ಭೋಪಾಲ್: ಮಧ್ಯಪ್ರದೇಶದ ನರ್ಮದಾ ನದಿಯಲ್ಲಿ ಗುರುವಾರ ಸಂಭವಿಸಿದ ಭೀಕರ ಕ್ರೂಸ್ ಬೋಟ್ ದುರಂತದಲ್ಲಿ 9 ಮಂದಿ ಪ್ರಾಣ ಕಳೆದುಕೊಂಡ ಘಟನೆಗೆ ಸಂಬಂಧಿಸಿದಂತೆ, ಬೋಟ್ ಚಾಲಕ ಮಹೇಶ್ ಪಟೇಲ್ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ. ಘಟನೆಯ ಕುರಿತು ಆಘಾತ ವ್ಯಕ್ತಪಡಿಸಿರುವ ಅವರು, ಅಂದು ನಡೆದ ಭೀಕರ ಕ್ಷಣಗಳನ್ನು ವಿವರಿಸಿದ್ದಾರೆ.
ಈ ಭೀಕರ ಘಟನೆ ಬಗ್ಗೆ ಮಾತನಾಡಿದ ಬೋಟ್ ಚಾಲಕ ಮಹೇಶ್ ಪಟೇಲ್ ಖಮರಿಯಾ ದ್ವೀಪದಿಂದ ಹೊರಟಾಗ ಹವಾಮಾನ ಸಹಜವಾಗಿತ್ತು. ಹವಾಮಾನ ವೈಪರೀತ್ಯದ ಬಗ್ಗೆ ನಮಗೆ ಯಾವುದೇ ಮುನ್ಸೂಚನೆ ಅಥವಾ ಎಚ್ಚರಿಕೆ ಸಿಕ್ಕಿರಲಿಲ್ಲ. ನದಿಯ ಮಧ್ಯಭಾಗ ತಲುಪುತ್ತಿದ್ದಂತೆ ತೀವ್ರ ಗಾಳಿ ಬೀಸತೊಡಗಿತು. ಅಲೆಗಳು ದೋಣಿಗೆ ಅಪ್ಪಳಿಸಿದಾಗ ಕೂಡಲೇ ದಡದತ್ತ ಹಿಂತಿರುಗಲು ನಿರ್ಧರಿಸಿದೆ. ಆದರೆ ಅಷ್ಟರಲ್ಲೇ ಎಂಜಿನ್‌ಗೆ ನೀರು ನುಗ್ಗಿ ನಿಯಂತ್ರಣ ತಪ್ಪಿತು ಎಂದು ತಮ,ಮ ಅಳಲು ತೋಡಿಕೊಂಡಿದ್ದಾರೆ. ದೋಣಿ ಮುಳುಗುತ್ತಿದೆ ಎಂದು ತಿಳಿದಾಗ ಪ್ರಯಾಣಿಕರನ್ನು ರಕ್ಷಿಸಲು ನನ್ನ ಶಕ್ತಿ ಮೀರಿ ಪ್ರಯತ್ನಿಸಿದೆ. ಆದರೆ 9 ಮಂದಿ ಸಾವನ್ನಪ್ಪಿದ್ದು ನನಗೆ ಅತೀವ ನೋವು ತಂದಿದೆ, ಇದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ ಎಂದರು.
ದುರಂತದ ವೇಳೆ ಸಿಬ್ಬಂದಿಗಳು ಲೈಫ್ ಜಾಕೆಟ್‌ಗಳನ್ನು ಬಿಚ್ಚುತ್ತಿರುವ ವಿಡಿಯೋ ವೈರಲ್ ಆಗಿರುವ ಬಗ್ಗೆ ಉತ್ತರಿಸಿದ ಪಟೇಲ್, ಪ್ರವಾಸಿಗರು ದೋಣಿಯಲ್ಲಿ ಡ್ಯಾನ್ಸ್ ಮಾಡುತ್ತಾ ಸಂಭ್ರಮಿಸುತ್ತಿದ್ದರು. ಆರಂಭದಲ್ಲೇ ನಾವು ಲೈಫ್ ಜಾಕೆಟ್ ಧರಿಸುವಂತೆ ಸೂಚಿಸಿದರೂ ಅವರು ಅದನ್ನು ನಿರಾಕರಿಸಿದ್ದರು ಎಂದು ಹೇಳಿದ್ದಾರೆ.
ದುರಂತದ ಬೆನ್ನಲ್ಲೇ ಚಾಲಕ ಮಹೇಶ್ ಪಟೇಲ್, ಸಹಾಯಕ ಛೋಟೆಲಾಲ್ ಗೊಂಡ್ ಮತ್ತು ಟಿಕೆಟ್ ಕೌಂಟರ್ ಇನ್‌ಚಾರ್ಜ್ ಬ್ರಿಜೇಂದ್ರ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ನಾವು ಪಡೆಯುತ್ತಿದ್ದ ಅಲ್ಪ ಸಂಬಳದಲ್ಲೇ ಕುಟುಂಬ ನಡೆಯುತ್ತಿತ್ತು. ಈಗ ಕೆಲಸ ಹೋದರೆ ನಮ್ಮ ಗತಿಯೇನು ? ಘಟನೆಯ ಆಘಾತದಿಂದ ನನಗೆ ನಿದ್ರೆ, ಊಟ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪಟೇಲ್ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಧ್ಯಪ್ರದೇಶದ ಪ್ರವಾಸೋದ್ಯಮ ಸಚಿವ ಧರ್ಮೇಂದ್ರ ಭಾವ್ ಸಿಂಗ್, ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲಾಗುವುದು. ಬದುಕುಳಿದವರು ಎತ್ತಿರುವ ಲೈಫ್ ಜಾಕೆಟ್ ಕೊರತೆಯ ಬಗ್ಗೆಯೂ ಗಂಭೀರವಾಗಿ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.



