ಹೂಸ್ಟನ್: ಭಾರತೀಯ ಮೂಲದ ನಾಲ್ವರು ಅಮೆರಿಕನ್ನರನ್ನು ನ್ಯೂಯಾರ್ಕ್ನ ಕಾರ್ನೆಗೀ ಕಾರ್ಪೊರೇಷನ್ ಪ್ರಕಟಿಸಿರುವ 2026ನೇ ಸಾಲಿನ ಪ್ರತಿಷ್ಠಿತ ‘ಗ್ರೇಟ್ ಇಮಿಗ್ರಂಟ್ಸ್, ಗ್ರೇಟ್ ಅಮೆರಿಕನ್ಸ್’ ಪಟ್ಟಿಗೆ ಆಯ್ಕೆ ಮಾಡಲಾಗಿದೆ. ಸೈಬರ್ ಸೆಕ್ಯುರಿಟಿ ಕ್ಷೇತ್ರದ ಪ್ರಮುಖ ಕಾರ್ಯನಿರ್ವಾಹಕ ನಿಕೇಶ್ ಅರೋರಾ, ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಮಹ್ಜರಿನ್ ಬನಾಜಿ, ಹಾರ್ವರ್ಡ್ ವೈದ್ಯಕೀಯ ಶಾಲೆಯ ಪ್ರಾಧ್ಯಾಪಕ ಡಾ. ಸಂಜೀವ್ ಚೋಪ್ರಾ ಹಾಗೂ ವರ್ಟೆಕ್ಸ್ ಫಾರ್ಮಾಸ್ಯುಟಿಕಲ್ಸ್ ಅಧ್ಯಕ್ಷೆ ಮತ್ತು ಸಿಇಒ ರೇಷ್ಮಾ ಕೇವಲರಮಣಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ.
ಅಮೆರಿಕದ ಸ್ವಾತಂತ್ರ್ಯದ 250ನೇ ವಾರ್ಷಿಕೋತ್ಸವದ ಅಂಗವಾಗಿ ಪ್ರಕಟಿಸಲಾದ 2026ರ ಪಟ್ಟಿಯಲ್ಲಿ 21 ದೇಶಗಳಿಂದ ವಲಸೆ ಬಂದು ಅಮೆರಿಕದ ಪ್ರಜೆಗಳಾದ 25 ಗಣ್ಯರನ್ನು ಗುರುತಿಸಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಅಮೆರಿಕದ ಅಭಿವೃದ್ಧಿಗೆ ನೀಡಿದ ಅಸಾಧಾರಣ ಕೊಡುಗೆಯನ್ನು ಪರಿಗಣಿಸಿ ಈ ಗೌರವ ನೀಡಲಾಗುತ್ತದೆ.
ಉತ್ತರ ಪ್ರದೇಶದಲ್ಲಿ ಜನಿಸಿದ ನಿಕೇಶ್ ಅರೋರಾ ಪ್ರಸ್ತುತ ಪಾಲೊ ಆಲ್ಟೊ ನೆಟ್ವರ್ಕ್ಸ್ನ ಅಧ್ಯಕ್ಷ ಮತ್ತು ಸಿಇಒ ಆಗಿದ್ದಾರೆ. ಹೈದರಾಬಾದ್ ಮೂಲದ ಮಹ್ಜರಿನ್ ಬನಾಜಿ ಸಾಮಾಜಿಕ ಮನಶ್ಶಾಸ್ತ್ರ ಹಾಗೂ ‘ಸೂಚ್ಯ ಪಕ್ಷಪಾತ’ ಕುರಿತ ಸಂಶೋಧನೆಗಾಗಿ ಜಾಗತಿಕ ಖ್ಯಾತಿ ಪಡೆದಿದ್ದಾರೆ. ನವದೆಹಲಿಯಲ್ಲಿ ಜನಿಸಿದ ಡಾ. ಸಂಜೀವ್ ಚೋಪ್ರಾ ಯಕೃತ್ತಿನ ರೋಗ ತಜ್ಞರಾಗಿ ಅಂತರರಾಷ್ಟ್ರೀಯ ಮನ್ನಣೆ ಗಳಿಸಿದ್ದರೆ, ಮುಂಬೈ ಮೂಲದ ರೇಷ್ಮಾ ಕೇವಲರಮಣಿ ಜಾಗತಿಕ ಔಷಧೋದ್ಯಮದಲ್ಲಿ ಪ್ರಮುಖ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ.
ಕಳೆದ ವರ್ಷ ಭಾರತೀಯ ಮೂಲದ ಮಂಜುಷಾ ಪಿ. ಕುಲಕರ್ಣಿ ಹಾಗೂ ಖಗೋಳ ಭೌತಶಾಸ್ತ್ರಜ್ಞೆ ಪ್ರಿಯಂವದ ನಟರಾಜನ್ ಈ ಗೌರವ ಪಡೆದಿದ್ದರು. ಈ ಹಿಂದೆ ನೊಬೆಲ್ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ, ಗೀತಾ ಗೋಪಿನಾಥ್, ವಿವೇಕ್ ಮೂರ್ತಿ, ಶಾಂತನು ನಾರಾಯಣ್ ಹಾಗೂ ಸುಂದರ್ ಪಿಚೈ ಸೇರಿದಂತೆ ಹಲವು ಭಾರತೀಯ ಮೂಲದ ಗಣ್ಯರೂ ಈ ಪ್ರತಿಷ್ಠಿತ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.



