ನವದೆಹಲಿ : ಭಾರತ ಮತ್ತು ಬ್ರಿಟನ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದ (FTA) ಜಾರಿಗೆ ಬರುತ್ತಿದ್ದಂತೆ, ಎರಡೂ ದೇಶಗಳ ನಡುವಿನ ವ್ಯಾಪಾರ ಮತ್ತು ಹೂಡಿಕೆಯ ಹೊಸ ಸಾಧ್ಯತೆಗಳು ತೆರೆದುಕೊಂಡಿವೆ. ಈ ಬೆಳವಣಿಗೆಯಿಂದ ಉತ್ತೇಜಿತವಾಗಿರುವ ಬ್ರಿಟಿಷ್ ಏರ್‌ವೇಸ್, ಭಾರತದಲ್ಲಿ ತನ್ನ ಸೇವೆಗಳನ್ನು ವಿಸ್ತರಿಸುವುದಾಗಿ ಘೋಷಿಸಿದೆ.
ಈ ಕುರಿತು ಮಾಹಿತಿ ನೀಡಿದ ಬ್ರಿಟಿಷ್ ಏರ್ ವೇಸ್ ನ ಪ್ರಧಾನ ವ್ಯವಸ್ಥಾಪಕ ಡೇವಿಡ್ ರೈಟ್, “ಭಾರತ ಮತ್ತು ಬ್ರಿಟನ್ ನಡುವಿನ ಬಲಗೊಳ್ಳುತ್ತಿರುವ ಆರ್ಥಿಕ ಸಂಬಂಧದ ಮೇಲೆ ನಮಗೆ ಅಪಾರ ನಂಬಿಕೆಯಿದೆ. ಈ ಹಿನ್ನೆಲೆಯಲ್ಲಿ, ಈ ವರ್ಷದ ಚಳಿಗಾಲದ ವೇಳಾಪಟ್ಟಿಯಿಂದ ಭಾರತಕ್ಕೆ ನಿರ್ವಹಿಸುವ ಸಾಪ್ತಾಹಿಕ ವಿಮಾನಗಳ ಸಂಖ್ಯೆಯನ್ನು 63 ರಿಂದ 70ಕ್ಕೆ ಏರಿಕೆ ಮಾಡಲಾಗುವುದು” ಎಂದು ತಿಳಿಸಿದ್ದಾರೆ.
ವ್ಯಾಪಾರ ಮತ್ತು ಆರ್ಥಿಕತೆಗೆ ಉತ್ತೇಜನ
ಭಾರತ-ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದವನ್ನು ‘ಐತಿಹಾಸಿಕ’ ಎಂದು ಬಣ್ಣಿಸಿರುವ ರೈಟ್, ಇದು ಎರಡೂ ದೇಶಗಳ ನಡುವಿನ ಆರ್ಥಿಕ ಸಹಕಾರ ಮತ್ತು ವಾಣಿಜ್ಯ ಅವಕಾಶಗಳಿಗೆ ಹೊಸ ವೇಗವನ್ನು ನೀಡಲಿದೆ ಎಂದರು. “ಭಾರತವು ಬ್ರಿಟಿಷ್ ಏರ್‌ವೇಸ್‌ಗೆ ಅತ್ಯಂತ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಭಾರತದ ಪ್ರಯಾಣಿಕರು, ಉದ್ಯಮಗಳು ಮತ್ತು ಸಮುದಾಯಗಳನ್ನು ಬ್ರಿಟನ್ ಹಾಗೂ ನಮ್ಮ ಜಾಗತಿಕ ಜಾಲದೊಂದಿಗೆ ಉತ್ತಮವಾಗಿ ಸಂಪರ್ಕಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ” ಎಂದು ಅವರು ವಿವರಿಸಿದರು.
ಸಾಂಸ್ಕೃತಿಕ ಮತ್ತು ಶೈಕ್ಷಣಿಕ ವಿನಿಮಯಕ್ಕೆ ಬಲ
ಈ ಒಪ್ಪಂದದ ಪ್ರಭಾವವು ಕೇವಲ ವ್ಯಾಪಾರಕ್ಕೆ ಮಾತ್ರ ಸೀಮಿತವಾಗುವುದಿಲ್ಲ, ಇದು ಶಿಕ್ಷಣ, ಸಾಂಸ್ಕೃತಿಕ ವಿನಿಮಯ ಮತ್ತು ಜನರ ನಡುವಿನ ಸಂಪರ್ಕವನ್ನು (People-to-people connect) ಮತ್ತಷ್ಟು ಗಟ್ಟಿಗೊಳಿಸಲಿದೆ ಎಂದು ರೈಟ್ ಅಭಿಪ್ರಾಯಪಟ್ಟಿದ್ದಾರೆ.
ಬ್ರಿಟಿಷ್ ಏರ್‌ವೇಸ್ ಕಳೆದ 100 ವರ್ಷಗಳಿಂದ ಭಾರತದಲ್ಲಿ ತನ್ನ ಸೇವೆಯನ್ನು ನೀಡುತ್ತಿದ್ದು, ಉಭಯ ದೇಶಗಳ ನಡುವಿನ ಸುದೀರ್ಘ ಸಾಂಸ್ಕೃತಿಕ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ. ವಿಮಾನಯಾನ ಕ್ಷೇತ್ರವು ಪ್ರವಾಸೋದ್ಯಮ, ಶಿಕ್ಷಣ ಮತ್ತು ಹೂಡಿಕೆಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮುಕ್ತ ವ್ಯಾಪಾರ ಒಪ್ಪಂದದಿಂದಾಗಿ ಈ ಎಲ್ಲಾ ಕ್ಷೇತ್ರಗಳಲ್ಲಿ ಮತ್ತಷ್ಟು ಬೆಳವಣಿಗೆಯನ್ನು ನಿರೀಕ್ಷಿಸಬಹುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.



