ನವದೆಹಲಿ : ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಸೋಲಿನ ನಂತರ ಸನ್‌ರೈಸರ್ಸ್ ಹೈದರಾಬಾದ್ ನಾಯಕ ಪ್ಯಾಟ್ ಕಮಿನ್ಸ್ ತಮ್ಮ ತಂಡದ ಸೋಲಿಗೆ ಪ್ರಮುಖ ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ. ಇದೇ ವೇಳೆ ಅವರು ರಾಜಸ್ಥಾನ್ ರಾಯಲ್ಸ್ ತಂಡದ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಬಿರುಗಾಳಿಯಂತಹ ಬ್ಯಾಟಿಂಗ್ ಅನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ವೈಭವ್ ಅವರ ಅದ್ಭುತ ಇನ್ನಿಂಗ್ಸ್ ಹೈದರಾಬಾದ್ ಕೈಯಿಂದ ಪಂದ್ಯವನ್ನು ಕಸಿದುಕೊಂಡಿತು. ಕೇವಲ 29 ಎಸೆತಗಳಲ್ಲಿ 97 ರನ್ ಗಳ ಭರ್ಜರಿ ಇನ್ನಿಂಗ್ಸ್ ಆಡಿದ ವೈಭವ್, ಕ್ರಿಸ್ ಗೇಲ್ ಅವರ ಅತ್ಯಂತ ವೇಗದ ಶತಕದ ದಾಖಲೆಯನ್ನು ಕೂದಲೆಳೆಯ ಅಂತರದಲ್ಲಿ ಮಿಸ್ ಮಾಡಿಕೊಂಡರು. ಆದರೆ, ಗೇಲ್ ಅವರ 14 ವರ್ಷ ಹಳೆಯ ಮತ್ತೊಂದು ದಾಖಲೆಯನ್ನು ಅವರು ಮುರಿದಿದ್ದಾರೆ.
ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ದಾಖಲೆ ಧ್ವಂಸ!
2012ರಿಂದ ಕ್ರಿಸ್ ಗೇಲ್ ಹೆಸರಲ್ಲಿದ್ದ ‘ಒಂದು ಸೀಸನ್‌ನಲ್ಲಿ ಅತಿ ಹೆಚ್ಚು ಸಿಕ್ಸರ್’ ಬಾರಿಸಿದ ದಾಖಲೆಯನ್ನು ಇದುವರೆಗೆ ಯಾರೂ ಮುರಿಯಲು ಸಾಧ್ಯವಾಗಿರಲಿಲ್ಲ. ಆದರೆ, 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಈ ಐತಿಹಾಸಿಕ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಹೈದರಾಬಾದ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲೇ ವೈಭವ್ ಭರ್ಜರಿ 12 ಸಿಕ್ಸರ್‌ಗಳನ್ನು ಸಿಡಿಸಿದರು. ಅಂದರೆ 72 ರನ್ ಗಳನ್ನು ಅವರು ಕೇವಲ ಸಿಕ್ಸರ್‌ಗಳ ಮೂಲಕವೇ ಕಲೆಹಾಕಿದ್ದರು.
ಪಂದ್ಯದ ನಂತರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಪ್ಯಾಟ್ ಕಮಿನ್ಸ್ “ವೈಭವ್ ಸೂರ್ಯವಂಶಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು. ಪಿಚ್ ಬ್ಯಾಟಿಂಗ್ ಗೆ ಪೂರಕವಾಗಿತ್ತು. ಆದರೆ ಇಲ್ಲಿ ತಪ್ಪುಗಳಿಗೆ ಅವಕಾಶ ತುಂಬಾ ಕಡಿಮೆ ಇರುತ್ತದೆ. ನೀವು ಯಾರ್ಕರ್ ಎಸೆಯಲು ಸ್ವಲ್ಪ ಮಿಸ್ ಮಾಡಿದರೂ, ಅವರು (ವೈಭವ್) ಬೌಂಡರಿ ದಾಟಿಸಲು ಮಿಸ್ ಮಾಡುವುದಿಲ್ಲ,” ಎಂದು ಹೊಗಳಿದರು.
