Wednesday, May 13, 2026
Google search engine

Homeಸ್ಥಳೀಯನೀಟ್ ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಕೇಂದ್ರ ವಿಫಲ : ಮಧು ಬಂಗಾರಪ್ಪ

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಕೇಂದ್ರ ವಿಫಲ : ಮಧು ಬಂಗಾರಪ್ಪ

ಬೆಂಗಳೂರು : ಕೇಂದ್ರ ಸರ್ಕಾರವು ನೀಟ್ ಯುಜಿ 2026 ಪರೀಕ್ಷೆಯನ್ನು ರದ್ದುಗೊಳಿಸಿ, ಮರುಪರೀಕ್ಷೆಗೆ ಆದೇಶಿಸಿರುವ ಹಾಗೂ ಅಕ್ರಮಗಳ ಕುರಿತು ಸಿಬಿಐ ತನಿಖೆಗೆ ಸೂಚಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಶ್ರೀ ಎಸ್ ಮಧು ಬಂಗಾರಪ್ಪ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಪರೀಕ್ಷಾ ವ್ಯವಸ್ಥೆಯು ಪದೇ ಪದೇ ಹಳ್ಳ ಹಿಡಿಯುತ್ತಿರುವುದು ವಿದ್ಯಾರ್ಥಿಗಳ ಮಾನಸಿಕ ಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ವರ್ಷಗಟ್ಟಲೆ ಹಗಲಿರುಳು ಶ್ರಮಪಟ್ಟು ಪರೀಕ್ಷೆ ಬರೆದಿದ್ದ ಲಕ್ಷಾಂತರ ಮಕ್ಕಳ ಮೇಲೆ ಈ ದಿಢೀರ್ ‘ಮರುಪರೀಕ್ಷೆ’ಯ ನಿರ್ಧಾರವು ಗದಾಪ್ರಹಾರದಂತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

“ನಾವು ಶಾಲಾ ಮಟ್ಟದಲ್ಲಿ ಮಕ್ಕಳ ಶೈಕ್ಷಣಿಕ ಹಾಗೂ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ. ಆದರೆ, ಕೇಂದ್ರ ಸರ್ಕಾರದ ಇಂತಹ ಬೇಜವಾಬ್ದಾರಿಯುತ ನಿರ್ಧಾರಗಳು ಮಕ್ಕಳನ್ನು ಮತ್ತು ಪೋಷಕರನ್ನು ಹತಾಶೆಯ ಕೂಪಕ್ಕೆ ತಳ್ಳುತ್ತಿವೆ,” ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಆದ್ಯತೆಗಳ ಕುರಿತು ತೀವ್ರ ಅಸಮಾಧಾನ ಹೊರಹಾಕಿದ ಸಚಿವರು, “ದೇಶದ ಜನರಿಗೆ ಮನೆಯಿಂದಲೇ ಕೆಲಸ ಮಾಡಿ ಅಥವಾ ಸಾರ್ವಜನಿಕ ಸಾರಿಗೆ ಬಳಸಿ ಇಂಧನ ಉಳಿಸಿ ಎಂದು ದೊಡ್ಡ ದೊಡ್ಡ ಬುದ್ಧಿಮಾತುಗಳನ್ನು ಹೇಳುವ ಕೇಂದ್ರ ಸರ್ಕಾರಕ್ಕೆ, ಮೊದಲು ತನ್ನ ಮೂಲ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲವೇ? ದೇಶದ ಜನರಿಗೆ ಜೀವನಶೈಲಿಯ ಪಾಠ ಮಾಡುವ ಮೊದಲು, ಕನಿಷ್ಠ ಒಂದು ನೀಟ್ ಪರೀಕ್ಷೆಯನ್ನು ಪ್ರಶ್ನೆಪತ್ರಿಕೆ ಸೋರಿಕೆಯಾಗದಂತೆ ನಡೆಸುವ ಪ್ರಾಥಮಿಕ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ತೋರಲಿ,” ಎಂದು ಅವರು ಹೇಳಿದರು.

ಇದೇ ವೇಳೆ, ಈ ಗಂಭೀರ ವಿಚಾರದಲ್ಲಿ ರಾಜ್ಯ ಬಿಜೆಪಿ ನಾಯಕರ ಮೌನವನ್ನೂ ಅವರು ಕಟುವಾಗಿ ಪ್ರಶ್ನಿಸಿದರು. “ರಾಜ್ಯದಲ್ಲಿ ಸಣ್ಣಪುಟ್ಟ ವಿಚಾರಗಳಿಗೂ ರಾಷ್ಟ್ರೀಯ ಹಿತಾಸಕ್ತಿಯ ಬಗ್ಗೆ ಭಾಷಣ ಮಾಡುವ ಸ್ಥಳೀಯ ಬಿಜೆಪಿ ನಾಯಕರು, ಕೇಂದ್ರದ ಈ ಬೃಹತ್ ವೈಫಲ್ಯದ ಬಗ್ಗೆ ಈಗೇಕೆ ದನಿ ಎತ್ತುತ್ತಿಲ್ಲ? ಪ್ರಶ್ನೆಪತ್ರಿಕೆ ಸೋರಿಕೆಯಂತಹ ಹಗರಣಗಳು ಪದೇ ಪದೇ ಸರಣಿಯಂತೆ ನಡೆಯುತ್ತಿದ್ದರೂ, ಕೇಂದ್ರದ ಮೇಲೆ ಒತ್ತಡ ತರುವಲ್ಲಿ ಸ್ಥಳೀಯ ಬಿಜೆಪಿ ನಾಯಕರು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಇದು ಕೇವಲ ಒಂದು ಪರೀಕ್ಷೆಯ ವಿಚಾರವಲ್ಲ, ಬದಲಾಗಿ ರಾಜ್ಯದ ಸಾವಿರಾರು ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆಯಾಗಿದೆ,” ಎಂದು ಅವರು ಗುಡುಗಿದರು.

“ಕೇಂದ್ರ ಸರ್ಕಾರವು ಕೇವಲ ಸಿಬಿಐ ತನಿಖೆಗೆ ಆದೇಶಿಸಿ ಕೈತೊಳೆದುಕೊಂಡರೆ ಸಾಲದು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಭದ್ರವಾದ ಹಾಗೂ ಪಾರದರ್ಶಕವಾದ ಪರೀಕ್ಷಾ ವ್ಯವಸ್ಥೆಯೊಂದನ್ನು ರೂಪಿಸಬೇಕು. ಇಲ್ಲವಾದರೆ ಇಡೀ ಪರೀಕ್ಷಾ ಪದ್ಧತಿಯ ಮೇಲೆಯೇ ಜನಸಾಮಾನ್ಯರಿಗೆ ಇರುವ ನಂಬಿಕೆ ಸಂಪೂರ್ಣವಾಗಿ ನಾಶವಾಗಲಿದೆ,” ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular