Saturday, February 21, 2026
Google search engine

Homeರಾಜಕೀಯಕಲ್ಲು ತೂರಿದವರ ವಿರುದ್ಧ ಮುಲಾಜಿಲ್ಲದೆ ಕ್ರಮ : ಗೃಹ ಸಚಿವ ಡಾ.ಜಿ.ಪರಮೇಶ್ವರ್‌

ಕಲ್ಲು ತೂರಿದವರ ವಿರುದ್ಧ ಮುಲಾಜಿಲ್ಲದೆ ಕ್ರಮ : ಗೃಹ ಸಚಿವ ಡಾ.ಜಿ.ಪರಮೇಶ್ವರ್‌

ಬೆಂಗಳೂರು : ಬಾಗಲಕೋಟೆಯಲ್ಲಿ ಶೋಭಾ ಯಾತ್ರೆಯ ಮೇಲೆ ಕಲ್ಲು ತೂರಿದವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು, ಇಲ್ಲಿ ಯಾರನ್ನೂ ರಕ್ಷಣೆ ಮಾಡುವುದಿಲ್ಲ. ಕಾನೂನನ್ನು ಕೈಗೆತ್ತಿಕೊಂಡು, ಶಾಂತಿ ಭಂಗ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌‍ ಸರ್ಕಾರ ಯಾವುದೇ ಒಂದು ವರ್ಗಕ್ಕೆ ಕಾನೂನನ್ನು ಸೀಮಿತಗೊಳಿಸುವುದಿಲ್ಲ. ಅಲ್ಪಸಂಖ್ಯಾತರಿರಲಿ, ಹಿಂದೂಗಳಾಗಿರಲಿ ಎಲ್ಲರಿಗೂ ಒಂದೇ ರೀತಿಯ ಕಾನೂನನ್ನು ಜಾರಿಗೆ ತರುತ್ತೇವೆ ಎಂದರಲ್ಲದೆ, ಬಾಗಲಕೋಟೆಯಲ್ಲಿ ಶಿವಾಜಿ ಜಯಂತ್ಯೋತ್ಸವದ ಅಂಗವಾಗಿ ನಡೆದ ಶೋಭಾಯಾತ್ರೆಯ ವೇಳೆ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ. ಅವರನ್ನು ಬಿಟ್ಟು ಕಳುಹಿಸುವುದಾಗಲಿ, ರಕ್ಷಣೆ ಮಾಡುವುದು, ಸಹಕರಿಸುವ ಯಾವ ಕೆಲಸಗಳನ್ನೂ ನಮ ಸರ್ಕಾರ ಮಾಡುವುದಿಲ್ಲ ಎಂದಿದ್ದಾರೆ.

ಇನ್ನೂ ಈ ವೇಳೆ ಘಟನೆಯಲ್ಲಿ ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿಯ ಮೇಲೆ ಕಲ್ಲು ಬಿದ್ದಿರುವುದಾಗಿ ನನಗೆ ಮಾಹಿತಿ ಬಂದಿದ್ದು, ಕಾನೂನು ಸುವ್ಯವಸ್ಥೆ ರಕ್ಷಣೆಗಾಗಿ ಪೊಲೀಸರು ಇಂತಹದನ್ನೆಲ್ಲ ಸಹಿಸಿಕೊಂಡಿರುತ್ತಾರೆ. ತಮ ರಕ್ಷಣೆಗಿಂತಲೂ ಹೆಚ್ಚಿನದಾಗಿ ಶಾಂತಿಪಾಲನೆಯಾಗಬೇಕು ಎಂದು ನೋವು ತಿಂದುಕೊಂಡೇ ಕೆಲಸ ಮಾಡಿರುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸದ್ಯದ ಪರಿಸ್ಥಿತಿಯಲ್ಲಿ ಬಾಗಲಕೋಟೆಯಲ್ಲಿ ಪರಿಸ್ಥಿತಿ ಶಾಂತವಾಗಿದ್ದು, ಈಗಾಗಲೇ ಎಂಟು ಮಂದಿಯನ್ನು ಬಂಧಿಸಿದ್ದೇವೆ. ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚುವರಿ ಪೊಲೀಸ್‌‍ ಮಹಾನಿರ್ದೇಶಕರು ಹಾಗೂ ಐಜಿಪಿ ಸೇರಿದಂತೆ ಇಡೀ ಅಧಿಕಾರಿಗಳು ಸ್ಥಳದಲ್ಲೆ ಮೊಕ್ಕಾಂ ಹೂಡಿದ್ದಾರೆ. ಎರಡು ಗುಂಪುಗಳ ನಡುವೆ ಶಾಂತಿಪಾಲನಾ ಸಭೆ ನಡೆಸಲು ಸೂಚಿಸಲಾಗಿದೆ ಎಂದರು.

ಬಾಗಲಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ಅದಕ್ಕಾಗಿ ಗಲಭೆ ಸೃಷ್ಟಿಸುವ ಪ್ರಯತ್ನ ಮಾಡಿರಬಹುದು. ಆದರೆ ಪರಿಸ್ಥಿತಿಯನ್ನು ನಿಯಂತ್ರಿಸಲು ನಮ ಪೊಲೀಸರು ಸಮರ್ಥರಿದ್ದಾರೆ. ಸ್ಥಳದಲ್ಲಿ ಹೆಚ್ಚಿನ ಬಂದೋಬಸ್ತ್‌ ಆಯೋಜಿಸಲಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿ ಗಲಭೆ ಸೃಷ್ಟಿಸುವವರನ್ನು ನಿರ್ಬಂಧಿಸಲು ರಾಜ್ಯ ವಿಧಾನ ಮಂಡಲದಲ್ಲಿ ದ್ವೇಷ ಭಾಷಣ ಪ್ರತಿಬಂಧಕ ಕಾಯ್ದೆಯನ್ನು ರೂಪಿಸಿದ್ದು, ಅದಕ್ಕೆ ರಾಜ್ಯಪಾಲರು ಅಂಗೀಕಾರ ನೀಡಿಲ್ಲ. ಒಂದು ವೇಳೆ ಕಾನೂನು ಜಾರಿಗೆ ಬಂದಿದ್ದರೆ ಕೆಲ ಘಟನೆಗಳನ್ನು ತಡೆಯಬಹುದಿತ್ತು. ರಾಜ್ಯಪಾಲರು ಸಹಿ ಹಾಕದಿರುವುದರಿಂದ ಈ ಹಿಂದೆ ಚಾಲ್ತಿಯಲ್ಲಿದ್ದ ಕಾನೂನುಗಳನ್ನೇ ಬಳಕೆ ಮಾಡಿಕೊಂಡು ಪ್ರಚೋದನಕಾರಿ ಭಾಷಣ ಮಾಡುವವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದರು.

ಕಲ್ಲುತೂರಾಟದ ಬಳಿಕ ಆರ್‌.ಎಸ್‌‍.ಎಸ್‌‍ನವರು ಮೆರವಣಿಗೆಗೆ ಅನುಮತಿ ನೀಡಬೇಕು ಎಂದು ಮನವಿ ಸಲ್ಲಿಸಿದ್ದು, ಸ್ಥಳೀಯ ಪರಿಸ್ಥಿತಿ ಆಧರಿಸಿ ಅಲ್ಲಿನ ಅಧಿಕಾರಿಗಳೇ ಕ್ರಮ ಕೈಗೊಳ್ಳುತ್ತಾರೆ. ನಾವು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.

RELATED ARTICLES
- Advertisment -
Google search engine

Most Popular