ಚೆನ್ನೈ : ಕಾಲಿವುಡ್ ಸ್ಟಾರ್ ನಟ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅಭಿನಯದ ಕೊನೆಯ ಚಿತ್ರ ‘ಜನ ನಾಯಗನ್’ ಬಿಡುಗಡೆ ದಿನಾಂಕ ಘೋಷಣೆ ಆಗಿದೆ. ಈ ಬಹುನಿರೀಕ್ಷಿತ ಸಿನಿಮಾಗೆ ಕನ್ನಡದ ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆ ಬಂಡವಾಳ ಹೂಡಿದ್ದು, ಈಗ ಚಿತ್ರದ ಬಿಡುಗಡೆಗೆ ಸಕಲ ತಯಾರಿ ಮಾಡಿಕೊಂಡಿದೆ. ಕಳೆದ ಏಳು ತಿಂಗಳಿನಿಂದ ಎದುರಿಸುತ್ತಿದ್ದ ಎಲ್ಲಾ ಕಾನೂನು ಹೋರಾಟಗಳು ಮತ್ತು ಸೆನ್ಸಾರ್ ಮಂಡಳಿ ಜೊತೆಗಿನ ವಿವಾದಗಳಿಗೆ ತೆರೆ ಬಿದ್ದಿದ್ದು, ‘ಜನ ನಾಯಕನ್’ ಚಿತ್ರವು ಜುಲೈ 23ರಂದು ವಿಶ್ವಾದ್ಯಂತ ಗ್ರ್ಯಾಂಡ್ ಆಗಿ ತೆರೆಕಾಣಲಿದೆ.
ಈ ಮೂಲಕ ಅಭಿಮಾನಿಗಳ ತಿಂಗಳುಗಳ ಕಾಯುವಿಕೆಗೆ ಚಿತ್ರತಂಡ ಅಧಿಕೃತವಾಗಿ ತೆರೆ ಎಳೆದಿದ್ದು, ನಟ ವಿಜಯ್ ಅವರು ತಮ್ಮ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಚಿತ್ರದ ಪೋಸ್ಟರ್ ಹಂಚಿಕೊಳ್ಳುವ ಮೂಲಕ ‘ಜನ ನಾಯಗನ್’ ಬಿಡುಗಡೆ ದಿನಾಂಕ ಘೋಷಿಸಿದ್ದಾರೆ. ಇತ್ತೀಚೆಗಷ್ಟೇ ಸೆನ್ಸಾರ್ ಮಂಡಳಿಯಿಂದ ‘ಎ’ ಸರ್ಟಿಫಿಕೇಟ್ ಪಡೆದುಕೊಂಡಿರುವ ಈ ಚಿತ್ರವು ಜುಲೈ 23ರಂದು ಚಿತ್ರಮಂದಿರಗಳಲ್ಲಿ ಅಬ್ಬರಿಸಲಿದೆ.
ಕನ್ನಡದ ಹೆಸರಾಂತ ನಿರ್ಮಾಣ ಸಂಸ್ಥೆಯಾದ ‘ಕೆವಿಎನ್ ಪ್ರೊಡಕ್ಷನ್ಸ್’ ಈ ಚಿತ್ರವನ್ನು ಅತ್ಯಂತ ಅದ್ಧೂರಿಯಾಗಿ ನಿರ್ಮಿಸಿದೆ. ಚಿತ್ರದ ಬಿಡುಗಡೆ ದಿನಾಂಕವನ್ನು ಖಚಿತಪಡಿಸಿ ಟ್ವೀಟ್ ಮಾಡಿರುವ ಸಂಸ್ಥೆ, ‘ಬೆಂಕಿಯಿಂದ ಪರೀಕ್ಷಿಸಲ್ಪಟ್ಟಿದೆ. ಸಮಯದಿಂದ ರೂಪಿಸಲ್ಪಟ್ಟಿದೆ. ಇತಿಹಾಸ ನಿರ್ಮಿಸಲು ಸಜ್ಜಾಗಿದೆ. ಹೋರಾಟ ಎಷ್ಟು ಕಠಿಣವಾಗಿರುತ್ತದೆಯೋ, ಜಯ ಅಷ್ಟೇ ಭರ್ಜರಿಯಾಗಿರುತ್ತದೆ’ ಎಂದು ಬರೆದುಕೊಂಡು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.
ಕೊನೆಯ ಸಿನಿಮಾ: ಹೆಚ್ಚಿದ ನಿರೀಕ್ಷೆ
ದಳಪತಿ ವಿಜಯ್ ಅವರು ರಾಜಕೀಯಕ್ಕೆ ಪ್ರವೇಶಿಸಿ, ತಮಿಳುನಾಡಿನ ಸಿಎಂ ಆದ ಬಳಿಕ ತೆರೆಗೆ ಬರುತ್ತಿರುವ ಚಿತ್ರ ಇದಾಗಿದೆ. ಅಲ್ಲದೇ ಅವರು ನಟಿಸಿರುವ ಕೊನೆಯ ಸಿನಿಮಾ ಕೂಡ ಹೌದು. ಆ ಕಾರಣದಿಂದ ಸಿನಿಮಾ ಮೇಲಿನ ಜನರ ಕ್ರೇಜ್ ದುಪ್ಪಟ್ಟಾಗಿದೆ. ಈ ಮೊದಲೇ ಈ ಚಿತ್ರವು ಆನ್ಲೈನ್ನಲ್ಲಿ ಲೀಕ್ ಆಗಿತ್ತು. ಹಾಗಾಗಿ ಬಾಕ್ಸ್ ಆಫೀಸ್ ಭವಿಷ್ಯ ಏನಾಗಬಹುದು ಎಂಬುದನ್ನು ಕಾದುನೋಡಬೇಕು.
ಎಚ್. ವಿನೋದ್ ನಿರ್ದೇಶನದ ಈ ಬಿಗ್ ಬಜೆಟ್ ರಾಜಕೀಯ ಆ್ಯಕ್ಷನ್ ಡ್ರಾಮಾದಲ್ಲಿ ವಿಜಯ್ಗೆ ಜೋಡಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದು, ಬಾಬಿ ಡಿಯೋಲ್, ಮಮಿತಾ ಬೈಜು, ಪ್ರಕಾಶ್ ರಾಜ್, ಗೌತಮ್ ವಾಸುದೇವ್ ಮೆನನ್, ಪ್ರಿಯಾಮಣಿ ಮತ್ತು ನರೇನ್ ಮುಖ್ಯ ಭೂಮಿಕೆಯಲ್ಲಿದ್ದು, ಅನಿರುದ್ಧ್ ರವಿಚಂದರ್ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ.



