ಬೆಂಗಳೂರು : ನಾವು ಮೊದಲೇ ಎಚ್ಚರಿಕೆ ಕೊಟ್ಟಂತೆ ವಿಧಾನಸಭಾ ಚುನಾವಣೆಗಳು ಮುಗಿಯುತ್ತಿದ್ದಂತೆಯೇ ನರೇಂದ್ರ ಮೋದಿ ಸರ್ಕಾರವು ಬೆಲೆಯೇರಿಕೆ ಮಾಡತೊಡಗಿದೆ. ಅದರಂತೆ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರವನ್ನು ಮೇ 1ರಿಂದ ಜಾರಿಗೆ ಬರುವಂತೆ ಏಕಾಏಕಿ ₹993 ಹೆಚ್ಚಳ ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಒಟ್ಟಾರೆ 19 ಕೆಜಿಯ 1 ಸಿಲಿಂಡರ್‌ಗೆ ನಿನ್ನೆಯವರೆಗೆ ₹2,078.50ರಷ್ಟಿದ್ದ ದರ ಇದೀಗ ₹3,071.5ಗೆ ತಲುಪಿದೆ. ಚುನಾವಣೆ ಅವಧಿಯಲ್ಲಿ ಮೋದಿ ಸರ್ಕಾರವು ಉದ್ದೇಶಪೂರ್ವಕವಾಗಿ ವಾಣಿಜ್ಯ ಬಳಕೆಯ ಗ್ಯಾಸ್ ಬೆಲೆ ಏರಿಕೆಯನ್ನು ತಡೆದಿತ್ತು ಎಂಬುದಕ್ಕೆ ದಿಢೀರನೆ ಇಷ್ಟು ಪ್ರಮಾಣದಲ್ಲಿ ಏರಿಕೆ ಮಾಡಿರುವುದು ಸಾಕ್ಷಿಯಾಗಿದೆ. ಕೇವಲ 4 ತಿಂಗಳ ಅವಧಿಯಲ್ಲಿ ಮೋದಿ ಸರ್ಕಾರ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರವನ್ನು 6 ಬಾರಿ ಏರಿಕೆ ಮಾಡಿದ್ದು, ಒಟ್ಟು ₹1,518 ಹೊರೆಯನ್ನು ಬಳಕೆದಾರರ ಮೇಲೆ ಹೊರಿಸಿದಲ್ಲದೆ, ಇದೊಂದು ರೀತಿಯಲ್ಲಿ ಅಧಿಕೃತ ಲೂಟಿಯೇ ಹೊರತು ಆಡಳಿತದ ಕ್ರಮವಲ್ಲ ಎಂದು ಕಿಡಿ ಕಾರಿದ್ದಾರೆ.
ಇನ್ನೂ ನಮ್ಮ ದೇಶದ ಆರ್ಥಿಕತೆಗೆ ವಿದೇಶಾಂಗ ನೀತಿಯು ಶ್ರೀರಕ್ಷೆಯಂತಿರಬೇಕು. ಆದರೆ ಮೋದಿ ಸರ್ಕಾರದ ಟೊಳ್ಳು ವಿದೇಶಾಂಗ ನೀತಿಯಿಂದಾಗಿ ಜನಸಾಮಾನ್ಯರು ಸಂಕಷ್ಟ ಅನುಭವಿಸುವಂತಾಗಿದೆ. ವಾಣಿಜ್ಯ ಗ್ಯಾಸ್ ದರ ಏರಿಕೆಯಿಂದ ಕೇವಲ ವ್ಯಾಪಾರಸ್ಥರು ಮಾತ್ರ ಸಂಕಷ್ಟಕ್ಕೆ ಒಳಗಾಗುವುದಿಲ್ಲ, ಅಲ್ಲದೆ ದೇಶದ ಪ್ರತಿಯೊಂದು ಮನೆಯ ಮೇಲೂ ದರ ಏರಿಕೆಯ ಪರಿಣಾಮ ಬೀರುತ್ತದೆ. ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಸಣ್ಣಪುಟ್ಟ ಕ್ಯಾಂಟೀನ್‌ಗಳು ಹಾಗೂ ಕೆಟರಿಂಗ್ ಸೇವೆಗಳಿಗೆ ತಮ್ಮ ಆಹಾರ ಪದಾರ್ಥಗಳ ಮೇಲೆ ದರವನ್ನು ಹೆಚ್ಚಿಸುವುದು ಅನಿವಾರ್ಯವಾಗುತ್ತದೆ.
