Tuesday, June 2, 2026
Google search engine

Homeದೇಶನೆದರ್‌ಲ್ಯಾಂಡ್ಸ್‌ನಿಂದ ಮರಳಿದ ಚೋಳರ ಕಾಲದ ತಾಮ್ರಪಟಗಳು; ಭಾರತದ ಪರಂಪರೆಗೆ ಗೌರವಾನ್ವಿತ ಸನ್ಮಾನ; ಪ್ರಧಾನಿ ಮೋದಿ

ನೆದರ್‌ಲ್ಯಾಂಡ್ಸ್‌ನಿಂದ ಮರಳಿದ ಚೋಳರ ಕಾಲದ ತಾಮ್ರಪಟಗಳು; ಭಾರತದ ಪರಂಪರೆಗೆ ಗೌರವಾನ್ವಿತ ಸನ್ಮಾನ; ಪ್ರಧಾನಿ ಮೋದಿ

ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ತಮ್ಮ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ 11ನೇ ಶತಮಾನದ ‘ಚೋಳರ ತಾಮ್ರಪಟಗಳ’ ಬಗ್ಗೆ ಮಾತನಾಡಿದರು. ಇವುಗಳನ್ನು ಅವರ ಇತ್ತೀಚಿನ ನೆದರ್‌ಲ್ಯಾಂಡ್ಸ್ ಪ್ರವಾಸದ ವೇಳೆ ಭಾರತಕ್ಕೆ ಮರಳಿ ತರಲಾಗಿದೆ. ಈ ‘ಚೋಳರ ತಾಮ್ರಪಟಗಳಲ್ಲಿ’ 21 ದೊಡ್ಡ ಮತ್ತು 3 ಸಣ್ಣ ಪಟ್ಟಿಗಳಿದ್ದು, ಇವುಗಳನ್ನು ಮುಖ್ಯವಾಗಿ ತಮಿಳು ಭಾಷೆಯಲ್ಲಿ ಬರೆಯಲಾಗಿದೆ. ಪ್ರತಿಯೊಬ್ಬ ಭಾರತೀಯನಿಗೂ ಇದು ಅತ್ಯಂತ ಸಂತೋಷದ ಕ್ಷಣ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಭಾರತೀಯರಿಗೆ ಹೆಮ್ಮೆಯ ಕ್ಷಣ

‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ಕಳೆದ ಕೆಲವು ದಿನಗಳ ಹಿಂದೆ ನನಗೆ ಯುರೋಪ್‌ ನ ನೆದರ್‌ಲ್ಯಾಂಡ್ಸ್‌ಗೆ ಹೋಗುವ ಅವಕಾಶ ಸಿಕ್ಕಿತ್ತು. ಅಲ್ಲಿ ನಾನು ಹಲವು ಸಭೆಗಳಲ್ಲಿ ಭಾಗವಹಿಸಿದ್ದೆ. ಅದೇ ಸಮಯದಲ್ಲಿ, ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಯಿಂದ ಬೀಗುವಂತಹ ಒಂದು ಕ್ಷಣ ಎದುರಾಯಿತು. ನೆದರ್‌ಲ್ಯಾಂಡ್ಸ್‌ನಲ್ಲಿ ಆಯೋಜಿಸಲಾಗಿದ್ದ ವಿಶೇಷ ಸಮಾರಂಭದಲ್ಲಿ ಚೋಳರ ಕಾಲದ ಪ್ರಾಚೀನ ತಾಮ್ರದ ಪಟ್ಟಿಗಳನ್ನು ಭಾರತಕ್ಕೆ ಮರಳಿ ಹಸ್ತಾಂತರಿಸಲಾಯಿತು. ಆ ಕಾರ್ಯಕ್ರಮದಲ್ಲಿ ನೆದರ್‌ಲ್ಯಾಂಡ್ಸ್ ಪ್ರಧಾನಮಂತ್ರಿಯವರೂ ಉಪಸ್ಥಿತರಿದ್ದರು. ಈ ತಾಮ್ರಪಟಗಳ ಕುರಿತು ದೇಶ-ವಿದೇಶಗಳಿಂದ ನನಗೆ ಸತತವಾಗಿ ಸಂದೇಶಗಳು ಬರುತ್ತಿವೆ. ಜನರು ಸಂತೋಷ ಮತ್ತು ಹೆಮ್ಮೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ವಿಶ್ವಾದ್ಯಂತ ಇರುವ ತಮಿಳು ಸಮುದಾಯದಲ್ಲೂ ಈ ಬಗ್ಗೆ ವಿಶೇಷ ಉತ್ಸಾಹ ಕಂಡುಬರುತ್ತಿದೆ,” ಎಂದರು.

