ಗುಹವಾಟಿ: ನಿನ್ನೆ ( ಏಪ್ರಿಲ್ 10) ಬರ್ಸಾಪರ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ದ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೀನಾಯ ಸೋಲು ಕಂಡಿದೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರಂಭಿಕ ಆಘಾತ ಅನುಭವಿಸಿದೆ. ಪಂದ್ಯದಲ್ಲಿ ನಾಯಕ ರಜತ್ ಪಟಿದಾರ್ ಅರ್ಧಶತಕ, ಶೆಫರ್ಡ್ ಹಾಗೂ ವೆಂಕಟೇಶ್ ಐಯ್ಯರ್ ಉತ್ತಮ ಆಟದ ನೆರವಿನಿಂದ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 201 ರನ್ ಕಲೆಹಾಕಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 202 ರನ್‌ಗಳ ಸವಾಲಿನ ಗುರಿ ನೀಡಿತು.
ಈ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾದ ರಾಜಸ್ಥಾನ್ ರಾಯಲ್ಸ್ ವೈಭವ್ ಸೂರ್ಯವಂಶಿ ಹಾಗೂ ಧ್ರುವ್ ಜುರೆಲ್ ಅರ್ಧಶತಕಗಳ ನೆರವಿನಿಂದ 18 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 202 ರನ್ ಕಲೆಹಾಕಿತು.
ಆರ್‌ಸಿಬಿ ನೀಡಿದ ಸವಾಲಿನ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಅಬ್ಬರಿಸಿದರು. ಮೊದಲನೇ ಓವರ್‌ನಲ್ಲಿ ಭುನವೇಶ್ವರ್ ಕುಮಾರ್‌ಗೆ ಎರಡು ಬೌಂಡರಿ ಚಚ್ಚಿದ ಈತ ಎರಡನೇ ಓವರ್‌ನಲ್ಲಿ ಜೈಸ್ವಾಲ್ ವಿಕೆಟ್ ಬಿದ್ದರೂ ಬಿಡದೇ ಮೂರನೇ ಓವರ್‌ನಲ್ಲಿ ಹೇಜಲ್‌ವುಡ್‌ಗೆ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ಬಾರಿಸಿ ಅಬ್ಬರಿಸಿ ಒಟ್ಟಾರೆ ತಮ್ಮ ಅಮೋಘ ಇನ್ನಿಂಗ್ಸ್‌ನಲ್ಲಿ 26 ಎಸೆತಗಳಲ್ಲಿ 8 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 78 ರನ್ ಚಚ್ಚಿ ಮ್ಯಾನ್ ಆಫ್ ದಿ ಮ್ಯಾಚ್ ಆಗಿದ್ದಾರೆ.
ಈ ಇನ್ನಿಂಗ್ಸ್ ಮೂಲಕ ಟೂರ್ನಿಯಲ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ವೈಭವ್ ಆರೆಂಜ್ ಕ್ಯಾಪನ್ನೂ ಸಹ ಪಡೆದುಕೊಂಡರು. ಹೀಗೆ ಆರೆಂಜ್ ಕ್ಯಾಪ್ ಹಾಗೂ ಪಂದ್ಯಶ್ರೇಷ್ಠ ಪ್ರಶಸ್ತಿ ಎರಡನ್ನೂ ಸಹ ಮುಂದಿಟ್ಟುಕೊಂಡು ವಿಡಿಯೊಗೆ ಪೋಸ್ ಕೊಟ್ಟಿರುವ ವೈಭವ್ ವಿರಾಟ್ ಕೊಹ್ಲಿಯಿಂದ ತನಗೆ ಸಿಕ್ಕ ವಿಶೇಷ ಉಡುಗೊರೆಯನ್ನೂ ಸಹ ಹಂಚಿಕೊಂಡಿದ್ದಾರೆ.
ಹೌದು, ವಿರಾಟ್ ಕೊಹ್ಲಿ ವೈಭವ್ ಸೂರ್ಯವಂಶಿ ಕ್ಯಾಪ್ ಮೇಲೆ ‘ಡಿಯರ್ ವೈಭವ್ ವೆಲ್‌ಡನ್’ ಎಂದು ಬರೆದು ಸಹಿ ಹಾಕಿ ಕೊಟ್ಟಿದ್ದಾರೆ.



