ಬೆಂಗಳೂರು : ರಾಜ್ಯದ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿರುವ ಪ್ರಮುಖ ದೇವಸ್ಥಾನಗಳ ಕಾಣಿಕೆ ಹಣ, ಒಡವೆ ಹಾಗೂ ಆಸ್ತಿಪಾಸ್ತಿಗಳ ರಕ್ಷಣೆಗೆ ಕರ್ನಾಟಕ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಇತ್ತೀಚಿನ ದಿನಗಳಲ್ಲಿ ದೇವಸ್ಥಾನಗಳ ಹುಂಡಿ ಕಳ್ಳತನ, ಹಣ ದುರುಪಯೋಗದಂತಹ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಅವರು ಹೊಸ ‘ಪ್ರಮಾಣಿತ ಕಾರ್ಯಾಚರಣೆ ವಿಧಾನ’ (SOP) ಜಾರಿಗೆ ತಂದಿದ್ದಾರೆ.
ದೇವಸ್ಥಾನಗಳಲ್ಲಿ ಹೈಟೆಕ್ ಕಣ್ಗಾವಲು : ಹೊಸ ನಿಯಮದ ಪ್ರಕಾರ ದೇವಸ್ಥಾನದ ಹುಂಡಿಗಳ ಸುತ್ತಮುತ್ತ ನಾಲ್ಕೂ ದಿಕ್ಕಿನಿಂದ ನಿಗಾ ವಹಿಸುವ ಅತ್ಯಾಧುನಿಕ ವೆಬ್ ಕ್ಯಾಮೆರಾಗಳನ್ನು ಅಳವಡಿಸುವುದು ಕಡ್ಡಾಯವಾಗಿದ್ದು, ಧೂಪ, ಕರ್ಪೂರದ ಹೊಗೆಯಿಂದ ಕ್ಯಾಮೆರಾ ದೃಶ್ಯಕ್ಕೆ ತೊಂದರೆಯಾಗದಂತಹ ಗುಣಮಟ್ಟದ ಕ್ಯಾಮೆರಾಗಳನ್ನು ಬಳಸಬೇಕು.
ಈ ಕ್ಯಾಮೆರಾಗಳ ನೇರ ಪ್ರಸಾರವನ್ನು ಧಾರ್ಮಿಕ ದತ್ತಿ ಇಲಾಖೆಯ ಕೇಂದ್ರ ಸರ್ವರ್‌ಗೆ ಸಂಪರ್ಕಿಸುವುದರ ಜೊತೆಗೆ ಸ್ಥಳೀಯ ಪೊಲೀಸ್ ಠಾಣೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕಚೇರಿಗಳ ಡ್ಯಾಶ್‌ಬೋರ್ಡ್‌ಗಳಿಗೂ ಲಿಂಕ್ ಮಾಡಲಾಗುತ್ತದೆ.
ಡಿಜಿಟಲ್ ದೇಣಿಗೆಗೆ ಆದ್ಯತೆ : ದೇವಸ್ಥಾನಗಳಲ್ಲಿ ನಗದು ವಹಿವಾಟು ಕಡಿಮೆ ಮಾಡುವ ಉದ್ದೇಶದಿಂದ ಯುಪಿಐ, ಭೀಮ್ ಸೇರಿದಂತೆ ಡಿಜಿಟಲ್ ಪಾವತಿ ವ್ಯವಸ್ಥೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಪ್ರಸಾದ ಹಾಗೂ ಸೇವಾ ಟಿಕೆಟ್‌ಗಳಿಗೂ ಆನ್‌ಲೈನ್ ಪಾವತಿ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಹುಂಡಿಗಳ ಬಳಿ ಅಳವಡಿಸಿರುವ ಅಧಿಕೃತ QR ಕೋಡ್‌ಗಳನ್ನು ನಕಲಿ ಕೋಡ್‌ಗಳಿಂದ ಬದಲಾಯಿಸಿ ವಂಚನೆ ನಡೆಸದಂತೆ ಅಧಿಕಾರಿಗಳು ನಿಯಮಿತ ಪರಿಶೀಲನೆ ನಡೆಸಬೇಕು ಎಂದು ಸೂಚಿಸಲಾಗಿದೆ.
