ಬೆಂಗಳೂರು : ಉಪ ಲೋಕಾಯುಕ್ತ ಹಾಗೂ ಲೋಕಾಯುಕ್ತ ಸಂಸ್ಥೆಯ ವಿರುದ್ಧ ನಿಂದನಾತ್ಮಕ ಮತ್ತು ಅವಹೇಳನಕಾರಿ ಪತ್ರಗಳನ್ನು ಬರೆದ ಆರೋಪದಡಿ ಬಳ್ಳಾರಿ ನಿವಾಸಿ ಎಸ್.ಜಿ.ಶಂಕರ್ ಅವರಿಗೆ ಬೆಂಗಳೂರಿನ ನ್ಯಾಯಾಲಯ ಆರು ತಿಂಗಳ ಜೈಲು ಶಿಕ್ಷೆ ಹಾಗೂ ₹5 ಸಾವಿರ ದಂಡ ವಿಧಿಸಿದೆ.
ಬೆಂಗಳೂರಿನ 68ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಈ ಆದೇಶ ಹೊರಡಿಸಿದ್ದು, ದಂಡದ ಮೊತ್ತವನ್ನು ಪಾವತಿಸಲು ವಿಫಲರಾದರೆ ಹೆಚ್ಚುವರಿಯಾಗಿ ಎರಡು ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ರಶ್ಮಿ ಎಂ. ಅವರು, ಉಪ ಲೋಕಾಯುಕ್ತರು ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯಾಗಿದ್ದು, ಪ್ರಾಮಾಣಿಕತೆ, ನಿಷ್ಠೆ ಹಾಗೂ ಪರಿಶ್ರಮಕ್ಕೆ ಹೆಸರುವಾಸಿಯಾಗಿದ್ದಾರೆ. ಅಂತಹ ಹುದ್ದೆಯಲ್ಲಿರುವ ವ್ಯಕ್ತಿ ಹಾಗೂ ಲೋಕಾಯುಕ್ತ ಸಂಸ್ಥೆಯ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಆರೋಪಿ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.
2023ರ ಫೆಬ್ರವರಿಯಲ್ಲಿ ಬರೆದ ಎರಡು ಪತ್ರಗಳು ಹಾಗೂ 2023ರ ಮೇ 11ರಂದು ನೀಡಿದ್ದ ಶೋಕಾಸ್ ನೋಟಿಸ್‌ಗೆ ಸಲ್ಲಿಸಿದ ಉತ್ತರದಲ್ಲಿನ ಆರೋಪಗಳು ಮತ್ತು ಪದಪ್ರಯೋಗಗಳು ಉಪ ಲೋಕಾಯುಕ್ತ ಹಾಗೂ ಸಂಸ್ಥೆಯ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದಲೇ ಮಾಡಲಾಗಿದೆ ಎಂಬುದು ಸಾಕ್ಷ್ಯಾಧಾರಗಳಿಂದ ಸಾಬೀತಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಕರ್ನಾಟಕ ಲೋಕಾಯುಕ್ತ ಕಾಯ್ದೆ, 1984ರ ಸೆಕ್ಷನ್ 17(2) ಅಡಿ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಲಾಗಿದೆ.
ಏನಿದು ಪ್ರಕರಣ ಎಂಬುದನ್ನು ನೋಡುವುದಾದರೇ ?
ಎಸ್.ಜಿ.ಶಂಕರ್ ಅವರು 2015ರಲ್ಲಿ ಬಳ್ಳಾರಿ ಜಿಲ್ಲೆಯ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಸಹಾಯಕ ಆಯುಕ್ತರ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. 2012ರಲ್ಲಿ ಬ್ರಾಹ್ಮಣರ ಬೀದಿಯ ದೇವಸ್ಥಾನದ ಸಮೀಪ ತಮ್ಮ ತಂದೆಯ ಅಂಗಡಿ ಸೇರಿದಂತೆ ಹಲವು ಅಂಗಡಿಗಳನ್ನು ತೆರವುಗೊಳಿಸಲಾಗಿದೆ ಎಂದು ಅವರು ಆರೋಪಿಸಿದ್ದರು.
ದೂರಿನ ವಿಚಾರಣೆ ವೇಳೆ ಅಧಿಕಾರಿಗಳು ವರದಿ ಸಲ್ಲಿಸಿದ್ದು, ದೇವಸ್ಥಾನದ ಆದಾಯ ಹೆಚ್ಚಿಸುವ ಉದ್ದೇಶದಿಂದ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಹಾಗೂ ನಿಯಮಾನುಸಾರ ಅಂಗಡಿಗಳನ್ನು ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದ್ದರು. ಅದೇ ರೀತಿ ರಥಬೀದಿ ವಿಸ್ತರಣೆ ಯೋಜನೆಯ ಹಿನ್ನೆಲೆಯಲ್ಲಿ ಅಂಗಡಿಗಳ ನಿರ್ಮಾಣ ಪ್ರಸ್ತಾವವನ್ನು ನಗರಸಭೆ ಆಯುಕ್ತರು ತಿರಸ್ಕರಿಸಿರುವುದನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಬಳಿಕ ರಥಬೀದಿಯ ಅತಿಕ್ರಮಣ ತೆರವು ಕುರಿತು ಶಂಕರ್ ನೀಡಿದ ದೂರಿನ ಮೇರೆಗೆ ಅಧಿಕಾರಿಗಳು ಕ್ರಮ ಕೈಗೊಂಡು ವರದಿ ಸಲ್ಲಿಸಿದ್ದರು.
ದೂರಿನ ವಿಚಾರಣೆ ಪೂರ್ಣಗೊಂಡ ಬಳಿಕ ಅತಿಕ್ರಮಣ ತೆರವುಗೊಂಡ ಹಿನ್ನೆಲೆಯಲ್ಲಿ ಉಪ ಲೋಕಾಯುಕ್ತರು ಪ್ರಕರಣವನ್ನು ಮುಕ್ತಾಯಗೊಳಿಸಿದ್ದರು. ಸಮಸ್ಯೆಗೆ ಪರಿಹಾರ ಪಡೆಯಲು ಇತರ ಕಾನೂನು ಮಾರ್ಗಗಳನ್ನು ಬಳಸುವಂತೆ ಸೂಚಿಸಲಾಗಿತ್ತು.
ಆದರೆ ಪ್ರಕರಣ ಮುಕ್ತಾಯಗೊಂಡ ನಂತರವೂ ಶಂಕರ್ ಅವರು ಉಪ ಲೋಕಾಯುಕ್ತರಿಗೆ ಹಾಗೂ ಲೋಕಾಯುಕ್ತರಿಗೆ ಅವಹೇಳನಕಾರಿ ಆರೋಪಗಳನ್ನು ಒಳಗೊಂಡ ಪತ್ರಗಳನ್ನು ಕಳುಹಿಸಿದ್ದರು. ಈ ಹಿನ್ನೆಲೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಇದೀಗ ನ್ಯಾಯಾಲಯ ಶಿಕ್ಷೆ ವಿಧಿಸಿದೆ.



