ರಾಮನಗರ : ಪ್ರಸಕ್ತ ವರ್ಷ ಬೇಸಿಗೆ ತೀವ್ರವಾಗಿದ್ದು, ಈಗಾಗಲೇ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿದೆ. ಮುಂಬರುವ ದಿನಗಳಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಎದುರಾಗುವ ಸಂಭವವಿರುವುದರಿಂದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಅಗತ್ಯ ಕ್ರಮ ವಹಿಸುವಂತೆ ಸಾರಿಗೆ ಮತ್ತು ಮುಜರಾಯಿ ಸಚಿವರು ಹಾಗೂ ಬೆಂಗಳೂರು ದಕ್ಷಿಣ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗರೆಡ್ಡಿ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಅವರು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ 2025-26ನೇ ಸಾಲಿನ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಸ್ತುತ ಜಿಲ್ಲೆಯ 33 ಗ್ರಾಮ ಪಂಚಾಯಿತಿಗಳ 62 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಜ್ಞಾನಮೂರ್ತಿ ಎನ್.ಕೆ. ಅವರು ಸಭೆಯಲ್ಲಿ ತಿಳಿಸಿದಾಗ ಶಾಸಕರುಗಳು ಮಾತನಾಡಿ, ಮುಂಬರುವ ದಿನಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಲಿದೆ. ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಜಿಲ್ಲೆಯಲ್ಲಿ ಅವಶ್ಯವಿರುವ ಕಡೆ ಬೋರ್‌ವೆಲ್‌ಗಳು ಕೊರೆಯಲು ಅನುಮತಿ ನೀಡಬೇಕು, 15ನೇ ಹಣಕಾಸು ಯೋಜನೆಯಡಿ ಯಾವುದೇ ಅನುದಾನ ಬಿಡುಗಡೆಯಾಗದಿರುವುದರಿಂದ ಜಿಲ್ಲೆಯ ಟಾಸ್ಕ್ಪೋರ್ಸ್ ಸಮಿತಿ ಹಾಗೂ ಜಿಲ್ಲಾ ವಿಪತ್ತು ನಿಧಿ ಅನುದಾನವನ್ನು ಬಳಸುವಂತೆ ಸಚಿವರಲ್ಲಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ಜಿಲ್ಲಾ ಮಟ್ಟದ ಸಭೆ ಕರೆದು ಕುಡಿಯುವ ನೀರಿನ ಸಮಸ್ಯೆಗೆ ಮುಂಜಾಗ್ರತ ಕ್ರಮ ವಹಿಸುವಂತೆ ಸೂಚಿಸಿದರು.
ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು ಜಿಲ್ಲೆಯಲ್ಲಿರುವ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ, ಔಷಧಿ ಕೊರತೆ, ವೈದ್ಯಕೀಯ ಪರಿಕರಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಆಸ್ಪತ್ರೆಗಳಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಬೇಕು. ಯಾವುದೇ ದೂರುಗಳು ಬಾರದಂತೆ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಎಲ್ಲಾ ರೀತಿಯ ಕ್ರಮಗಳನ್ನು ವಹಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ನಿರ್ದೇಶಿಸಿದರು.
