ಬೆಂಗಳೂರು : ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ನೀಡಿದ್ದ ರಾಜೀನಾಮೆ ಅಂಗೀಕಾರಗೊಂಡು, ಸಚಿವ ಸಂಪುಟವೂ ವಿಸರ್ಜನೆಗೊಂಡ ಬಳಿಕ ಹೊಸ ಸರ್ಕಾರ ರಚನೆಗೆ ದೆಹಲಿಯಲ್ಲಿ ಕಸರತ್ತು ಆರಂಭವಾಗಿವೆ. ಇತ್ತ ಬೆಂಗಳೂರಿನಲ್ಲಿಯೂ ಶಾಸಕಾಂಗ ಸಭೆಯ ತಯಾರಿ ನಡೆಯುತ್ತಿದೆ.
ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಭವನೀಯ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಬ್ಬರೂ ಪ್ರತ್ಯೇಕವಾಗಿ ದೆಹಲಿ ತಲುಪಿದ್ದು, ತಮ್ಮದೇ ಆದ ಕಾರ್ಯತಂತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಡಾ.ಜಿ.ಪರಮೇಶ್ವರ್, ಕೆ.ಜೆ.ಜಾರ್ಜ್, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ಎಚ್.ಕೆ.ಪಾಟೀಲ್, ಕೃಷ್ಣಭೈರೇಗೌಡ, ಚೆಲುವರಾಯ ಸ್ವಾಮಿ, ಈಶ್ವರ್ ಖಂಡ್ರೆ, ಶಿವರಾಜ ತಂಗಡಗಿ, ಲಕ್ಷ್ಮೀ ಹೆಬ್ಬಾಳ್ಕರ್, ಮಧುಬಂಗಾರಪ್ಪ, ಡಾ.ಎಂ.ಸಿ. ಸುಧಾಕರ್ ಅವರುಗಳು ಮುಂದುವರೆಯಲಿದ್ದಾರೆ ಎನ್ನಲಾಗುತ್ತಿದೆ.
ಕೆ.ಎಚ್.ಮುನಿಯಪ್ಪ ಅವರ ಬದಲಾಗಿ ಅವರ ಪುತ್ರಿ ರೂಪಾಕಲಾ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಎಂ.ಬಿ.ಪಾಟೀಲ್, ಜಮೀರ್ ಅಹಮದ್ ಖಾನ್, ಕೆ.ವೆಂಕಟೇಶ್, ಡಾ. ಎಚ್.ಸಿ. ಮಹದೇವಪ್ಪ, ದಿನೇಶ್ ಗುಂಡೂರಾವ್, ಶರಣಬಸಪ್ಪ ದರ್ಶನಾಪೂರ್, ಶಿವಾನಂದ ಪಾಟೀಲ್, ಆರ್.ಬಿ.ತಿಮಾಪೂರ್, ಎಸ್.ಎಸ್. ಮಲ್ಲಿಕಾರ್ಜುನ್, ಡಾ. ಶರಣ ಪ್ರಕಾಶ್‌ಪಾಟೀಲ್, ರಹೀಂಖಾನ್ ಸೇರಿದಂತೆ ಇನ್ನೂ ಕೆಲವರು ಅವಕಾಶ ವಂಚಿತರಾಗಲಿದ್ದಾರೆ ಎಂದು ತಿಳಿದು ಬಂದಿದೆ.
ಕೆ.ಎನ್. ರಾಜಣ್ಣ, ಬಿ.ನಾಗೇಂದ್ರ ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಡಿ.ಸುಧಾಕರ್ ಅಕಾಲಿಕ ನಿಧನವಾಗಿದ್ದಾರೆ. ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಸಂಪುಟ ಸೇರ್ಪಡೆಯಾಗುವ ಸಾಧ್ಯತೆ ಇದ್ದು, ರಾಮಲಿಂಗಾರೆಡ್ಡಿ, ಹೆಚ್.ಸಿ. ಮಹಾದೇವಪ್ಪ, ದಿನೇಶ್ ಗುಂಡೂರಾವ್, ಟಿ.ಬಿ. ಜಯಚಂದ್ರ, ಆರ್.ವಿ.ದೇಶಪಾಂಡೆ ಅವರ ಹೆಸರುಗಳು ಸಭಾಧ್ಯಕ್ಷ ಸ್ಥಾನಕ್ಕೆ ಕೇಳಿ ಬಂದಿವೆ.
