ನವದೆಹಲಿ : ಭಾರತದಾದ್ಯಂತ ತಾಪಮಾನವು ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ದೇಶದ ಜನತೆ ಬಿಸಿಲಿನ ಬೇಗೆಯಿಂದ ರಕ್ಷಿಸಿಕೊಳ್ಳಲು ಸಾಧ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಕರೆ ನೀಡಿದ್ದಾರೆ.
ತಮ್ಮ ಜನಪ್ರಿಯ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ನ 134ನೇ ಸಂಚಿಕೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಬಿಸಿಲಿನಿಂದ ಬಚಾವಾಗಲು ಭಾರತದ ಸಾಂಪ್ರದಾಯಿಕ ಹಾಗೂ ದೇಶಿ ಪಾನೀಯಗಳನ್ನು ಬಳಸುವಂತೆ ಸಲಹೆ ನೀಡಿದರು.
ಪ್ರಧಾನಿ ಮೋದಿ ಭಾಷಣದ ಪ್ರಮುಖ ಮುಖ್ಯಾಂಶಗಳು ಹೀಗಿದೆ
ಬಿಸಿಲಿನಿಂದ ಸ್ವಯಂ ರಕ್ಷಣೆ: “ಪ್ರಸ್ತುತ ದೇಶದ ಬಹುತೇಕ ಭಾಗಗಳಲ್ಲಿ ತೀವ್ರವಾದ ಬಿಸಿಲಿದೆ. ಇಂತಹ ಹವಾಮಾನದಲ್ಲಿ ಆರೋಗ್ಯದ ಕಡೆ ಗಮನ ಹರಿಸುವುದು ಅತ್ಯಗತ್ಯ. ನಿರಂತರವಾಗಿ ನೀರು ಕುಡಿಯುತ್ತಿರಿ. ಬಿಸಿಲಿನಲ್ಲಿ ಹೊರಗೆ ಹೋಗಬೇಕಾಗಿ ಬಂದರೆ ಜಾಗರೂಕರಾಗಿರಿ. ಸರ್ಕಾರದ ವಿವಿಧ ಇಲಾಖೆಗಳು ಹೊರಡಿಸಿರುವ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಿ” ಎಂದು ಪ್ರಧಾನಿ ಹೇಳಿದರು.
ಅಡುಗೆಮನೆಯಲ್ಲಿದೆ ಬಿಸಿಲಿಗೆ ಮದ್ದು: ನಮ್ಮ ಸಂಸ್ಕೃತಿಯಲ್ಲಿ ಬಿಸಿಲನ್ನು ಎದುರಿಸುವ ಉಪಾಯಗಳು ಅಡುಗೆಮನೆಯಲ್ಲೇ ಸಿಗುತ್ತವೆ. ಬೇಸಿಗೆ ಬರುತ್ತಿದ್ದಂತೆ ಮನೆಯಲ್ಲಿ ಮಡಕೆ ನೀರು, ಮೊಸರು ಮತ್ತು ಹಸಿ ಮಾವಿನಕಾಯಿಯ ಬಳಕೆ ಹೆಚ್ಚಾಗುತ್ತದೆ ಎಂದು ಅವರು ನೆನಪಿಸಿದರು.
‘ಏಕ ಭಾರತ, ಶ್ರೇಷ್ಠ ಭಾರತ’ದ ಪ್ರತೀಕ: ಭಾರತದ ಸಾಂಪ್ರದಾಯಿಕ ಬೇಸಿಗೆ ಪಾನೀಯಗಳು ದೇಶದ ವೈವಿಧ್ಯಮಯ ಸಂಸ್ಕೃತಿಯನ್ನು ಬಿಂಬಿಸುತ್ತವೆ. ಇವು ಕೇವಲ ಪಾನೀಯಗಳಲ್ಲ, ಬದಲಿಗೆ ‘ಏಕ ಭಾರತ, ಶ್ರೇಷ್ಠ ಭಾರತ’ದ ಭಾವನೆಯನ್ನು ಗಟ್ಟಿಗೊಳಿಸುವ ಸಂಪ್ರದಾಯಗಳಾಗಿವೆ ಎಂದು ಮೋದಿ ಬಣ್ಣಿಸಿದರು.
ದೇಶದ ವಿವಿಧ ಭಾಗಗಳ ಸಾಂಪ್ರದಾಯಿಕ ಬೇಸಿಗೆ ಪಾನೀಯಗಳು:
ಪ್ರಧಾನಮಂತ್ರಿಯವರು ದೇಶದ ವಿವಿಧ ರಾಜ್ಯಗಳಲ್ಲಿ ಬಳಸಲಾಗುವ ಪ್ರಮುಖ ದೇಶಿ ಪಾನೀಯಗಳನ್ನು
ಉತ್ತರ ಭಾರತ ಆಮ್ ಪನ್ನಾ (Am Panna) ಹಸಿ ಮಾವಿನಕಾಯಿಯಿಂದ ತಯಾರಿಸುವ ಇದು ಬಿಸಿಲಿನಿಂದ ರಕ್ಷಣೆ ನೀಡುತ್ತದೆ.
ಪಂಜಾಬ್ – ಹರಿಯಾಣ ಲಸ್ಸಿ (Lassi) ದೊಡ್ಡ ಗ್ಲಾಸ್‌ಗಳಲ್ಲಿ ನೀಡಲಾಗುವ ಈ ಪಾನೀಯ ದೇಹಕ್ಕೆ ತಂಪು ನೀಡುತ್ತದೆ.
ರಾಜಸ್ಥಾನ – ಗುಜರಾತ್ ಮಜ್ಜಿಗೆ (Chaas) ಪ್ರತಿ ಊಟದ ಜೊತೆಗೂ ಅತ್ಯಗತ್ಯವಾದ ಪಾನೀಯ.
ಬಿಹಾರ, ಜಾರ್ಖಂಡ್, ಪೂರ್ವ ಯುಪಿ ಸತ್ತು ಶರಬತ್ (Sattu Sharbat) ಇದು ಹೊಟ್ಟೆಯನ್ನು ತುಂಬಿಸುವುದಲ್ಲದೆ, ದೇಹಕ್ಕೆ ಶಕ್ತಿಯನ್ನೂ ನೀಡುತ್ತದೆ.
ಕೊಂಕಣ ಮತ್ತು ಗೋವಾ ಕೋಕಂ ಶರಬತ್ (Kokum Sharbat) ಕರಾವಳಿ ಭಾಗದ ಅತ್ಯಂತ ಜನಪ್ರಿಯ ತಂಪು ಪಾನೀಯ.
ದಕ್ಷಿಣ ಭಾರತ ಪಾನಕ ಮತ್ತು ಸಂಬಾರಂ (Panakam & Sambharam) ದಕ್ಷಿಣದ ಸಾಂಪ್ರದಾಯಿಕ ಹಾಗೂ ಆರೋಗ್ಯಕರ ಪಾನೀಯಗಳು.
ಒಡಿಶಾ ಬೇಲ ಪನಾ (Bael Pana) ಬೇಲದ ಹಣ್ಣಿನಿಂದ ತಯಾರಿಸುವ ಸಾಂಪ್ರದಾಯಿಕ ಬೇಸಿಗೆ ಪಾನೀಯ.