ಹುಂಡಿ ಎಣಿಕೆಗೆ ಹೊಸ ನಿಯಮ : ಹುಂಡಿ ಹಣ ಎಣಿಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಕಠಿಣ ಮಾರ್ಗಸೂಚಿಗಳನ್ನು ರೂಪಿಸಲಾಗಿದ್ದು, ಆದಾಯ ಹೆಚ್ಚಿರುವ ದೇವಸ್ಥಾನಗಳಲ್ಲಿ ಪ್ರತಿ ವಾರ ಹಾಗೂ ಸಾಮಾನ್ಯ ಆದಾಯ ಇರುವ ದೇವಸ್ಥಾನಗಳಲ್ಲಿ ಎರಡು ವಾರಕ್ಕೊಮ್ಮೆ ತಹಸೀಲ್ದಾರ್ ಸಮ್ಮುಖದಲ್ಲಿ ಹುಂಡಿ ಎಣಿಕೆ ನಡೆಸಬೇಕು.
ಎಣಿಕೆ ಕೊಠಡಿಗೆ ಪ್ರವೇಶಿಸುವ ಸಿಬ್ಬಂದಿಯ ಗುರುತು ಪರಿಶೀಲನೆಗೆ ಫೇಸ್ ರೆಕಗ್ನಿಷನ್ ವ್ಯವಸ್ಥೆ ಬಳಸಲಾಗುತ್ತದೆ. ಸಿಬ್ಬಂದಿ ತಮ್ಮ ಬಳಿ ಇರುವ ವೈಯಕ್ತಿಕ ಹಣದ ವಿವರವನ್ನು ಒಳ ಪ್ರವೇಶಿಸುವ ಮುನ್ನ ದಾಖಲಿಸುವುದು ಕಡ್ಡಾಯವಾಗಿದೆ.
ಹುಂಡಿ ಸಾಗಣೆ, ಎಣಿಕೆ ಹಾಗೂ ಬ್ಯಾಂಕ್‌ಗೆ ಹಣ ಜಮಾ ಮಾಡುವವರೆಗಿನ ಪ್ರತಿ ಹಂತವನ್ನೂ ದಿನಾಂಕ ಮತ್ತು ಸಮಯದೊಂದಿಗೆ ವಿಡಿಯೋ ಚಿತ್ರೀಕರಣ ಮಾಡಬೇಕು. ಎಣಿಕೆ ಕಾರ್ಯಕ್ಕೆ ಖಾಸಗಿ ವ್ಯಕ್ತಿಗಳನ್ನು ಬಳಸುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಅಧಿಕಾರಿಗಳಿಂದ ನಿಯಮಿತ ಪರಿಶೀಲನೆ : ಹೊಸ SOP ಅನುಷ್ಠಾನ ಪರಿಶೀಲನೆಗಾಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಅಗ್ನಿಶಾಮಕ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಲಾಗುತ್ತದೆ. ಈ ಸಮಿತಿ ಪ್ರತಿ ತಿಂಗಳು ಸಭೆ ನಡೆಸಿ ದೇವಸ್ಥಾನಗಳ ಭದ್ರತಾ ಕ್ರಮಗಳನ್ನು ಪರಿಶೀಲಿಸಲಿದೆ. ಸ್ಥಳೀಯ ಅಧಿಕಾರಿಗಳು ಪ್ರತಿ 15 ದಿನಗಳಿಗೊಮ್ಮೆ ಹಾಗೂ ಜಿಲ್ಲಾಧಿಕಾರಿ ಮತ್ತು ಎಸ್‌ಪಿ ಒಳಗೊಂಡ ತಂಡ ಪ್ರತಿ ಮೂರು ತಿಂಗಳಿಗೊಮ್ಮೆ ದೇವಸ್ಥಾನಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು.
ಜಿಲ್ಲಾಧಿಕಾರಿಗಳು ಸಿದ್ಧಪಡಿಸುವ ಮಾಸಿಕ ವರದಿಯನ್ನು ಸರ್ಕಾರ ಹಾಗೂ ಡಿಜಿ-ಐಜಿಪಿ ಅವರಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ.