ಜಿಲ್ಲೆಯಲ್ಲಿ ದರ್ಖಾಸ್ತು ಪೋಡಿ ಆಂದೋಲನ, ಪೌತಿ ಖಾತೆ ಆಂದೋಲನ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ನಡೆಯುವಾಗ ಸಾರ್ವಜನಿಕರಿಗೆ, ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿದರೆ ಇದರಿಂದ ಸಾರ್ವಜನಿಕರಿಗೆ ಉಪಯೋಗವಾಗಲಿದೆ ಜಮೀನಿನ ಪೋಡಿ, ಪಹಣಿ, ಇಂಡೀಕರಣ ಇನ್ನಿತರ ದಾಖಲೆಗಳಿಗೆ ಸಂಬಂಧಿಸಿದಂತೆ ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ನಿರೀಕ್ಷಕರು ನೀಡಿದ ವರದಿಗೆ ತಹಶೀಲ್ದಾರರು ಯಾವುದೇ ಕ್ರಮ ಕೈಗೊಳ್ಳದಿರುವುದು ಜನರಿಗೆ ತೊಂದರೆ ಉಂಟು ಮಾಡುತ್ತಿದೆ ಎಂದು ಮಾಗಡಿ ಶಾಸಕರಾದ ಬಾಲಕೃಷ್ಣ ಅವರು ಸಭೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಹಿಸಿದ ಸಚಿವರು ಅಧಿಕಾರಿಗಳು ಕ್ಷೇತ್ರ ಭೇಟಿ ನೀಡಿ ಪರಿಶೀಲಿಸಬೇಕು. ಕಡತಗಳನ್ನು ಶೀಘ್ರವಾಗಿ ವಿಲೇ ಮಾಡುವ ಮೂಲಕ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಬೇಕು ಎಂದು ಭೂ ಮಾಪನಾ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಅಧಿಕಾರಿಗಳಿಗೆ ಹಾಗೂ ತಹಶೀಲ್ದಾರರಿಗೆ ಸೂಚಿಸಿದರು.
ಸ್ಮಶಾನ ಭೂಮಿ ಲಭ್ಯತೆ ಕುರಿತು ಪರಿಶೀಲಿಸಿದ ಸಚಿವರು ಜಿಲ್ಲೆಯ ಎಲ್ಲಾ 838 ಕಂದಾಯ ಗ್ರಾಮಗಳಿಗೂ ಸ್ಮಶಾನ ಭೂಮಿ ಇದೆ. ಹೆಚ್ಚು ಜನಸಂಖ್ಯೆ ಇದ್ದಲ್ಲಿ ಮತ್ತೊಂದು ಸ್ಮಶಾನ ಭೂಮಿ ಒದಗಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಸಭೆಯಲ್ಲಿ ಮಾಹಿತಿ ನೀಡಿದರು. ಅವಶ್ಯವಿರುವ ಕಡೆ ಮತ್ತೊಂದು ಸ್ಮಶಾನ ಭೂಮಿಗೆ ಪ್ರಸ್ತಾವನೆ ಕಳುಹಿಸುವಂತೆ ಸಚಿವರು ತಿಳಿಸಿದರು. ಸಂಧ್ಯಾ ಸುರಕ್ಷಾ, ವಿಧವಾವೇತನ, ವಿಕಲಚೇತನರ ಮಾಸಾಶನ ಸೇರಿದಂತೆ ಇನ್ನಿತರ ಪಿಂಚಣಿ ಯೋಜನೆಗಳ ಸೌಲಭ್ಯ ಕೋರಿ ಸಲ್ಲಿಕೆಯಾಗುವ ಅರ್ಜಿಗಳಿಗೆ ಶೀಘ್ರ ಸ್ಪಂದಿಸಿ ಸೌಲಭ್ಯ ಕಲ್ಪಿಸಬೇಕೆಂದು ಸೂಚಿಸಿದರು.
ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ 2018-19ನೇ ಸಾಲಿನಿಂದ ಪ್ರಸಕ್ತ ಸಾಲಿನ ವರೆಗೆ ಗಂಗಾ ಕಲ್ಯಾಣ ಯೋಜನೆಯಡಿ ಕಲ್ಪಿಸಲಾಗುವ ಸೌಲಭ್ಯವನ್ನು ಪೂರ್ಣಗೊಳಿಸಿರುವುದಿಲ್ಲ. ಅರ್ಹ ಫಲಾನುಭವಿಗಳಿಗೆ ಬೋರ್ವೆಲ್ ಹಾಕಿಸಿಕೊಡಲು ಕಳೆದ ಆರ್ಥಿಕ ವರ್ಷ ಟೆಂಡರ್ ಕರೆದಿರುವುದಿಲ್ಲ ರಾಜ್ಯಮಟ್ಟದಲ್ಲಿ ಆಗಬೇಕಾದ ಕಾರಣ ಸಂಬಂಧಿಸಿದ ಸಚಿವರೊಂದಿಗೆ ಪತ್ರ ಬರೆದು ಚರ್ಚಿಸುವುದಾಗಿ ತಿಳಿಸಿದರು.
