ್ತೆ ಕಟ್ಟಿಬೆಳೆಸಲು ‘ಘರ್ ವಾಪ್ಸಿ’ಅಭಿಯಾನವನ್ನು ಅತ್ಯಂತ ಚುರುಕುಗೊಳಿಸಿದ್ದಾರೆ.
ಈ ಅಭಿಯಾನದ ಮೊದಲ ಹಂತವಾಗಿ ಬೆಂಗಳೂರಿನ ಪುಲಕೇಶಿ ನಗರದ ಮಾಜಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರು ಜೆಡಿಎಸ್ ಸೇರುವುದು ಬಹುತೇಕ ಖಚಿತವಾಗಿದೆ. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಟಿಕೆಟ್ ವಂಚಿತರಾಗಿದ್ದ ಅಖಂಡ, ಅನಿವಾರ್ಯವಾಗಿ ಬಿಜೆಪಿಯತ್ತ ಮುಖ ಮಾಡಿದ್ದರು. ಆದರೆ, ಪುಲಕೇಶಿ ನಗರದಲ್ಲಿ ಬಿಜೆಪಿಯ ನೆಲೆ ಅಷ್ಟಾಗಿ ಭದ್ರವಾಗಿಲ್ಲದ ಕಾರಣ ಮತ್ತು ಮುಂಬರುವ ದಿನಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರಿಯಲಿರುವ ಹಿನ್ನೆಲೆಯಲ್ಲಿ, ಅಖಂಡ ಅವರು ಜೆಡಿಎಸ್ ಸೇರುವುದೇ ತಮ್ಮ ರಾಜಕೀಯ ಭವಿಷ್ಯಕ್ಕೆ ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಇತ್ತೀಚೆಗಷ್ಟೇ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಖುದ್ದು ಅಖಂಡ ಶ್ರೀನಿವಾಸ್ ಮೂರ್ತಿ ಅವರ ನಿವಾಸಕ್ಕೆ ಭೇಟಿ ನೀಡಿ, ಸುದೀರ್ಘ ಸಮಾಲೋಚನೆ ನಡೆಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಕುಮಾರಣ್ಣ ನೀಡಿದ ಅಧಿಕೃತ ಆಹ್ವಾನಕ್ಕೆ ಅಖಂಡ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರದಲ್ಲೇ ಜೆಡಿಎಸ್ ಬಾವುಟ ಹಿಡಿಯಲಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ, ಅಖಂಡ ಅವರು ತಮ್ಮ ಹಳೆಯ ಕ್ಷೇತ್ರವಾದ ಪುಲಕೇಶಿ ನಗರ ಅಥವಾ ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ನೆಲಮಂಗಲ ಕ್ಷೇತ್ರದಿಂದ ಸ್ಪರ್ಧಿಸಲು ಆಸಕ್ತಿ ಹೊಂದಿದ್ದಾರೆ. ನೆಲಮಂಗಲವು ಜೆಡಿಎಸ್‌ನ ಭದ್ರಕೋಟೆಯಾಗಿದ್ದು, ಅಲ್ಲಿ ಅಖಂಡ ಅವರಂತಹ ಪ್ರಭಾವಿ ನಾಯಕ ಸ್ಪರ್ಧಿಸಿದರೆ ಗೆಲುವು ಸುಲಭ ಎಂಬ ಲೆಕ್ಕಾಚಾರಗಳು ನಡೆಯುತ್ತಿವೆ.
ಹೆಚ್.ಡಿ. ಕುಮಾರಸ್ವಾಮಿ ಅವರ ಕಣ್ಣು ಕೇವಲ ಹಳೇ ಮೈಸೂರು ಭಾಗದ ಮೇಲಷ್ಟೇ ಇಲ್ಲದೆ, ಉತ್ತರ ಕರ್ನಾಟಕದಲ್ಲೂ ಪಕ್ಷವನ್ನು ಬಲಪಡಿಸಲು ಬಲೆ ಬೀಸಿದ್ದಾರೆ. ಹೀಗಾಗಿ ಕೊಪ್ಪಳ ಜಿಲ್ಲೆಯ ಗಂಗಾವತಿ ಕ್ಷೇತ್ರದ ಪ್ರಭಾವಿ ಅಲ್ಪಸಂಖ್ಯಾತ ನಾಯಕ ಹಾಗೂ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರುವ ಸಾಧ್ಯತೆ ದಟ್ಟವಾಗಿದೆ.