ಇದರಿಂದ ಗ್ರಾಹಕರು ದೈನಂದಿನ ಊಟ-ಉಪಹಾರಗಳಿಗೆ ಹೆಚ್ಚು ಹಣಕೊಡುವ ಪರಿಸ್ಥಿತಿ ಬರುತ್ತದೆ. ನಗರದ ಕಾರ್ಮಿಕರು, ದಿನಗೂಲಿ ಕಾರ್ಮಿಕರು ಮತ್ತು ಸಣ್ಣ ಉದ್ಯಮಗಳ ಮಾಲೀಕರು ಹೆಚ್ಚು ಸಂಕಷ್ಟ ಅನುಭವಿಸಬೇಕಾಗುತ್ತದೆ. ಒಂದು ಲೋಟ ಟೀ ಯಿಂದ ಒಂದು ಸರಳ ಊಟದವರೆಗೆ, ಎಲ್ಲವೂ ದುಬಾರಿಯಾಗುತ್ತದೆ ಎಂದಿದ್ದಾರೆ.
ಇನ್ನು ಕಾರ್ಮಿಕರ ದಿನದ ಕೊಡುಗೆ ಎಂಬಂತೆ ಮೋದಿಯವರು ವಾಣಿಜ್ಯ ಬಳಕೆಯ ಸಿಲಿಂಡರ್ ದರ ಏರಿಸುವ ಮೂಲಕ ಶ್ರಮಿಕ ವರ್ಗಕ್ಕೆ ಬರೆ ಎಳೆದಿದ್ದು, ಒಂದೆಡೆ ದರಗಳು ದುಬಾರಿಯಾದರೆ, ಮತ್ತೊಂದೆಡೆ ಆದಾಯ ಕ್ಷೀಣಿಸುತ್ತಿವೆ.
ದೈನಂದಿನ ಜೀವನ ಮತ್ತಷ್ಟು ದುಸ್ತರವಾಗುತ್ತಿದೆ. ಕಾರ್ಮಿಕರು ಕೇಂದ್ರ ಸರ್ಕಾರದ ಬಳಿ ಘನತೆಯ ಹಾಗೂ ನೆಮ್ಮದಿಯ ಬದುಕನ್ನು ಕಲ್ಪಿಸುವಂತೆ ಕೇಳಿದರೆ ಬೆಲೆಯೇರಿಕೆ ಮತ್ತು ಸಮರ್ಥನೆಯ ಉತ್ತರವನ್ನು ಕೊಡುತ್ತಿದೆ. ಇದು ಕೇವಲ ಆರಂಭವಷ್ಟೇ, ಇಂತಹ ಮತ್ತಷ್ಟು ಬೆಲೆ ಏರಿಕೆಯ ಹೊಡೆತಗಳು ಅಪ್ಪಳಿಸಲಿವೆ, ಅದರ ಹೊರೆಯನ್ನು ನಾಗರಿಕರೇ ಹೊತ್ತುಕೊಳ್ಳುವಂತಾಗಲಿದೆ. ಇದು ಮೋದಿ ಮಾದರಿಯ ಆಡಳಿತವಾಗಿದೆ. ಚುನಾವಣೆಯಲ್ಲಿ ಜನರ ದಾರಿ ತಪ್ಪಿಸುವುದು, ಬಳಿಕ ಅವರ ಮೇಲೆ ಹೊರೆ ಹೊರಿಸುವುದು ಮೋದಿಯವರ ಸೂತ್ರವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.



