ಚಿಕ್ಕಬಳ್ಳಾಪುರ : ನಗರದ ಪಿಳ್ಳಪ್ಪ ಕಾಂಪ್ಲೆಕ್ಸ್‌ನಲ್ಲಿ ಶಾಪಿಂಗ್‌ಗೆ ಬಂದಿದ್ದ ವೇಳೆ ಮೂರು ವರ್ಷದ ಬಾಲಕಿ ಮೊದಲ ಮಹಡಿಯಿಂದ ಕೆಳಗೆ ಬಿದ್ದ ಘಟನೆ ನಡೆದಿದೆ. ಅದೃಷ್ಟವಶಾತ್ ಮಗು ಪ್ರಾಣಾಪಾಯದಿಂದ ಪಾರಾಗಿದೆ.
ತಾಲೂಕಿನ ಕೊಲುವನಹಳ್ಳಿ ಗ್ರಾಮದ ದಂಪತಿಯ ಪುತ್ರಿ ಗಗನಸಿಂಧು (3) ಅಪಘಾತಕ್ಕೊಳಗಾದ ಮಗು. ಪೋಷಕರು ಬಟ್ಟೆ ಖರೀದಿಯಲ್ಲಿ ನಿರತರಾಗಿದ್ದ ವೇಳೆ ಮಗು ಆಟವಾಡುತ್ತಾ ಅಂಗಡಿಯಿಂದ ಹೊರಗೆ ಬಂದಿದ್ದು, ಮೊದಲ ಮಹಡಿಯ ಗ್ಯಾಲರಿಯ ಗ್ರಿಲ್ ಬಳಿ ಆಟವಾಡುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದಿದೆ.
ಘಟನೆ ಕಂಡ ಕೂಡಲೇ ಅಂಗಡಿ ಸಿಬ್ಬಂದಿ ಹಾಗೂ ಪೋಷಕರು ಕೆಳಗೆ ಧಾವಿಸಿ ಬಾಲಕಿಯನ್ನು ತಕ್ಷಣ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರ ಚಿಕಿತ್ಸೆ ಬಳಿಕ ಬಾಲಕಿ ಅಪಾಯದಿಂದ ಪಾರಾಗಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳನ್ನು ಕ್ಷಣಮಾತ್ರವೂ ಒಂಟಿಯಾಗಿ ಬಿಡದೇ ನಿಗಾ ವಹಿಸುವ ಅಗತ್ಯವನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ.



