ಉತ್ತರ ಕರ್ನಾಟಕ : ಕೃಷಿ ಸಂಸ್ಕೃತಿಯ ಪ್ರತೀಕವಾಗಿರುವ ‘ಮಣ್ಣೆತ್ತಿನ ಅಮಾವಾಸ್ಯೆ’ ಹಬ್ಬವನ್ನು ಉತ್ತರ ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಭಕ್ತಿ, ಸಂಭ್ರಮ ಮತ್ತು ಸಂಪ್ರದಾಯಬದ್ಧವಾಗಿ ಆಚರಿಸಲಾಗುತ್ತಿದೆ.
ಜ್ಯೇಷ್ಠ ಮಾಸದ ಕೊನೆಯ ದಿನ ಆಚರಿಸುವ ಈ ಹಬ್ಬವು ರೈತ ಸಮುದಾಯಕ್ಕೆ ವಿಶೇಷ ಮಹತ್ವ ಹೊಂದಿದ್ದು, ವರ್ಷಪೂರ್ತಿ ಕೃಷಿ ಚಟುವಟಿಕೆಯಲ್ಲಿ ಜೊತೆಗಿರುವ ಎತ್ತುಗಳಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಈ ಆಚರಣೆ ನಡೆದುಬರುತ್ತಿದೆ. ಹಬ್ಬದ ಅಂಗವಾಗಿ ಮಾರುಕಟ್ಟೆಯಿಂದ ಮಣ್ಣಿನ ಜೋಡೆತ್ತುಗಳನ್ನು ಖರೀದಿಸಿ ಮನೆಗಳ ಜಗಲಿ ಹಾಗೂ ದೇವರ ಮನೆಯಲ್ಲಿ ಪ್ರತಿಷ್ಠಾಪಿಸಿ ವಿಶೇಷವಾಗಿ ಅಲಂಕರಿಸಲಾಗುತ್ತಿದೆ. ಬಳಿಕ ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ರೈತರ ಬದುಕು ಸುಖವಾಗಿರಲಿ ಎಂದು ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.
ಮಣ್ಣಿನ ಎತ್ತುಗಳಿಗೆ ಕಡಬು, ಹೋಳಿಗೆ ಸೇರಿದಂತೆ ವಿವಿಧ ಸಾಂಪ್ರದಾಯಿಕ ತಿನಿಸುಗಳ ನೈವೇದ್ಯ ಅರ್ಪಿಸಿ ಪೂಜಿಸುವ ಮೂಲಕ ರೈತರು ತಮ್ಮ ಕೃಷಿ ಸಂಸ್ಕೃತಿಯನ್ನು ಉಳಿಸಿಕೊಂಡಿದ್ದಾರೆ. ಈ ಬಾರಿ ಮಳೆ ಕೊರತೆಯ ಆತಂಕದ ನಡುವೆಯೂ ಉತ್ತಮ ಮಳೆಯಾಗಿ ಬೆಳೆ ಸಮೃದ್ಧಿಯಾಗಲಿ ಎಂಬ ಆಶಯದೊಂದಿಗೆ ರೈತರು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ರಾಯಚೂರು, ಕೊಪ್ಪಳ, ಗದಗ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಮಣ್ಣಿನ ಎತ್ತುಗಳ ಖರೀದಿ ಭರದಿಂದ ಸಾಗಿದ್ದು, ಬೆಲೆ ಏರಿಕೆಯ ನಡುವೆಯೂ ಸಂಪ್ರದಾಯಕ್ಕೆ ಧಕ್ಕೆ ಬಾರದಂತೆ ರೈತರು ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ.



