ಕೋಲ್ಕತ್ತಾ: 15 ವರ್ಷಗಳ ಮಮತಾ ಬ್ಯಾನರ್ಜಿ ಆಡಳಿತವನ್ನ ಕೊನೆಗೊಳಿಸಿ ಅಧಿಕೃತವಾಗಿ ಮೇ 9ರಂದು ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರದ ನೂತನ ಸಿಎಂ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಬಿಜೆಪಿ ಪಶ್ಚಿಮ ಬಂಗಾಳ ರಾಜ್ಯಾಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಅವರು ಈ ಕುರಿತು ಮಾಹಿತಿ ನೀಡಿದ್ದು, ಮೇ 9ರಂದು ರವೀಂದ್ರನಾಥ ಠ್ಯಾಗೋರ್ ಅವರ ಜನ್ಮದಿನವಿದ್ದು, ಅಂದೇ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚಿಸಲು ನಿರ್ಧರಿಸಿದೆ. ಪ್ರಮಾಣ ವಚನ ಸಮಾರಂಭಕ್ಕೆ ಎನ್‌ಡಿಎ ಆಡಳಿತವಿರುವ ಎಲ್ಲ ರಾಜ್ಯಗಳ ಸಿಎಂಗಳಿಗೆ ಆಹ್ವಾನಿಸಿದ್ದಾರೆ ಎಂದು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಬಿಜೆಪಿಯು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಅನ್ನು ಬದಿಗೊತ್ತಿ, ಮಮತಾ ಬ್ಯಾನರ್ಜಿಯವರ 15 ವರ್ಷಗಳ ಅಧಿಪತ್ಯವನ್ನು ಕೊನೆಗೊಳಿಸಿದೆ. ಈ ಮೂಲಕ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯು ಮೊದಲ ಬಾರಿಗೆ ಸರ್ಕಾರ ರಚಿಸಲು ಸಜ್ಜಾಗಿದೆ.
ಪಶ್ಚಿಮ ಬಂಗಾಳದ ಈ ಅಭೂತಪೂರ್ವ ಗೆಲುವಿನ ಬಳಿಕ ಪ್ರತಿಕ್ರಿಯಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಪಶ್ಚಿಮ ಬಂಗಾಳದ ಗೆಲುವು ಐತಿಹಾಸಿಕ ಎಂದಿದ್ದರು. ಈ ಜನಾದೇಶವು ಜನರ ಬದಲಾವಣೆ ಮತ್ತು ಭಯದಿಂದ ಮುಕ್ತ ಭವಿಷ್ಯದ ಬಯಕೆಯನ್ನು ಪ್ರತಿಬಿಂಬಿಸುತ್ತದೆ. ಈ. ಫಲಿತಾಂಶದ ಹಿಂದೆ ಮಹಿಳಾ ಮತದಾರರು ನಿರ್ಣಾಯಕ ಶಕ್ತಿಯಿದೆ. ಜೊತೆಗೆ ರಾಜಕೀಯ ಹಿಂಸಾಚಾರವನ್ನು ಕೊನೆಗಾಣಿಸಲು ಜನರು ನಿರ್ಧರಿಸಿದ್ದಾರೆ ಎಂದಿದ್ದರು.
294 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚಿಸಲು 148 ಬಹುಮತದ ಅವಶ್ಯಕತೆಯಿದೆ. ಈ ಪೈಕಿ 204 ಕ್ಷೇತ್ರಗಳಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ.



