Saturday, July 4, 2026
Google search engine

Homeದೇಶಸುಪ್ರೀಂ ಕೋರ್ಟ್ ಮಹತ್ವದ ತೀರ್ಪು: ಮದುವೆಯ ನಂತರ 'ರೈಟ್ ಟು ಪ್ರೈವೆಸಿ' ನೆಪದಲ್ಲಿ ಅಕ್ರಮ ಸಂಬಂಧ...

ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು: ಮದುವೆಯ ನಂತರ ‘ರೈಟ್ ಟು ಪ್ರೈವೆಸಿ’ ನೆಪದಲ್ಲಿ ಅಕ್ರಮ ಸಂಬಂಧ ಬಚ್ಚಿಡಲು ಸಾಧ್ಯವಿಲ್ಲ!

ನವದೆಹಲಿ : ಸಂವಿಧಾನದ 21ನೇ ವಿಧಿಯಡಿ ಸಿಗುವ ‘ಖಾಸಗಿತನದ ಹಕ್ಕು’ (Right to Privacy) ಸಂಗಾತಿಯಿಂದ ಅಕ್ರಮ ಸಂಬಂಧದ (ಅಫೇರ್) ಸಾಕ್ಷ್ಯಗಳನ್ನು ಮರೆಮಾಚುವಷ್ಟು ವ್ಯಾಪಕವಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ವಿಚ್ಛೇದನ ಪ್ರಕರಣಗಳಲ್ಲಿ ವ್ಯಭಿಚಾರವನ್ನು ಸಾಬೀತುಪಡಿಸಲು ಮೊಬೈಲ್ ಕಾಲ್ ರೆಕಾರ್ಡ್ ಅಥವಾ ಹೋಟೆಲ್ ವಾಸ್ತವ್ಯದ ದಾಖಲೆಗಳು ಅಗತ್ಯವಿದ್ದರೆ, ಕೇವಲ ಖಾಸಗಿತನದ ನೆಪ ಒಡ್ಡಿ ಅವುಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಸರ್ವೋಚ್ಛ ನ್ಯಾಯಾಲಯ ಸ್ಪಷ್ಟಪಡಿಸಿದೆ.

ಶುಕ್ರವಾರ ನ್ಯಾಯಮೂರ್ತಿಗಳಾದ ಮನ್ಮೋಹನ್ ಮತ್ತು ಕೆ. ವಿನೋದ್ ಚಂದ್ರನ್ ಅವರ ಪೀಠವು ಈ ವಿಚಾರಣೆ ನಡೆಸಿ, ದೆಹಲಿ ಹೈಕೋರ್ಟ್‌ನ ತೀರ್ಪನ್ನು ಎತ್ತಿಹಿಡಿಯಿತಲ್ಲದೆ ಪತಿಯ ಮೇಲ್ಮನವಿಯನ್ನು ವಜಾಗೊಳಿಸಿತು. ತನ್ನ ಕಾಲ್ ರೆಕಾರ್ಡ್ಸ್ ಮತ್ತು ಹೋಟೆಲ್ ವಾಸ್ತವ್ಯದ ವಿವರಗಳನ್ನು ನ್ಯಾಯಾಲಯಕ್ಕೆ ತರಿಸಿಕೊಳ್ಳುವುದು ತನ್ನ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಪತಿ ವಾದಿಸಿದ್ದ.

ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಮೊಹರು

ದೆಹಲಿ ಹೈಕೋರ್ಟ್ ಈ ಹಿಂದೆ ಈ ಪ್ರಕರಣದ ತೀರ್ಪು ನೀಡುವಾಗ, “ಖಾಸಗಿತನದ ಹಕ್ಕು ಸಂಪೂರ್ಣವಾದದ್ದಲ್ಲ. ಸಾರ್ವಜನಿಕ ಹಿತಾಸಕ್ತಿ ಮತ್ತು ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಇದರ ಮೇಲೆ ಸೂಕ್ತ ನಿರ್ಬಂಧಗಳನ್ನು ಹೇರಬಹುದು” ಎಂದು ಹೇಳಿತ್ತು.

