Wednesday, June 17, 2026
Google search engine

Homeರಾಜ್ಯಖಾಸಗಿ ಫೋಟೊ, ವೀಡಿಯೊ ದುರ್ಬಳಕೆ ಪ್ರಕರಣಗಳಿಗೆ ಕಠಿಣ ಮಾರ್ಗಸೂಚಿ: ಡಿಜಿ-ಐಜಿಪಿ ಆದೇಶ

ಖಾಸಗಿ ಫೋಟೊ, ವೀಡಿಯೊ ದುರ್ಬಳಕೆ ಪ್ರಕರಣಗಳಿಗೆ ಕಠಿಣ ಮಾರ್ಗಸೂಚಿ: ಡಿಜಿ-ಐಜಿಪಿ ಆದೇಶ

ಬೆಂಗಳೂರು: ವ್ಯಕ್ತಿಗಳ ಖಾಸಗಿ ಫೋಟೊ ಹಾಗೂ ವೀಡಿಯೊಗಳನ್ನು ಅನುಮತಿಯಿಲ್ಲದೆ ಪ್ರಕಟಿಸುವ ಅಥವಾ ಪ್ರಸಾರ ಮಾಡುವ ಪ್ರಕರಣಗಳಲ್ಲಿ ಪೊಲೀಸರು ಕಡ್ಡಾಯವಾಗಿ ಅನುಸರಿಸಬೇಕಾದ ಕ್ರಮಗಳ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ-ಐಜಿಪಿ) ಡಾ. ಎಂ.ಎ. ಸಲೀಂ ಸ್ಪಷ್ಟ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕರಣಗಳಲ್ಲಿ ದೂರು ದಾಖಲಿಸಲು ವಿಳಂಬ ಅಥವಾ ನಿರಾಕರಣೆ ನಡೆದಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ಆದೇಶ ಜಾರಿಗೊಳಿಸಲಾಗಿದೆ. ಒಬ್ಬ ವ್ಯಕ್ತಿ ವೀಡಿಯೊ ಅಥವಾ ಫೋಟೊ ಚಿತ್ರೀಕರಣಕ್ಕೆ ಒಪ್ಪಿಗೆ ನೀಡಿದ್ದರೂ, ಅದನ್ನು ಹಂಚಿಕೆ ಅಥವಾ ಪ್ರಸಾರ ಮಾಡಲು ಒಪ್ಪಿಗೆ ನೀಡಿದಂತೆ ಪರಿಗಣಿಸಲಾಗುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಹೀಗಾಗಿ ಅನುಮತಿಯಿಲ್ಲದೆ ಖಾಸಗಿ ವಿಷಯವನ್ನು ಪ್ರಸಾರ ಮಾಡುವುದು ಕಾಗ್ನಿಜೆಬಲ್ ಅಪರಾಧವಾಗುತ್ತದೆ.

ಭಾರತೀಯ ನ್ಯಾಯ ಸಂಹಿತೆ-2023ರ ಸೆಕ್ಷನ್ 77 ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66(ಇ), 67 ಮತ್ತು 67(ಎ) ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಸೂಚಿಸಲಾಗಿದೆ. ಮಹಿಳೆಯರು ಸಂತ್ರಸ್ತರಾಗಿದ್ದರೆ ಎಫ್‌ಐಆರ್ ಕಡ್ಡಾಯವಾಗಿ ದಾಖಲಿಸಬೇಕು ಎಂದು ಆದೇಶ ತಿಳಿಸಿದೆ.

ಬ್ಲಾಕ್‌ಮೇಲ್, ಸೆಕ್ಸ್ಟೋರ್ಷನ್, ರಿವೆಂಜ್ ಪೋರ್ನೋಗ್ರಫಿ ಸೇರಿದಂತೆ ಖಾಸಗಿ ವಿಷಯದ ದುರ್ಬಳಕೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು. ಸಂತ್ರಸ್ತರು ಮೊದಲೇ ಚಿತ್ರೀಕರಣಕ್ಕೆ ಒಪ್ಪಿಗೆ ನೀಡಿದ್ದರು ಎಂಬ ಕಾರಣಕ್ಕೆ ದೂರು ತಿರಸ್ಕರಿಸಬಾರದು. ಅಪರಾಧ ಬೇರೆ ವ್ಯಾಪ್ತಿಯಲ್ಲಿ ನಡೆದಿದ್ದರೆ ಝೀರೋ ಎಫ್‌ಐಆರ್ ದಾಖಲಿಸಿ ಸಂಬಂಧಿತ ಠಾಣೆಗೆ ವರ್ಗಾಯಿಸಬೇಕು.

ಡಿಜಿಟಲ್ ಸಾಕ್ಷ್ಯಗಳನ್ನು ಸುರಕ್ಷಿತವಾಗಿ ಸಂರಕ್ಷಿಸುವುದು, ಆಕ್ಷೇಪಾರ್ಹ ವಿಷಯವನ್ನು ತಕ್ಷಣ ತೆಗೆಸಲು ಕ್ರಮ ಕೈಗೊಳ್ಳುವುದು ಹಾಗೂ ಪೀಡಿತರ ಗೌಪ್ಯತೆಯನ್ನು ಕಾಪಾಡುವುದು ಕಡ್ಡಾಯವಾಗಿದೆ. ನಿಯಮ ಉಲ್ಲಂಘಿಸಿ ಎಫ್‌ಐಆರ್ ದಾಖಲಿಸದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಡಿಜಿ-ಐಜಿಪಿ ಎಚ್ಚರಿಕೆ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular