ಬೆಂಗಳೂರು : ಶೃಂಗೇರಿ ಕ್ಷೇತ್ರದಲ್ಲಿ ನಡೆದ ಅಂಚೆ ಮತಗಳ ಮರುಎಣಿಕೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪಗಳನ್ನು ಹೊರಿಸಿದ್ದು, ಬಿಜೆಪಿ ನಾಯಕರು ಕ್ರಿಮಿನಲ್ ಪಿತೂರಿ ನಡೆಸಿ ಮತಪತ್ರಗಳನ್ನು ತಿದ್ದುಪಡಿ ಮಾಡಿ “ವೋಟ್ ಚೋರಿ” ಮಾಡಿದ್ದಾರೆ ಎಂದು ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೃಂಗೇರಿಯಲ್ಲಿ ಅಂಚೆ ಮತಗಳ ಮರು ಎಣಿಕೆ ಆಯಿತು. ಕೋರ್ಟ್ ಆದೇಶದ ಮೇರೆಗೆ ಅಂಚೆ ಮತಗಳ ಮರುಎಣಿಕೆ ನಡೆದ ವಿಚಾರವನ್ನು ವಿವರಿಸಿದರು. 2023ರ ಚುನಾವಣೆಯಲ್ಲಿ ರಾಜೇ ಗೌಡ 201 ಮತಗಳ ಅಂತರದಿಂದ ಗೆದ್ದಿದ್ದರು. ಆದರೆ, ಬಿಜೆಪಿ ಅಭ್ಯರ್ಥಿ ಜೀವರಾಜ್ ಮರುಎಣಿಕೆಗೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, 2026 ಮಾರ್ಚ್ 6ರಂದು ಮರುಎಣಿಕೆಗೆ ಆದೇಶ ನೀಡಲಾಗಿತ್ತು.
ಮೇ 2ರಂದು ನಡೆದ ಮರುಎಣಿಕೆಯಲ್ಲಿ ಅನೇಕ ಅಂಚೆ ಮತಗಳನ್ನು ಅಮಾನ್ಯಗೊಳಿಸಲಾಗಿದೆ. ವಿಶೇಷವಾಗಿ ರಾಜೇಗೌಡ ಅವರಿಗೆ ಬಂದಿದ್ದ 255 ಮತಗಳನ್ನು ಅಮಾನ್ಯಗೊಳಿಸಿರುವುದು ಅನುಮಾನಾಸ್ಪದ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅಲ್ಲದೆ 2023ರಲ್ಲಿ ಮಾನ್ಯವಾಗಿದ್ದ ಮತಗಳು ಈಗ ಏಕೆ ಅಮಾನ್ಯವಾಗಿವೆ ಎಂಬುದನ್ನು ಪ್ರಶ್ನಿಸಿದರು.
ರಾಜೇಗೌಡರಿಗೆ ಬಿದ್ದ 255 ಮತ ಇನ್ ವ್ಯಾಲಿಡ್ ಆಗಿರೋದನ್ನ ವ್ಯವಸ್ಥಿತವಾಗಿ ತಿದ್ದಲಾಗಿದೆ. ಜೀವರಾಜ್ 201 ರಲ್ಲಿ ಸೋತಿದ್ರು. ಮರು ಎಣಿಕೆ ಆದ ಮೇಲೆ 52 ಮತ ಜಾಸ್ತಿ ಬಂದಿದೆ. ನಾನು ಅಧಿಕಾರಿಗಳ ಜೊತೆ ಮಾತಾಡಿದೆ. ಚುನಾವಣೆ ಎಕ್ಸ್ ಪರ್ಟ್ ಗಳ ಜೊತೆ ಮಾತಾಡಿದೆ. ಎಣಿಕೆ ಆದ ಮೇಲೆ ಎಲ್ಲಾ ದಾಖಲಾತಿಗಳನ್ನ ಟ್ರಂಕ್ ನಲ್ಲಿ ಇಟ್ಟು ಕಳಿಸ್ತಾರೆ. ಆಗ ಅಧಿಕಾರದಲ್ಲಿ ಇದ್ದ ಬಿಜೆಪಿ ಅವರು ಪ್ರಭಾವ ಬಳಿಸಿ, ಅಧಿಕಾರ ಬಳಸಿ ಸಿಬ್ಬಂದಿ ಮೂಲಕ ಟ್ರಂಕ್ ನಲ್ಲಿ ಇದ್ದ ಪತ್ರಗಳನ್ನ ತಿದ್ದಿರುವುದು ಖಚಿತವಾಗಿದೆ, ಇದು ಕ್ರಿಮಿನಲ್ ಅಪರಾಧ ಎಂದು ಬಾಂಬ್ ಸಿಡಿಸಿದರು.