ರಾಜೇಂದ್ರ ಚೋಳನ ಕೊಡುಗೆ ಮತ್ತು ಚೋಳರ ನೌಕಾ ಶಕ್ತಿ

‘ಚೋಳರ ತಾಮ್ರಪಟಗಳ’ ಕುರಿತು ಮಾತನಾಡುತ್ತಾ , “ಈ ತಾಮ್ರದ ಪಟ್ಟಿಗಳ ಬಗ್ಗೆ ಜನರಲ್ಲಿ ಸಾಕಷ್ಟು ಕುತೂಹಲವಿದೆ. ಆದ್ದರಿಂದ ಇಂದು ನಾನು ಇದಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಇದರಲ್ಲಿ 21 ದೊಡ್ಡ ಮತ್ತು ಮೂರು ಸಣ್ಣ ತಾಮ್ರದ ಪಟ್ಟಿಗಳಿವೆ. ಇವು ಮುಖ್ಯವಾಗಿ ರಾಜ ರಾಜೇಂದ್ರ ಚೋಳ-1 (ಮೊದಲ ರಾಜೇಂದ್ರ ಚೋಳ) ತನ್ನ ತಂದೆ ರಾಜ ರಾಜರಾಜ ಚೋಳನಿಗೆ ನೀಡಿದ್ದ ಮಾತನ್ನು ಈಡೇರಿಸಿದ್ದಕ್ಕೆ ಸಂಬಂಧಿಸಿವೆ. ಇದರಲ್ಲಿ ‘ಆನೈಮಂಗಲಂ’ ಗ್ರಾಮವನ್ನು ಬೌದ್ಧ ವಿಹಾರಕ್ಕೆ ದಾನವಾಗಿ ನೀಡಿದ ಉಲ್ಲೇಖವಿದೆ. ಈ ತಾಮ್ರಪಟಗಳಲ್ಲಿ ಚೋಳ ವಂಶದ ಸಾಧನೆಗಳ ವರ್ಣನೆಯೂ ಇದೆ. ಚೋಳ ಸಾಮ್ರಾಜ್ಯದ ನೌಕಾ ಶಕ್ತಿ ಎಷ್ಟು ಪ್ರಬಲವಾಗಿತ್ತು ಎಂಬುದನ್ನು ಇವು ತೋರಿಸುತ್ತವೆ. ಆಗ್ನೇಯ ಏಷ್ಯಾದ ದೇಶಗಳೊಂದಿಗೆ ಅವರಿಗಿದ್ದ ಸಂಬಂಧಗಳ ಮಾಹಿತಿಯೂ ಇದರಲ್ಲಿ ಸಿಗುತ್ತದೆ,” ಎಂದು ವಿವರಿಸಿದರು.

ಚೋಳ ಸಾಮ್ರಾಜ್ಯದ ಶ್ರೀಮಂತ ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ನಾವೆಲ್ಲರೂ ಹೆಮ್ಮೆಪಡುತ್ತೇವೆ. ಭಾರತದ ಇಂತಹ ಅಮೂಲ್ಯ ಪರಂಪರೆಯನ್ನು ಸಂರಕ್ಷಿಸಲು ನಮ್ಮ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಅವರು ಹೇಳಿದರು.

ಛತ್ತೀಸ್‌ಗಢದಲ್ಲಿ ಪಾಂಡುವಂಶಿ ರಾಜವಂಶದ ತಾಮ್ರಪಟಗಳು ಪತ್ತೆ

‘ಜ್ಞಾನ ಭಾರತಂ ಅಭಿಯಾನ’ದ ಅಡಿಯಲ್ಲಿ ಛತ್ತೀಸ್‌ಗಢದ ಮಲ್ಹಾರ್‌ನಲ್ಲಿಯೂ ಒಂದು ಪ್ರಮುಖ ಶೋಧನೆ ನಡೆದಿದೆ. ಇಲ್ಲಿ ಮೂರು ಅಪರೂಪದ ತಾಮ್ರಪಟಗಳು ಪತ್ತೆಯಾಗಿವೆ. ಇವು ಪಾಂಡುವಂಶಿ ರಾಜವಂಶದ ಮಹರ್ಷಿ ಬಾಲಾರ್ಜುನನ ಆಳ್ವಿಕೆಯ ಕಾಲಕ್ಕೆ ಸೇರಿದವು ಎಂದು ನಂಬಲಾಗಿದೆ. ತಜ್ಞರ ಪ್ರಕಾರ, ಈ ಶಾಸನಗಳು 6ನೇ-7ನೇ ಶತಮಾನದವಾಗಿವೆ, ಅಂದರೆ ಸುಮಾರು 1400 ರಿಂದ 1500 ವರ್ಷಗಳಷ್ಟು ಹಳೆಯದಾಗಿವೆ. ಈ ತಾಮ್ರಪಟಗಳನ್ನು ಪ್ರಾಚೀನ ಬ್ರಾಹ್ಮಿ ಲಿಪಿ ಮತ್ತು ಪಾಲಿ ಭಾಷೆಯಲ್ಲಿ ಬರೆಯಲಾಗಿದೆ. ಇವುಗಳಿಂದ ಆ ಕಾಲದ ಆಡಳಿತ ವ್ಯವಸ್ಥೆ, ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಪ್ರಮುಖ ಮಾಹಿತಿ ಲಭ್ಯವಾಗುತ್ತದೆʼ ಎಂದರು.

RELATED ARTICLES
- Advertisment -
Google search engine

Most Popular