ನಾವು ಎಲ್ಲಿ ತಪ್ಪು ಮಾಡಿದೆವು? : ಕಮಿನ್ಸ್ ವಿಶ್ಲೇಷಣೆ
244 ರನ್ ಗಳ ಬೃಹತ್ ಗುರಿಯನ್ನು ಬೆನ್ನಟ್ಟುವ ಬಗ್ಗೆ ಮಾತನಾಡಿದ ಕಮಿನ್ಸ್, “ಇಷ್ಟು ದೊಡ್ಡ ಮೊತ್ತವನ್ನು ಬೆನ್ನಟ್ಟುವಾಗ ಎಲ್ಲವೂ ಅಂದುಕೊಂಡಂತೆ ನಡೆಯಬೇಕು. ಆದರೆ ನಾವು ತಪ್ಪು ಸಮಯದಲ್ಲಿ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡೆವು. ನಾವು ಟಾಪ್-2 ಸ್ಥಾನಕ್ಕೇರಲು ಸ್ವಲ್ಪದರಲ್ಲೇ ಮುಗ್ಗರಿಸಿದೆವು, ಆದರೆ ಆಟಗಾರರ ಶ್ರಮದ ಬಗ್ಗೆ ನನಗೆ ಹೆಮ್ಮೆಯಿದೆ,” ಎಂದರು.
ಹೈದರಾಬಾದ್ ತಂಡದ ಯುವ ಬೌಲರ್ ಗಳಾದ ಪ್ರಫುಲ್ ಮತ್ತು ಸಾಕಿಬ್ ಹುಸೇನ್ ಅವರ ಪ್ರದರ್ಶನವನ್ನು ಕಮಿನ್ಸ್ ಶ್ಲಾಘಿಸಿದರು. ನಮ್ಮ ತಂಡವು ಪ್ಲೇಆಫ್ ತಲುಪಿದ ಅತ್ಯಂತ ಕಿರಿಯ ಆಟಗಾರರನ್ನು ಹೊಂದಿದ ತಂಡಗಳಲ್ಲಿ ಒಂದಾಗಿದೆ ಮತ್ತು ಕೋಚಿಂಗ್ ಸ್ಟಾಫ್ ಹೊಸ ಪ್ರತಿಭೆಗಳನ್ನು ಹುಡುಕುವಲ್ಲಿ ಯಶಸ್ವಿಯಾಗಿದೆ ಎಂದು ಅವರು ಹೇಳಿದರು.
ಜೋಫ್ರಾ ಆರ್ಚರ್ ಬೌಲಿಂಗ್ ಕಿಚ್ಚು
ವೈಭವ್ ಅವರ ಬಿರುಗಾಳಿಯ ಬ್ಯಾಟಿಂಗ್ ನಂತರ, ರಾಜಸ್ಥಾನ್ ರಾಯಲ್ಸ್ ವೇಗಿ ಜೋಫ್ರಾ ಆರ್ಚರ್ ಬೌಲಿಂಗ್‌ನಲ್ಲಿ ಅಬ್ಬರಿಸಿದರು. ಅವರು ಪವರ್‌ಪ್ಲೇನಲ್ಲೇ ಹೈದರಾಬಾದ್ ತಂಡದ ಟಾಪ್-3 ಬ್ಯಾಟರ್‌ಗಳಾದ ಅಭಿಷೇಕ್ ಶರ್ಮಾ (0), ಇಶಾನ್ ಕಿಶನ್ (33) ಮತ್ತು ಟ್ರಾವಿಸ್ ಹೆಡ್ (17) ಅವರ ವಿಕೆಟ್ ಪಡೆದು SRH ಬೆನ್ನೆಲುಬು ಮುರಿದರು. ಹೈದರಾಬಾದ್‌ನ ಟಾಪ್ ಆರ್ಡರ್ ಕ್ಲಿಕ್ ಆಗಿದ್ದರೆ 244 ರನ್‌ಗಳ ಗುರಿ ದೊಡ್ಡದಾಗುತ್ತಿರಲಿಲ್ಲ. ಹೆಡ್ ಮತ್ತು ಇಶಾನ್ ವೇಗದ ಆರಂಭ ನೀಡಿದರೂ ಅನಗತ್ಯ ಶಾಟ್ ಬಾರಿಸಿ ಔಟಾದರು.
ಆರ್ಚರ್ 4 ಓವರ್‌ಗಳಲ್ಲಿ 58 ರನ್ ನೀಡಿ ತುಸು ದುಬಾರಿಯಾದರೂ ಪ್ರಮುಖ 3 ವಿಕೆಟ್ ಕಲೆಹಾಕಿದರು. ಉಳಿದಂತೆ ನಾಂದ್ರೆ ಬರ್ಗರ್, ಸುಶಾಂತ್ ಮಿಶ್ರಾ ಮತ್ತು ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದರೆ, ಯಶ್ ಪುಂಜಾ 1 ವಿಕೆಟ್ ಪಡೆದು ತಂಡದ ಗೆಲುವಿಗೆ ಕಾರಣರಾದರು.