ನಾಲ್ಕು ಉಪ ಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿಗೆ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆ. ಆದರೆ ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿಗಳ ಹುದ್ದೆ ಬೇಡ ಎಂದು ಹಠ ಹಿಡಿದಿರುವುದಾಗಿ ತಿಳಿದು ಬಂದಿದೆ.
ಇಂದು ಮಧ್ಯಾಹ್ನದವರೆಗೂ ದೆಹಲಿಯಲ್ಲಿ ನಡೆಯಲಿರುವ ಹಗ್ಗಾ-ಜಗ್ಗಾಟ ಸಂಜೆಯ ವೇಳೆಗೆ ಒಂದು ಹಂತಕ್ಕೆ ಬರಲಿದೆ.ಸಿದ್ದರಾಮಯ್ಯ ಅವರು, ಹೈಕಮಾಂಡ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿ ಮಾಡಿ, ಕೃತಜ್ಞತೆೆ ಸಲ್ಲಿಸುವ ಜೊತೆಗೆ ತಮ್ಮ ಬೆಂಬಲಿಗರ ಹಿತರಕ್ಷಣೆ ಕುರಿತು ಮಹತ್ವದ ಚರ್ಚೆ ನಡೆಸಿದ್ದಾರೆ.
ಡಿ.ಕೆ.ಶಿವಕುಮಾರ್ ಅವರು ದೆಹಲಿಯಲ್ಲಿ ಕರ್ನಾಟಕ ಭವನ ಅಥವಾ ತಮ್ಮ ಖಾಸಗಿ ನಿವಾಸದಲ್ಲಿ ಇರದೇ ರಹಸ್ಯ ಸ್ಥಳದಲ್ಲಿದ್ದು, ಸಂಪುಟ ರಚನೆಯ ಬಗ್ಗೆ ವರಿಷ್ಠ ನಾಯಕರೊಂದಿಗೆ ಚರ್ಚೆ ನಡೆಸುತ್ತಿರುವುದು ಕಂಡು ಬಂದಿದೆ.
ಇತ್ತ ಬೆಂಗಳೂರಿನಲ್ಲಿ ನಾಳೆ ಶಾಸಕಾಂಗ ಪಕ್ಷದ ಸಭೆ ನಡೆಸಲು ತಯಾರಿಗಳಾಗುತ್ತಿವೆ. ಶಾಸಕಾಂಗ ಸಭೆಯ ಬಳಿಕ ನಾಳೆಯೇ ಡಿ.ಕೆ.ಶಿವಕುಮಾರ್ ಅವರು, ರಾಜ್ಯಪಾಲರನ್ನು ಭೇಟಿ ಮಾಡಿ, ಸರ್ಕಾರ ರಚನೆಯ ಹಕ್ಕು ಪ್ರತಿಪಾದಿಸುವ ಸಾಧ್ಯತೆ ಇದೆ. ನಂತರ ಭಾನುವಾರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜೊತೆಗೆ 15 ಮಂದಿ ಸಚಿವರಾಗುವ ಸಾಧ್ಯತೆಗಳಿವೆ.
ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವರಾಗಿದ್ದ ಬಹಳಷ್ಟು ಜನರಿಗೆ ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಸಚಿವರಾಗುವ ಅವಕಾಶ ಸಿಗುವುದು ಅನುಮಾನಾಸ್ಪದವಾಗಿದೆ. ಹೀಗಾಗಿ ಕೆಲವರು ದೆಹಲಿಯಲ್ಲಿ ಬೀಡುಬಿಟ್ಟು ಅವಕಾಶ ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.
