Wednesday, July 15, 2026
Google search engine

Homeರಾಜ್ಯಬೆಂಗಳೂರಿನ ಆಟೋ ಚಾಲಕನ ನಡೆಗೆ ಫಿದಾ ಆದ ಅಮೆರಿಕನ್ ಯೂಟ್ಯೂಬರ್

ಬೆಂಗಳೂರಿನ ಆಟೋ ಚಾಲಕನ ನಡೆಗೆ ಫಿದಾ ಆದ ಅಮೆರಿಕನ್ ಯೂಟ್ಯೂಬರ್

ಬೆಂಗಳೂರು : ಬೆಂಗಳೂರಿನ ಆಟೋ ಚಾಲಕ ಮತ್ತು ಅಮೆರಿಕದ ಯೂಟ್ಯೂಬರ್ ನಡುವಿನ ಆತ್ಮೀಯ ಸಂಭಾಷಣೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಮನ ಗೆದ್ದಿದೆ. “ಭಾರತದಲ್ಲಿ ಹೊಸ ಸ್ನೇಹಿತರನ್ನು ಮಾಡಿಕೊಳ್ಳುವುದು ತುಂಬಾ ಸುಲಭ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿರುವ ಈ ವಿಡಿಯೊ ಭಾರತೀಯರ ಆತಿಥ್ಯ ಮತ್ತು ಹೃದಯವಂತಿಕೆಗೆ ಸಾಕ್ಷಿಯಾಗಿದೆ.

ಅಮೆರಿಕನ್ ವ್ಲಾಗರ್ ಕ್ರಿಸ್ ಅವರು ಚಿಕ್ಕಪೇಟೆಗೆ ಹೋಗಲು ಆಟೋ ಚಾಲಕನನ್ನು ಸಂಪರ್ಕಿಸುತ್ತಾರೆ. ಆದರೆ ಶಾಲಾ ಮಕ್ಕಳನ್ನು ಕರೆತರಲು ಹೋಗಬೇಕಿದ್ದ ಕಾರಣ ಚಾಲಕ ಸೌಜನ್ಯದಿಂದ ಸವಾರಿ ನಿರಾಕರಿಸುತ್ತಾರೆ. ನಿರಾಕರಿಸಿದರೂ ಅಲ್ಲೇ ಮಾತು ಮುಗಿಯದೆ, ಮುಂದೆ ಆಟೋಗಳು ಸಿಗುವ ಸ್ಥಳವನ್ನು ತಿಳಿಸುವುದರ ಜೊತೆಗೆ ಓಲಾ ಅಥವಾ ಉಬರ್ ಬುಕ್ ಮಾಡಿಕೊಳ್ಳುವಂತೆ ಸಲಹೆಯನ್ನೂ ನೀಡುತ್ತಾರೆ.

ಚಾಲಕನ ಈ ಸ್ನೇಹಪರ ವರ್ತನೆಗೆ ಮೆಚ್ಚಿದ ಕ್ರಿಸ್, ಅವರಿಗೆ ಧನ್ಯವಾದ ತಿಳಿಸಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳನ್ನು ತೋರಿಸಿ ಫಾಲೋ ಮಾಡುವಂತೆ ವಿನಂತಿಸುತ್ತಾರೆ. ಈ ವೇಳೆ ನೀವು ಕನ್ನಡದಲ್ಲಿ ವಿಡಿಯೊ ಮಾಡ್ತೀರಾ? ಎಂಬ ಚಾಲಕನ ಪ್ರಶ್ನೆಯನ್ನು ಕ್ರಿಸ್, ಕೆನಡಾದಲ್ಲಿ ವಿಡಿಯೊ ಮಾಡ್ತೀರಾ? ಎಂದು ತಪ್ಪಾಗಿ ಅರ್ಥೈಸಿಕೊಂಡು ಉತ್ತರಿಸುವ ತಮಾಷೆಯ ಪ್ರಸಂಗವೂ ವಿಡಿಯೊದಲ್ಲಿ ಸೆರೆಯಾಗಿದೆ. ಬಳಿಕ ಇಬ್ಬರೂ ನಗುತ್ತಾ ಸಂಭಾಷಣೆ ಮುಂದುವರಿಸಿರುವುದು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ವಿಡಿಯೊ ಹಂಚಿಕೊಂಡಿರುವ ಕ್ರಿಸ್, ಭಾರತದಲ್ಲಿ ಹೊಸ ಸ್ನೇಹಿತರನ್ನು ಮಾಡಿಕೊಳ್ಳುವುದು ತುಂಬಾ ಸುಲಭ. ಇಲ್ಲಿನ ಜನರು ಯಾವಾಗಲೂ ಆತ್ಮೀಯವಾಗಿ ನಡೆದುಕೊಳ್ಳುತ್ತಾರೆ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೊಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಭಾಷೆಯ ಅಡೆತಡೆ ಇದ್ದರೂ ಪರಸ್ಪರ ಗೌರವದಿಂದ ಮಾತನಾಡಿದ ಆಟೋ ಚಾಲಕ ಮತ್ತು ವಿದೇಶಿ ಪ್ರವಾಸಿಯ ನಡೆ ಭಾರತೀಯ ಆತಿಥ್ಯದ ಉತ್ತಮ ಉದಾಹರಣೆ ಎಂದು ನೆಟ್ಟಿಗರು ಪ್ರಶಂಸಿಸಿದ್ದಾರೆ.

RELATED ARTICLES
- Advertisment -
Google search engine

Most Popular