ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಲು ಅವರ ನಿವಾಸಕ್ಕೆ ಆಗಮಿಸಿದ್ದ ಸ್ಯಾಂಡಲ್‌ವುಡ್ ನಟಿ ಪ್ರೇಮಾ ಅವರು ಭೇಟಿಯಾಗದೇ ವಾಪಸ್ ತೆರಳಿದ್ದಾರೆ. ನಟಿ ಪ್ರೇಮಾ ಅವರು ಮುಖ್ಯಮಂತ್ರಿಯನ್ನು ವೈಯಕ್ತಿಕವಾಗಿ ಭೇಟಿಯಾಗುವ ಉದ್ದೇಶದಿಂದ ನಿವಾಸಕ್ಕೆ ಆಗಮಿಸಿದ್ದರು ಎನ್ನಲಾಗಿದ್ದು, ಆದರೆ ಭದ್ರತಾ ಸಿಬ್ಬಂದಿ ಅವರಿಗೆ ಒಳಪ್ರವೇಶಕ್ಕೆ ಅವಕಾಶ ನೀಡಿಲ್ಲ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇನ್ನೂ ಮುಖ್ಯಮಂತ್ರಿಯನ್ನು ಭೇಟಿಯಾಗಬೇಕಾದರೆ ಅವರ ಕಚೇರಿ ‘ಕೃಷ್ಣಾ’ಗೆ ಆಗಮಿಸುವಂತೆ ಭದ್ರತಾ ಸಿಬ್ಬಂದಿ ಸೂಚಿಸಿದ್ದಾರೆ ಎನ್ನಲಾಗಿದೆ. ಬಳಿಕ ನಟಿ ಪ್ರೇಮಾ ಅವರು ಅಲ್ಲಿಂದ ವಾಪಸ್ ತೆರಳಿದ್ದಾರೆ. ಈ ಘಟನೆ ಕುರಿತು ನಟಿ ಪ್ರೇಮಾ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಅಲ್ಲದೆ, ಅವರು ಯಾವ ವಿಚಾರವಾಗಿ ಮುಖ್ಯಮಂತ್ರಿ ಅವರನ್ನು ಭೇಟಿಯಾಗಲು ಆಗಮಿಸಿದ್ದರು ಎಂಬುದು ಕೂಡ ಸ್ಪಷ್ಟವಾಗಿಲ್ಲ.



