ಕಲಬುರಗಿ : ಭಾರತಕ್ಕೆ ಬೇಕಾದ ಶೇ.90 ರಷ್ಟು ಕೇಸರಿ ಇರಾನ್ ಮತ್ತು ಅಫ್ಘಾನಿಸ್ತಾನದಿಂದ ಬರುತ್ತದೆ. ಹೀಗಿರುವಾಗ ಮುಸ್ಲಿಂ ದೇಶಗಳ ಜೊತೆಗಿನ ವ್ಯಾಪಾರ ಬೇಕು ಎನ್ನುವ ಬಿಜೆಪಿಯವರಿಗೆ ಇಲ್ಲಿನ ಅಲ್ಪಸಂಖ್ಯಾತರು ಎಂದರೆ ಯಾಕೆ ಆಗುವುದಿಲ್ಲ? ಬಿಜೆಪಿಯವರಿಗೆ ನಿಜವಾಗಿಯೂ ಎರಡೆರಡು ನಾಲಿಗೆ ಇವೆ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಭಾರತಕ್ಕೆ ಶೇ.90 ರಷ್ಟು ಕೇಸರಿ ಇರಾನ್ ಮತ್ತು ಅಫ್ಘಾನಿಸ್ತಾನದಿಂದ ಬರುತ್ತದೆ. ಕಚ್ಚಾ ತೈಲ ಮತ್ತು ಯುರಿಯಾಕ್ಕಾಗಿ ನಾವು ಅರಬ್ ರಾಷ್ಟ್ರಗಳನ್ನು ಅವಲಂಬಿಸಿದ್ದೇವೆ. ಹೀಗಿರುವಾಗ ಮುಸ್ಲಿಂ ದೇಶಗಳ ಜೊತೆಗಿನ ವ್ಯಾಪಾರ ಬೇಕು ಎನ್ನುವ ಬಿಜೆಪಿಯವರಿಗೆ ಇಲ್ಲಿನ ಅಲ್ಪಸಂಖ್ಯಾತರು ಎಂದರೆ ಯಾಕೆ ಆಗುವುದಿಲ್ಲ ಎಂದು ಪ್ರಶ್ನಿಸಿದರು.
ಇನ್ನೂ ಬಿಜೆಪಿಯ ಇಬ್ಬಗೆಯ ನೀತಿಯನ್ನು ತೀವ್ರವಾಗಿ ಟೀಕಿಸಿದರು. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಹೇಳಿಕೆಗಳಿಗೆ ತಿರುಗೇಟು ನೀಡಿದ ಪ್ರಿಯಾಂಕ್, ಒಂದೆಡೆ ಮುಸ್ಲಿಂ ವಿರೋಧಿ ಮಾತನಾಡುತ್ತಾ, ಇನ್ನೊಂದೆಡೆ ಇಸ್ಲಾಮಿಕ್ ರಾಷ್ಟ್ರಗಳ ಜೊತೆ ವ್ಯಾಪಾರ ಮಾಡುವ ಬಿಜೆಪಿಯ ಸಿದ್ಧಾಂತ ಹಸಿ ಸುಳ್ಳಿನಿಂದ ಕೂಡಿದೆ. ಬಾಂಗ್ಲಾದೇಶದಿಂದ ಅಕ್ರಮ ನುಸುಳುಕೋರರು ಬರುತ್ತಿದ್ದಾರೆ ಎಂದು ಅಸ್ಸಾಂ ಸಿಎಂ ಹೇಳುತ್ತಿದ್ದಾರೆ. ಹಾಗಿದ್ದರೆ ದೇಶದ ಗಡಿಯನ್ನು ಕಾಯುತ್ತಿರುವ ಕೇಂದ್ರ ಗೃಹ ಸಚಿವರು ಕತ್ತೆ ಕಾಯುತ್ತಿದ್ದಾರೆಯೇ? ಎಂದು ವ್ಯಂಗ್ಯವಾಡಿದರು.
ಈ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆರ್‌ಎಸ್‌ಎಸ್ ಮತ್ತು ಬಿಜೆಪಿಯನ್ನು ವಿಷಸರ್ಪಕ್ಕೆ ಹೋಲಿಸಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಖರ್ಗೆ ಸಮರ್ಥಿಸಿಕೊಂಡರು. ಸಂವಿಧಾನಕ್ಕೆ ವಿರುದ್ಧವಾಗಿರುವ ಮತ್ತು ಸಮಾಜದಲ್ಲಿ ವಿಷ ಕಾರುವ ಸಿದ್ಧಾಂತಗಳನ್ನು ವಿಷಸರ್ಪ ಎನ್ನದೆ ಇನ್ನೇನು ಹೇಳಬೇಕು? ಆರ್‌ಎಸ್‌ಎಸ್‌ನವರಿಗೆ ತಾಕತ್ತಿದ್ದರೆ ನೇರವಾಗಿ ಬಂದು ದೂರು ನೀಡಲಿ, ಅದನ್ನು ಬಿಟ್ಟು ಬೇರೆಯವರಿಂದ ದೂರು ಕೊಡಿಸುವ ಅವಶ್ಯಕತೆಯೇನಿತ್ತು? ಎಂದು ಪ್ರಶ್ನಿಸಿದರು.
ಉಪಚುನಾವಣೆಯಲ್ಲಿ ಕೈ ಅಬ್ಬರ : ರಾಜ್ಯದ ಎರಡು ಕ್ಷೇತ್ರಗಳ ಉಪಚುನಾವಣೆಯ ಬಗ್ಗೆ ಮಾತನಾಡಿದ ಅವರು, ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭಾರಿ ಅಂತರದಿಂದ ಜಯಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ಶಾಮನೂರು ಹಾಗೂ ಮೇಟಿ ಕುಟುಂಬಗಳ ಜನಸೇವೆ ನಮಗೆ ಶ್ರೀರಕ್ಷೆಯಾಗಲಿದ್ದು, ಜನತೆ ಮತ್ತೊಮ್ಮೆ ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.