ಹಿಂದೂ ವಿವಾಹ ಕಾಯ್ದೆಯಡಿ ವಿವಾಹೇತರ ಸಂಬಂಧವನ್ನು (ವ್ಯಭಿಚಾರ) ವಿಚ್ಛೇದನಕ್ಕೆ ಕಾನೂನುಬದ್ಧ ಆಧಾರವೆಂದು ಪರಿಗಣಿಸಲಾಗಿದೆ. ಹಾಗಾಗಿ, ವಿವಾಹಿತನಾಗಿದ್ದರೂ ಪರಸ್ತ್ರೀ ಜೊತೆ ಲೈಂಗಿಕ ಸಂಬಂಧ ಹೊಂದಿರುವ ಆರೋಪ ಎದುರಿಸುತ್ತಿರುವ ವ್ಯಕ್ತಿಗೆ, ಖಾಸಗಿತನದ ಹಕ್ಕಿನ ಆಧಾರದ ಮೇಲೆ ನ್ಯಾಯಾಲಯವು ಸಹಾಯ ಮಾಡುವುದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.

ಪತಿಯ ಹೋಟೆಲ್ ಬುಕಿಂಗ್ ವಿವರಗಳು ಮತ್ತು ಕಾಲ್ ಡಿಟೇಲ್ಸ್ (CDR) ಒದಗಿಸುವಂತೆ ಫ್ಯಾಮಿಲಿ ಕೋರ್ಟ್ ನೀಡಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿತ್ತು. ಈಗ ಅದಕ್ಕೆ ಸುಪ್ರೀಂ ಕೋರ್ಟ್ ಕೂಡ ಸಮ್ಮತಿ ಸೂಚಿಸಿದೆ.

ಏನಿದು ಪ್ರಕರಣ?

ಈ ದಂಪತಿಗೆ 1998 ರಲ್ಲಿ ವಿವಾಹವಾಗಿದ್ದು, 2000 ನೇ ಇಸವಿಯಲ್ಲಿ ಮಗಳು ಜನಿಸಿದಳು. ತನ್ನ ಪತಿ ಬೇರೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಆಕೆಯೊಂದಿಗೆ ಜೈಪುರದ ಹೋಟೆಲ್‌ನಲ್ಲಿ ತಂಗಿದ್ದ ಎಂದು ಪತ್ನಿ ಆರೋಪಿಸಿದ್ದಳು.

ಈ ಆರೋಪಗಳ ಬೆನ್ನಲ್ಲೇ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ, ಪತಿಯ ಹೋಟೆಲ್ ಬುಕಿಂಗ್ ದಾಖಲೆಗಳು ಮತ್ತು ಮೊಬೈಲ್ ಕಾಲ್ ವಿವರಗಳನ್ನು ನ್ಯಾಯಾಲಯಕ್ಕೆ ತರಿಸಿಕೊಳ್ಳಬೇಕೆಂದು ಕೋರಿದ್ದಳು. ಕುಟುಂಬ ನ್ಯಾಯಾಲಯ (ಫ್ಯಾಮಿಲಿ ಕೋರ್ಟ್) ಈ ಬೇಡಿಕೆಯನ್ನು ಅಂಗೀಕರಿಸಿತ್ತು. ಇದನ್ನು ಮೊದಲು ದೆಹಲಿ ಹೈಕೋರ್ಟ್ ಮತ್ತು ಈಗ ಸುಪ್ರೀಂ ಕೋರ್ಟ್ ಕೂಡ ಎತ್ತಿಹಿಡಿದಿದೆ. (ಏಜೆನ್ಸಿಸ್)

RELATED ARTICLES
- Advertisment -
Google search engine

Most Popular