ಬೆಂಗಳೂರು : ನಗರದ ಜೆ.ಪಿ.ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಸಚಿವ ಕೃಷ್ಣ ಬೈರೇಗೌಡ ಅವರ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ರಾಜಕೀಯ ಭಿನ್ನಾಭಿಪ್ರಾಯಗಳು ಇದ್ದರೂ, ಜನಪರ ಕೆಲಸ ಮಾಡುವವರನ್ನು ಮೆಚ್ಚಲೇಬೇಕು ಎಂದು ಹೇಳಿದ ಅವರು, ಕರ್ತವ್ಯ ನಿರ್ವಹಣೆಯಲ್ಲಿ ಸಚಿವರ ಬದ್ಧತೆ ಶ್ಲಾಘನೀಯವಾಗಿದೆ ಎಂದು ಅಭಿಪ್ರಾಯಪಟ್ಟರು. ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಕೃಷ್ಣ ಬೈರೇಗೌಡ ಅವರು ಕೈಗೊಂಡಿರುವ ಹಲವು ಸುಧಾರಣಾ ಕ್ರಮಗಳನ್ನು ದೇವೇಗೌಡರು ವಿಶೇಷವಾಗಿ ಉಲ್ಲೇಖಿಸಿದರು.
ಅದರಲ್ಲೂ ಬೀದಿ ಬದಿ ವ್ಯಾಪಾರಿಗಳ ಪುನರ್ವಸತಿಗಾಗಿ ರೂಪಿಸಿರುವ ಯೋಜನೆ ಹಾಗೂ ಅವರಿಗೆ ಸೂಕ್ತ ಪರ್ಯಾಯ ಸ್ಥಳಗಳನ್ನು ಒದಗಿಸಲು ಸರ್ಕಾರ ಕೈಗೊಂಡಿರುವ ಪ್ರಯತ್ನವನ್ನು ಅವರು ಪ್ರಶಂಸಿಸಿದರು.
ಸಾಮಾನ್ಯವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಟೀಕೆ ಮಾಡುವ ದೇವೇಗೌಡರು, ಈ ಬಾರಿ ಪಕ್ಷ ಬೇಧ ಮರೆತು ಸಚಿವರ ಜನಪರ ಕಾರ್ಯವನ್ನು ಬಹಿರಂಗವಾಗಿ ಶ್ಲಾಘಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಪ್ರತಿಪಕ್ಷದ ಹಿರಿಯ ನಾಯಕರೊಬ್ಬರು ಆಡಳಿತ ಪಕ್ಷದ ಸಚಿವರ ಅಭಿವೃದ್ಧಿ ಪರ ಕಾರ್ಯವನ್ನು ಸಾರ್ವಜನಿಕವಾಗಿ ಮೆಚ್ಚಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.



