Tuesday, March 10, 2026
Google search engine

Homeಅಪರಾಧಶ್ರೀಮಂತರಿಗೆ ಹನಿ ಟ್ರ್ಯಾಪ್ ಮಾಡುತ್ತಿದ್ದ ಖಿಲಾಡಿ ದೀಪಾಗೆ ಹೆಡೆಮುರಿ ಕಟ್ಟಿದ ಪೊಲೀಸರು.

ಶ್ರೀಮಂತರಿಗೆ ಹನಿ ಟ್ರ್ಯಾಪ್ ಮಾಡುತ್ತಿದ್ದ ಖಿಲಾಡಿ ದೀಪಾಗೆ ಹೆಡೆಮುರಿ ಕಟ್ಟಿದ ಪೊಲೀಸರು.

ವರದಿ :ಸ್ಟೀಫನ್ ಜೇಮ್ಸ್.

ಬೆಳಗಾವಿಬೆಳಗಾವಿ ನಗರದಲ್ಲಿ ಶ್ರೀಮಂತ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಹನಿ ಟ್ರ್ಯಾಪ್ ನಡೆಸುತ್ತಿದ್ದ ಫ್ಯಾಶನ್ ಡಿಸೈನರ್ ಮಹಿಳೆಯನ್ನು ಟಿಳಕವಾಡಿ ಪೊಲೀಸರು ಬಂಧಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಮೂಲದ ದೀಪಾ ಅವಟಗಿ (33) ಬಂಧಿತ ಆರೋಪಿಯಾಗಿದ್ದು, ಆಕೆಯ ಸ್ನೇಹಿತ ಶಿವಾನಂದ ಮಠಪತಿ ಪರಾರಿಯಾಗಿದ್ದಾನೆ. ಶಿವಾನಂದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿವಾಸಿಯಾಗಿದ್ದು, ಶ್ರೀಮಂತ ವ್ಯಕ್ತಿಗಳ ಬಗ್ಗೆ ಮಾಹಿತಿಯನ್ನು ದೀಪಾಗೆ ನೀಡುತ್ತಿದ್ದ ಎಂದು ತಿಳಿದುಬಂದಿದೆ.

ಆರೋಪಿ ದೀಪಾ ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್ ಮೂಲಕ ಶ್ರೀಮಂತ ವ್ಯಕ್ತಿಗಳೊಂದಿಗೆ ಪರಿಚಯ ಮಾಡಿಕೊಂಡು ಅವರನ್ನು ತನ್ನ ಬಲೆಗೆ ಬೀಳಿಸುತ್ತಿದ್ದಳು. ಬಳಿಕ ಅಶ್ಲೀಲ ಚಾಟ್ ನಡೆಸಿ, ಅವರನ್ನು ಬೆಳಗಾವಿ ನಗರದ ಲಾಡ್ಜ್‌ಗೆ ಭೇಟಿ ನೀಡಲು ಆಹ್ವಾನಿಸುತ್ತಿದ್ದಳು.ಲಾಡ್ಜ್‌ಗೆ ಬಂದ ವ್ಯಕ್ತಿಗೆ ಸ್ನಾನ ಮಾಡಿ ಬರಲು ಹೇಳಿ, ಆತ ಬಾತ್‌ರೂಮ್‌ಗೆ ಹೋದ ಕೂಡಲೇ ಹೊರಗಿನಿಂದ ಬಾಗಿಲು ಹಾಕಿ ಲಾಕ್ ಮಾಡುತ್ತಿದ್ದಳು. ನಂತರ ಆತನ ಬಳಿ ಇದ್ದ ಮೊಬೈಲ್, ಹಣ ಹಾಗೂ ಕಾರಿನ ಕೀಲಿಗಳನ್ನು ಕಳ್ಳತನ ಮಾಡಿ ಪರಾರಿಯಾಗುತ್ತಿದ್ದಳು.ಈ ರೀತಿಯಾಗಿ ಲಾಡ್ಜ್‌ಗೆ ಬಂದು ಪರಾರಿಯಾಗುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಗೊಂಡಿವೆ. ಬಳಿಕ ಬಾತ್‌ರೂಮ್‌ನಲ್ಲಿ ಸಿಲುಕಿದ್ದ ವ್ಯಕ್ತಿಗೆ ಬೇರೆ ಸಂಖ್ಯೆಯಿಂದ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟು, ಹಣ ಕೊಡದಿದ್ದರೆ ಕೇಸ್ ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.ಈ ಕುರಿತು ಬೆಳಗಾವಿ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ಸ್ಪೆಕ್ಟರ್ ಪರಶುರಾಮ ಪೂಜೇರಿ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ. ಬಳಿಕ ಆರೋಪಿಯನ್ನು ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಲಾಗಿದೆ.ಆರೋಪಿಯಿಂದ ಒಟ್ಟು 32 ಲಕ್ಷ 86 ಸಾವಿರ ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಇದರಲ್ಲಿ ಒಂದು ಫಾರ್ಚುನರ್ ಕಾರು, ಒಂದು ಮಾರುತಿ ಸುಜುಕಿ ಎಸ್-ಕ್ರಾಸ್ ಕಾರು, 11 ಮೊಬೈಲ್ ಫೋನ್‌ಗಳು, ಒಂದು ಟ್ಯಾಬ್, ಒಂದು ಡೊಂಗಲ್, ಮೂರು ಕಾರಿನ ಕೀಗಳು ಹಾಗೂ 14 ಸಾವಿರ ರೂ. ನಗದು ಸೇರಿವೆ. ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular