Saturday, July 4, 2026
Google search engine

Homeದೇಶತೀಸ್ತಾ ನದಿ ಯೋಜನೆಗೆ ಚೀನಾ ಸಾಥ್ : ಭಾರತ ತೀವ್ರ ನಿಗಾ, ಹೆಚ್ಚಿದ ಆತಂಕ

ತೀಸ್ತಾ ನದಿ ಯೋಜನೆಗೆ ಚೀನಾ ಸಾಥ್ : ಭಾರತ ತೀವ್ರ ನಿಗಾ, ಹೆಚ್ಚಿದ ಆತಂಕ

ನವದೆಹಲಿ : ಬಾಂಗ್ಲಾದೇಶದ ತೀಸ್ತಾ ನದಿ ಯೋಜನೆ ಹಾಗೂ ‘ಚೀನಾ-ಬಾಂಗ್ಲಾದೇಶ-ಮ್ಯಾನ್ಮಾರ್ ಆರ್ಥಿಕ ಕಾರಿಡಾರ್’ (CBMEC) ಯೋಜನೆಗಳಲ್ಲಿ ಚೀನಾದ ಹೆಚ್ಚುತ್ತಿರುವ ಹಸ್ತಕ್ಷೇಪದ ಕುರಿತು ಭಾರತ ಜಾಗರೂಕ ಪ್ರತಿಕ್ರಿಯೆ ನೀಡಿದೆ. ತನ್ನ ನೆರೆಹೊರೆಯಲ್ಲಿ ನಡೆಯುವ ಪ್ರತಿಯೊಂದು ಪ್ರಮುಖ ವಿದ್ಯಮಾನಗಳ ಮೇಲೆ ಸೂಕ್ಷ್ಮ ನಿಗಾ ಇಟ್ಟಿರುವುದಾಗಿ ಮತ್ತು ಅಗತ್ಯ ಬಿದ್ದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭಾರತ ಸ್ಪಷ್ಟಪಡಿಸಿದೆ.

ಬಾಂಗ್ಲಾದೇಶ ಮತ್ತು ಚೀನಾ ನಡುವೆ ಕಾರ್ಯತಂತ್ರದ ಯೋಜನೆಗಳ ಸಹಕಾರ ವೇಗವಾಗಿ ಬೆಳೆಯುತ್ತಿರುವ ಬೆನ್ನಲ್ಲೇ ಭಾರತದ ಈ ಪ್ರತಿಕ್ರಿಯೆ ಹೊರಬಿದ್ದಿದೆ.

ತೀಸ್ತಾ ಯೋಜನೆಗೆ ಚೀನಾ ತಾಂತ್ರಿಕ ನೆರವು

ಕಳೆದ ತಿಂಗಳು ಬಾಂಗ್ಲಾದೇಶದ ಪ್ರಧಾನಿ ತಾರಿಕ್ ರೆಹಮಾನ್ ಅವರ ಚೀನಾ ಪ್ರವಾಸದ ವೇಳೆ, ‘ತೀಸ್ತಾ ರಿವರ್ ಕಾಂಪ್ರಹೆನ್ಸಿವ್ ಮ್ಯಾನೇಜ್‌ಮೆಂಟ್ ಅಂಡ್ ರಿಸ್ಟೋರೇಶನ್ ಪ್ರಾಜೆಕ್ಟ್’ ಕುರಿತು ಉಭಯ ದೇಶಗಳ ನಡುವೆ ಒಪ್ಪಂದ ಏರ್ಪಟ್ಟಿದೆ. ಚೀನಾದ ತಜ್ಞರು ಈಗಾಗಲೇ ಈ ಯೋಜನೆಯ ಕಾರ್ಯಸಾಧ್ಯತಾ ಅಧ್ಯಯನವನ್ನು (Feasibility Study) ಪೂರ್ಣಗೊಳಿಸಿದ್ದು, ಚೀನಾದ ಜಲಸಂಪನ್ಮೂಲ ಸಚಿವ ಲೀ ಗುಯೋಯಿಂಗ್ ಅವರು ಬಾಂಗ್ಲಾದೇಶಕ್ಕೆ ಸಂಪೂರ್ಣ ತಾಂತ್ರಿಕ ಸಹಕಾರದ ಭರವಸೆ ನೀಡಿದ್ದಾರೆ. ಇದರೊಂದಿಗೆ ಚೀನಾ ‘CBMEC’ ಯೋಜನೆಯನ್ನು ಮುನ್ನಡೆಸುವ ಯೋಜನೆಯನ್ನೂ ಪ್ರಸ್ತಾಪಿಸಿದೆ.

ಪ್ರತಿ ಹೆಜ್ಜೆಯ ಮೇಲೂ ಭಾರತದ ಕಣ್ಣು

ಈ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿದ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, “ಭಾರತವು ತನ್ನ ನೆರೆಹೊರೆಯಲ್ಲಿ ನಡೆಯುವ ಎಲ್ಲಾ ಪ್ರಮುಖ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ತೀಸ್ತಾ ಯೋಜನೆಗೆ ಸಂಬಂಧಿಸಿದಂತೆ ಭಾರತ ಈಗಾಗಲೇ ತನ್ನ ನಿಲುವನ್ನು ಬಾಂಗ್ಲಾದೇಶದ ಮುಂದೆ ಸ್ಪಷ್ಟಪಡಿಸಿದೆ. ಈ ಹೊಸ ಬೆಳವಣಿಗೆಗಳನ್ನು ಭಾರತವು ತನ್ನ ಒಟ್ಟಾರೆ ನೀತಿಯ ಭಾಗವಾಗಿಸಿಕೊಂಡು ಮುಂದಿನ ಕಾರ್ಯತಂತ್ರವನ್ನು ರೂಪಿಸಲಿದೆ,” ಎಂದು ಹೇಳಿದ್ದಾರೆ.

ಭಾರತದ ಆತಂಕಕ್ಕೆ ಕಾರಣಗಳೇನು?

'ಚಿಕನ್ ನೆಕ್' ಪ್ರದೇಶಕ್ಕೆ ಚೀನಾ ಲಗ್ಗೆ: ಚೀನಾದ ತಜ್ಞರು ತೀಸ್ತಾ ಯೋಜನೆಯಲ್ಲಿ ಕೆಲಸ ಮಾಡಿದರೆ, ಅವರು ಭಾರತದ ಅತ್ಯಂತ ಸೂಕ್ಷ್ಮ ಮತ್ತು ಆಯಕಟ್ಟಿನ ಪ್ರದೇಶವಾದ 'ಚಿಕನ್ ನೆಕ್' (ಸಿಲಿಗುರಿ ಕಾರಿಡಾರ್) ಹತ್ತಿರಕ್ಕೆ ಪ್ರವೇಶ ಪಡೆಯಲಿದ್ದಾರೆ. ಈ ಕಿರಿದಾದ ಭೂಭಾಗವೇ ಈಶಾನ್ಯ ಭಾರತವನ್ನು ದೇಶದ ಉಳಿದ ಭಾಗಗಳೊಂದಿಗೆ ಜೋಡಿಸುವುದರಿಂದ, ಇದು ಭಾರತದ ಭದ್ರತೆಗೆ ಭಾರೀ ಸವಾಲಾಗಿ ಪರಿಣಮಿಸಬಹುದು.

ಬಂಗಾಳ ಕೊಲ್ಲಿಗೆ ಚೀನಾ ಪ್ರವೇಶ: CBMEC ಯೋಜನೆ ಪೂರ್ಣಗೊಂಡರೆ ಚೀನಾಕ್ಕೆ ನೇರವಾಗಿ ಬಂಗಾಳ ಕೊಲ್ಲಿಯ ಪ್ರವೇಶ ಸಿಗಲಿದ್ದು, ಇದು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತಕ್ಕೆ ಕಂಟಕವಾಗಬಹುದು.

ಬಾಂಗ್ಲಾದಲ್ಲಿ ಚೀನಾ ಪರ ಒಲವು: ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರದ ಅವಧಿಯಲ್ಲಿ ಆರಂಭವಾದ ಈ ಚೀನಾ ಪರ ಒಲವು, ಈಗ ತಾರಿಕ್ ರೆಹಮಾನ್ ನೇತೃತ್ವದ ಹೊಸ 'ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ' (BNP) ಸರ್ಕಾರದ ಅವಧಿಯಲ್ಲೂ ಮುಂದುವರಿಯುತ್ತಿರುವುದು ಭಾರತಕ್ಕೆ ಚಿಂತೆಯ ಜಂಟಿ ತಂದಿದೆ.

ಭಾರತವೂ ಆಸಕ್ತಿ ತೋರಿಸಿತ್ತು

ಜೂನ್ 2024 ರಲ್ಲಿ ಬಾಂಗ್ಲಾದೇಶದ ಅಂದಿನ ಪ್ರಧಾನಿ ಶೇಖ್ ಹಸೀನಾ ಅವರ ಭಾರತ ಭೇಟಿಯ ಸಂದರ್ಭದಲ್ಲಿ, ಭಾರತವು ತೀಸ್ತಾ ನದಿಯ ಸಂರಕ್ಷಣೆ ಮತ್ತು ನಿರ್ವಹಣೆಯಲ್ಲಿ ಸಹಕರಿಸಲು ಇಚ್ಛೆ ವ್ಯಕ್ತಪಡಿಸಿತ್ತು. ತಾಂತ್ರಿಕ ತಂಡವೊಂದನ್ನು ಢಾಕಾಗೆ ಕಳುಹಿಸುವುದಾಗಿಯೂ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಭಾರತ ಮತ್ತು ಬಾಂಗ್ಲಾದೇಶ ನಡುವೆ 54 ಹಂಚಿಕೆಯ ನದಿಗಳಿದ್ದರೂ, ತೀಸ್ತಾ ನದಿಯ ನೀರು ಹಂಚಿಕೆ ಕುರಿತು ಇದುವರೆಗೆ ಯಾವುದೇ ಅಧಿಕೃತ ಒಪ್ಪಂದ ಸಾಧ್ಯವಾಗಿಲ್ಲ (ಏಜೆನ್ಸಿಸ್)

RELATED ARTICLES
- Advertisment -
Google search engine

Most Popular