ಮೈಸೂರು : ಆಷಾಢ ಮಾಸದಲ್ಲಿ ಆಷಾಡ ಶುಕ್ರವಾರ ಹಾಗೂ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಹಿನ್ನೆಲೆ ಚಾಮುಂಡಿ ಬೆಟ್ಟದಲ್ಲಿ ಭಕ್ತರ ದರ್ಶನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ.ಜಿ ತಿಳಿಸಿದ್ದಾರೆ.
ಇಂದು ಚಾಮುಂಡಿ ಬೆಟ್ಟದಲ್ಲಿ ಅಷಾಢ ಶುಕ್ರವಾರಗಳು ಹಾಗೂ ಅಮ್ಮನವರ ವರ್ಧಂತಿ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜುಲೈ 17, 24, 31 ಹಾಗೂ ಆಗಸ್ಟ್ 7ರಂದು ಅಷಾಢ ಶುಕ್ರವಾರಗಳು ನಡೆಯಲಿದ್ದು, ಆಗಸ್ಟ್ 4ರಂದು ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಆಚರಣೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಅಷಾಢದ ನಾಲ್ಕು ಶುಕ್ರವಾರಗಳು, ಶನಿವಾರ ಹಾಗೂ ಭಾನುವಾರದಂದು ಲಲಿತ ಮಹಲ್ ಹೆಲಿಪ್ಯಾಡ್ ಮತ್ತು ಕೆಎಸ್ಆರ್ಟಿಸಿ ನಗರ ಬಸ್ ನಿಲ್ದಾಣದಿಂದ ಬೆಳಗ್ಗೆ 6.30ರಿಂದ ಬಸ್ ಸೇವೆ ಆರಂಭವಾಗಲಿದ್ದು, ರಾತ್ರಿ 8.30ರವರೆಗೆ ಸಂಚಾರ ಇರಲಿದೆ ಎಂದು ತಿಳಿಸಿದರು. ಚಾಮುಂಡಿ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಆಗಮಿಸುವ ಭಕ್ತರಿಗೆ ಬೆಳಗ್ಗೆ 5 ಗಂಟೆಯ ನಂತರ ಬೆಟ್ಟ ಏರಲು ಅವಕಾಶ ನೀಡಲಾಗುವುದು. ಸಾರ್ವಜನಿಕರು ಮುಂಜಾನೆ 5 ಗಂಟೆಗೂ ಮೊದಲೇ ಆಗಮಿಸಿ ಕಾಯುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.
ಭಕ್ತರ ಅನುಕೂಲಕ್ಕಾಗಿ ಲಲಿತ ಮಹಲ್ ಹೆಲಿಪ್ಯಾಡ್ ಹಾಗೂ ನಗರ ಬಸ್ ನಿಲ್ದಾಣದಲ್ಲಿ ಚಪ್ಪಲಿ ಸ್ಟ್ಯಾಂಡ್ ವ್ಯವಸ್ಥೆ ಮಾಡಲಾಗಿದೆ. ಆದರೆ ಚಾಮುಂಡಿ ಬೆಟ್ಟದ ಮೇಲೆ ಯಾವುದೇ ಚಪ್ಪಲಿ ಸ್ಟ್ಯಾಂಡ್ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಶಿಷ್ಟಾಚಾರದಡಿ ಆಗಮಿಸುವ ಗಣ್ಯರು ಹಾಗೂ ವಿಐಪಿಗಳಿಗೆ ಬೆಳಗ್ಗೆ 5.30ರಿಂದ 10 ಗಂಟೆಯವರೆಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಬೆಳಗ್ಗೆ 10 ಗಂಟೆಯ ನಂತರ ಗಣ್ಯರ ವಾಹನಗಳಿಗೂ ಚಾಮುಂಡಿ ಬೆಟ್ಟ ಪ್ರವೇಶ ನಿರ್ಬಂಧಿಸಲಾಗುವುದು. ಅಷಾಢ ಶುಕ್ರವಾರಗಳು ಹಾಗೂ ಚಾಮುಂಡೇಶ್ವರಿ ವರ್ಧಂತಿ ದಿನದಂದು ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶ ಸಂಪೂರ್ಣ ನಿಷೇಧಿಸಲಾಗಿದ್ದು, ಡ್ಯೂಟಿ ಪಾಸ್ ಹೊಂದಿರುವ ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.
ಸಾರ್ವಜನಿಕ ದರ್ಶನ ಮತ್ತು ₹2000 ವಿಶೇಷ ದರ್ಶನದ ಸರತಿ ಸಾಲುಗಳ ನಿರ್ವಹಣೆಗೆ ಕಂಟ್ರೋಲ್ ರೂಂ ಸ್ಥಾಪಿಸಲಾಗುವುದು. ಮೈಸೂರು ನಗರ ಪೊಲೀಸ್ ಉಪ ಆಯುಕ್ತರು, ಕೆಎಸ್ಆರ್ಟಿಸಿ ನಗರ ವಿಭಾಗದ ಜಿಲ್ಲಾ ನಿಯಂತ್ರಣಾಧಿಕಾರಿ ಹಾಗೂ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಒಳಗೊಂಡ ತಂಡ ಕಂಟ್ರೋಲ್ ರೂಂನಲ್ಲಿ ಕಾರ್ಯನಿರ್ವಹಿಸಲಿದೆ.
ಸರತಿ ಸಾಲಿನಲ್ಲಿ ನೂಕುನುಗ್ಗಲು ತಪ್ಪಿಸಲು ಕ್ರಮ ಕೈಗೊಳ್ಳಬೇಕು. ₹2000 ಟಿಕೆಟ್ ದರ್ಶನದ ಸಾಲಿನಲ್ಲಿ ಟಿಕೆಟ್ ಇಲ್ಲದವರು ಪ್ರವೇಶಿಸದಂತೆ ಎಚ್ಚರಿಕೆ ವಹಿಸಬೇಕು. ಭಕ್ತರಿಗೆ ದರ್ಶನದ ಅಂದಾಜು ಸಮಯ ತಿಳಿಸಲು ಮಾಹಿತಿ ಫಲಕಗಳನ್ನು ಅಳವಡಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಇದಲ್ಲದೆ, ಅಗತ್ಯ ಸ್ಥಳಗಳಲ್ಲಿ ಮೊಬೈಲ್ ಶೌಚಾಲಯ, ಕಸದ ಬುಟ್ಟಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಮತ್ತು ಸರತಿ ಸಾಲಿನ ನಿರ್ವಹಣೆಗೆ ನೋಡಲ್ ಅಧಿಕಾರಿಗಳನ್ನು ನೇಮಿಸುವಂತೆ ಸೂಚಿಸಿದರು.
ಸಭೆಯಲ್ಲಿ ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್, ನಗರ ಪೊಲೀಸ್ ಉಪ ಆಯುಕ್ತೆ ಹರ್ಷ ಪ್ರಿಯಾವರ್ಧನ, ಡಿಸಿಪಿ ಸುಂದರ್ ರಾಜ್, ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರೂಪ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.