ರಾಜೇಗೌಡರಿಗೆ 3 ನೇ ಸುತ್ತಿನಲ್ಲಿ ಲಭಿಸಿದ 170 ಅಂಚೆ ಮತಗಳು ಅಷ್ಟು ಮತ ಇನ್ ವ್ಯಾಲಿಡ್ ಆಗಿವೆ. 2023 ರಲ್ಲಿ ಆ ಮತಗಳು ವ್ಯಾಲಿಡ್ ಆಗಿತ್ತು. ಹಣ್ಣು ತಿಂದವ ತಪ್ಪಿಸಿಕೊಂಡ, ಸಿಪ್ಪೆ ತಿಂದವ ಸಿಕ್ಕಿ ಹಾಕಿಕೊಂಡ ಅನ್ನೋ ಗಾದೆ ಮಾತಿದೆ. ಕೋತಿ ತಾನು ತಿಂದು ಮೇಕೆ ಬಾಯಿಗೆ ಒರೆಸಿದಂತೆ, ಇದು ಬಿಜೆಪಿ ಮಾಡಿರೋ ಕೆಲಸ. ಕೇಂದ್ರದ ಮಂತ್ರಿ ಜೋಶಿ, ಶೋಭಾ ಕರಂದ್ಲಾಜೆ, ಅಶೋಕ್ ಸಮರ್ಥನೆ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಲೇವಡಿ ಮಾಡಿದರು.
ಇದಲ್ಲದೆ, ಮತಪತ್ರಗಳಲ್ಲಿ ಬಳಕೆಯಾದ ಮಸಿ (ಇಂಕ್)ಯಲ್ಲೂ ವ್ಯತ್ಯಾಸ ಕಂಡುಬಂದಿದ್ದು, ಇದನ್ನು ಫಾರೆನ್ಸಿಕ್ ಪರೀಕ್ಷೆಗೆ ಒಳಪಡಿಸಬೇಕಿತ್ತು ಎಂದು ಹೇಳಿದರು. ಬಿಜೆಪಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಮೇಲೆ ನಂಬಿಕೆ ಇಲ್ಲದ ಕಾರಣ ಇಂತಹ ಕ್ರಮಗಳಿಗೆ ಮುಂದಾಗುತ್ತದೆ ಎಂದು ತೀವ್ರ ಟೀಕೆ ಮಾಡಿದರು. ಬಿಜೆಪಿ ಅವರಿಗೆ ಪ್ರಜಾಪ್ರಭುತ್ವದಲ್ಲಿ, ಸಂವಿಧಾನದಲ್ಲಿ ನಂಬಿಕೆ ಇಲ್ಲದೇ ಇರೋರು. ನಿಷ್ಪಕ್ಷಪಾತ ಚುನಾವಣೆಯಲ್ಲಿ ಅವರಿಗೆ ನಂಬಿಕೆ ಇಲ್ಲ. ಹಾಗಾಗಿ ಬಿಜೆಪಿ ಅವರು ಇಂತಹ ಅಪರಾಧ ಮಾಡೋಕೆ ಹಿಂದೆ ಮುಂದೆ ನೋಡಲ್ಲ ಎಂದು ಹೇಳಿದರು. ಸದ್ಯ ಈ ಸಂಬಂಧ ರಾಜೇಗೌಡ ಈಗಾಗಲೇ ದೂರು ಸಲ್ಲಿಸಿದ್ದು, ಮುಂದಿನ ಕಾನೂನು ಹೋರಾಟದ ಬಗ್ಗೆ ನಿರೀಕ್ಷೆ ವ್ಯಕ್ತಪಡಿಸಲಾಗಿದೆ.