ಈವರೆಗಿನ ಬೆಳವಣಿಗೆಗಳ ಪ್ರಕಾರ ಡಿ.ಕೆ.ಶಿವಕುಮಾರ್ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಲಾಗಿದೆ. ಅದರೆ ಅದು ಕಾರ್ಯಸಾಧುವಾಗಬೇಕಾದರೆ, ತಾಂತ್ರಿಕವಾಗಿ ಶಾಸಕಾಂಗ ಸಭೆಯಲ್ಲಿ ಚುನಾಯಿತರಾಗಬೇಕಿದೆ.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಿದ್ದರಾಮಯ್ಯ ಅವರು, ನಿನ್ನೆ ಸಚಿವರ ಉಪಾಹಾರ ಕೂಟದಲ್ಲಿ ಡಿ.ಕೆ.ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಎಂದು ಹೇಳಿರುವುದಾಗಿ ಎಚ್.ಕೆ.ಪಾಟೀಲ್ ತಿಳಿಸಿದರು. ಆದರೆ, ಬಳಿಕ ಪತ್ರಿಕಾಗೋಷ್ಠಿಯಲ್ಲಿ ಸಿದ್ದರಾಮಯ್ಯ ಮಾತನಾಡುವಾಗ, ಕಾಗ್ರೆಸ್ ಹೈಕಮಾಂಡ್ ಮತ್ತು ಶಾಸಕಾಂಗ ಸಭೆ ನಿರ್ಧರಿಸಿದವರು ಮುಂದಿನ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿ ಜಾರಿಕೊಂಡರು. ಆದರೆ ಈ ಮಾತನ್ನು ಹೇಳುವಾಗ ಸಿದ್ದರಾಮಯ್ಯ ಅವರು, ಡಿ.ಕೆ.ಶಿವಕುಮಾರ್ ಅವರ ಕಡೆಗೆ ತಿರುಗಿ ನಕ್ಕಿದ್ದು, ಸೂಚ್ಯವಾಗಿತ್ತು.
ದೆಹಲಿಯಲ್ಲಿಂದು ಸಿದ್ದರಾಮಯ್ಯ ಅವರು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ ವೇಳೆ ಮುಂದಿನ ಮುಖ್ಯಮಂತ್ರಿ ಹಾಗೂ ಸಚಿವರ ಸಂಪುಟ ರಚನೆ ಕುರಿತಂತೆ ತಮ್ಮದೇ ಆದ ಅಭಿಪ್ರಾಯ ಮಂಡಿಸಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು, ಮಧ್ಯಪ್ರದೇಶದಿಂದ ನಿನ್ನೆ ವಿಶೇಷ ವಿಮಾನದಲ್ಲಿ ಆಗಮಿಸಿ, ಸಿದ್ದರಾಮಯ್ಯ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ತನ್ಮೂಲಕ ಸಂಪುಟವು ವಿಸರ್ಜನೆಗೊಂಡಿದೆ. ಇನ್ನೂ ತಡ ಮಾಡಿದರೆ, ಬೇರೆ ರೀತಿಯ ರಾಜಕೀಯ ಬೆಳವಣಿಗೆಗಳಾಗಬಹುದು ಎಂಬ ಅತಂಕ ಇರುವುದರಿಂದ ಎಲ್ಲವನ್ನೂ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಕಾಂಗ್ರೆಸ್ ನಾಯಕರು ಪ್ರಯತ್ನಿಸುತ್ತಿದ್ದಾರೆ. ಬಹುತೇಕ ಡಿ.ಕೆ.ಶಿವಕುಮಾರ್ ಇಂದು ಬೆಂಗಳೂರಿಗೆ ಮರಳುವ ಸಾಧ್ಯತೆ ಇದ್ದು, ನಾಳೆಯಿಂದಲೇ ಸರ್ಕಾರ ರಚನೆಯ ಪ್ರಕ್ರಿಯೆ ಆರಂಭಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.



