ಚೆನ್ನೈ : ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ದಳಪತಿ ವಿಜಯ್ ಅವರ ಟಿವಿಕೆ ಪಕ್ಷವು ಮೊದಲ ಪ್ರಯತ್ನದಲ್ಲೇ ದೊಡ್ಡ ಮಟ್ಟದ ಸಂಚಲನ ಮೂಡಿಸಿದ್ದು, ಈ ಬಾರಿ ವಿಜಯ್ ಅವರ ಪಕ್ಷದಿಂದ ಕನ್ನಡಿಗರೊಬ್ಬರು ವಿಜಯ ಪತಾಕೆ ಹಾರಿಸಿರುವುದು ವಿಶೇಷವಾಗಿದೆ.
ತಮಿಳುನಾಡಿನ ಮೆಟ್ಟುಪಾಳ್ಯಂ ವಿಧಾನಸಭಾ ಕ್ಷೇತ್ರದಿಂದ ಸುನೀಲ್ ಆನಂದ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಸುನೀಲ್ ಆನಂದ್ ಅವರು ಮೂಲತಃ ಕರ್ನಾಟಕದ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ವಡಕೆಘಟ್ಟ ಗ್ರಾಮದವರಾಗಿದ್ಧಾರೆ. ಸುಮಾರು 96 ವರ್ಷಗಳ ಹಿಂದೆ ರಾಜ್ಯದಲ್ಲಿ ಸಂಭವಿಸಿದ ಭೀಕರ ಬರಗಾಲದ ಸಮಯದಲ್ಲಿ ಬದುಕು ಕಟ್ಟಿಕೊಳ್ಳಲು ಸುನೀಲ್ ಅವರ ಮುತ್ತಾತ ಬೋರೇಗೌಡ ಅವರು ಊರು ಬಿಟ್ಟು ತಮಿಳುನಾಡಿಗೆ ವಲಸೆ ಹೋಗಿದ್ದರು.
ಅಂದು ಉದ್ಯಮ ಅರಸಿ ಹೋದ ಕುಟುಂಬದ ನಾಲ್ಕನೇ ತಲೆಮಾರಿನ ಸುನೀಲ್ ಆನಂದ್ ಈಗ ತಮಿಳುನಾಡು ರಾಜಕೀಯದಲ್ಲಿ ಮಿಂಚುತ್ತಿದ್ದಾರೆ. ತಮಿಳುನಾಡಿನಲ್ಲೇ ಹುಟ್ಟಿ ಬೆಳೆದಿದ್ದರೂ ಸುನೀಲ್ ಅವರು ತಮ್ಮ ತಾತನ ಊರಾದ ವಡಕೆಘಟ್ಟವನ್ನು ಮರೆತಿಲ್ಲ.
ಪ್ರತಿ ವರ್ಷ ತಪ್ಪದೇ ಗ್ರಾಮಕ್ಕೆ ಭೇಟಿ ನೀಡುವ ಇವರು, ಈಗ ಶಾಸಕರಾಗಿ ಆಯ್ಕೆಯಾಗುವ ಮೂಲಕ ವಲಸೆ ಹೋದ ಕನ್ನಡಿಗರು ಪರಭಾಷೆಯ ಮಣ್ಣಿನಲ್ಲೂ ಯಶಸ್ಸು ಗಳಿಸಬಹುದು ಎಂಬುದನ್ನು ಸಾಬೀತುಪಡಿಸಿದ್ದಾರೆ. ದಳಪತಿ ವಿಜಯ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಇವರ ಗೆಲುವು ಗಡಿಭಾಗದ ಕನ್ನಡಿಗರಲ್ಲಿ ಹೊಸ ಉತ್ಸಾಹ ತುಂಬಿದೆ.