ಪ್ರಸಕ್ತ ವರ್ಷ ಮುಂಗಾರು ಮಳೆಯು ವಾಡಿಕೆಗಿಂತ ಕಡಿಮೆಯಾಗುವ ಸಂಭವವಿದೆ ಜಿಲ್ಲೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ಕ್ರಮ ವಹಿಸಬೇಕು. ಕೃಷಿ ಭಾಗ್ಯ, ಕೃಷಿ ಸಿಂಚಾಯಿ, ಕೃಷಿ ಯಾಂತ್ರಿಕರಣ, ಕರ್ನಾಟಕ ರೈತ ¸ಮೃದ್ಧಿ ಯೋಜನೆ ಇನ್ನಿತರ ಯೋಜನೆಯಡಿ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಜೇಷ್ಠತೆಗಳಿಗನುಗುಣವಾಗಿ ಆಯ್ಕೆ ಮಾಡಬೇಕು. ಜಿಲ್ಲೆಯ ಹೆಚ್ಚಿನ ರೈತರಿಗೆ ಕೃಷಿ ಇಲಾಖೆಯ ಸೌಲಭ್ಯ ದೊರಕಿಸಿಕೊಡಲು ಕೃಷಿ ಇಲಾಖೆ ಅಧಿಕಾರಿಗಳು ಕೆಲಸ ಮಾಡಬೇಕು ಎಂದರು.
ವಾಹನಗಳ ಹಾಗೂ ಪಾದಚಾರಿಗಳ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಅನುವಾಗಲು ರಸ್ತೆ ಬದಿಗಳಲ್ಲಿ ಬೆಳೆದಿರುವ ಗಿಡಗಳನ್ನು ಸ್ವಚ್ಛಗೊಳಿಸುವುದು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಹಾಗೂ ಲೋಕೋಪಯೋಗಿ ಇಲಾಖೆ ಜವಾಬ್ದಾರಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಸುಧಾಮ್ ದಾಸ್ ಅವರು ಪ್ರಸ್ತಾಪಿಸಿದಾಗ ಜಿಲ್ಲೆಯಲ್ಲಿರುವ ಎಲ್ಲಾ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯರಸ್ತೆಗಳ ಬದಿಗಳಲ್ಲಿ ಬೆಳೆದಿರುವ ಜಂಗಲ್‌ಅನ್ನು ತೆರವುಮಾಡಿ, ಡಾಂಬರು ರಸ್ತೆಗಳಲ್ಲಿ ಉಂಟಾಗಿರುವ ಗುಂಡಿಗಳನ್ನು ಮುಚ್ಚಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಸಾರಿಗೆ ಇಲಾಖೆ ಅಧಿಕಾರಿಗಳು ಪರೀಕ್ಷಾ ವೇಳಾ ಸಮಯದಲ್ಲಿ ಶಾಲಾ ಮಕ್ಕಳ ವಾಹನಗಳನ್ನು ತಡೆದು ಪರಿಶೀಲಿಸುವುದು ಕಂಡು ಬಂದಿದೆ. ಇದರಿಂದ ಶಾಲಾ ಮಕ್ಕಳು ಪರೀಕ್ಷೆಗೆ ತೊಂದರೆ ಉಂಟಾಗುವ ಬಗ್ಗೆ ದೂರುಗಳು ಬಂದಿದೆ. ಮುಂದಿನ ದಿನಗಳಲ್ಲಿ ಶಾಲಾ ಮಕ್ಕಳಿಗೆ ತೊಂದರೆಯಾಗದಂತೆ ಸಾರಿಗೆ ಇಲಾಖೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಜಿಲ್ಲೆಯಲ್ಲಿ ಅವಶ್ಯವಿರುವ ಕಡೆ ಕೆ.ಎಸ್.ಆರ್.ಟಿ.ಸಿ, ಬಿ.ಎಂ.ಟಿ.ಸಿ ಬಸ್‌ಗಳ ವ್ಯವಸ್ಥೆಗಳನ್ನು ಈಗಾಗಲೇ ಕಲ್ಪಿಸಲಾಗಿದೆ ಮತ್ತಷ್ಟು ಪ್ರಸ್ತಾವನೆಗಳು ಬಂದಲ್ಲಿ ಅಗತ್ಯತೆ ಹಾಗೂ ಬೇಡಿಕೆಗಳಿಗನುಗುಣವಾಗಿ ಬಸ್ ಸೌಕರ್ಯ ಕಲ್ಪಿಸಲಾಗುವುದು ಎಂದು ಹೇಳಿದರು.
ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ಫಲಿತಾಂಶವನ್ನು ಉತ್ತಮ ಪಡಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳು ಈಗಿನಿಂದಲೇ ವ್ಯವಸ್ಥಿತವಾಗಿ ಯೋಜನೆ ರೂಪಿಸಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಉತ್ತಮವಾಗಿ ಎದುರಿಸುವಂತೆ ಕ್ರಮವಹಿಸಬೇಕೆಂದು ಸಲಹೆ ನೀಡಿದರು.
ವಿವಿಧ ಇಲಾಖೆಗಳ ಹಲವು ಯೋಜನೆಗಳಡಿ ಜಿಲ್ಲೆಯ ತಾಲ್ಲೂಕುಗಳಿಗೆ ಗುರಿಗಳನ್ನು ನಿಗಧಿಪಡಿಸುವಾಗ ತಾಲ್ಲೂಕು ಜನಪ್ರತಿನಿಧಿಗಳಿಂದ ತಾರತಮ್ಯ ದೂರುಗಳು ಬಂದಿದೆ ಇನ್ಮುಂದೆ ಎಲ್ಲಾ ಯೋಜನೆಗಳಡಿ ಫಲಾನುಭವಿಗಳ ಯೋಜನೆಗಳನ್ನು ಎಲ್ಲಾ ತಾಲ್ಲೂಕುಗಳಿಗೂ ಸಮವಾಗಿ ಹಂಚಿಕೆ ಮಾಡಬೇಕು. ಕೆಲವೊಂದು ಬಾರಿ ಮಾತ್ರ ಬೇಡಿಕೆ ಹಾಗೂ ಅವಶ್ಯತೆಕಗಳಿಗನುಣವಾಗಿ ಹಂಚಿಕೆ ಮಾಡಬೇಕು ಎಂದು ಸಚಿವರು ತಿಳಿಸಿದರು.
ಕೆ.ಡಿ.ಪಿ ಸಭೆಯ ಆರಂಭದಲ್ಲಿ ಮಾತನಾಡಿದ ಸಚಿವರು ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಿರಂತರವಾಗಿ ಕಾಡಾನೆಗಳ ದಾಳಿ ಹೆಚ್ಚಾಗಿದ್ದು, ರೈತರುಗಳಿಗೆ ನಷ್ಟ ಉಂಟಾಗುವುದರ ಜೊತೆಗೆ ಜೀವ ಹಾನಿಗಳಾಗುವ ಸಾಧ್ಯತೆ ಹೆಚ್ಚಾಗಿದೆ ಇದಕ್ಕೆ ಮುಂಜಾಗ್ರತ ಕ್ರಮವಾಗಿ ಆನೆ ದಾಳಿ ತಪ್ಪಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಕನಕಪುರ ಹಾಗೂ ಚನ್ನಪಟ್ಟಣ ತಾಲ್ಲೂಕಿನ ಕಾಡಂಚಿನ 67 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಬ್ಯಾರಿಕೇಡ್ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಪೈಕಿ 46 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಈಗಾಗಲೇ ಬ್ಯಾರಿಕೇಡ್ ನಿರ್ಮಿಸಲಾಗಿದೆ ಎಂದು ಅರಣ್ಯ ಇಲಾಖೆಯ ಡಿಸಿಎಫ್ ರಾಮಕೃಷ್ಣಯ್ಯ ಅವರು ಸಭೆಗೆ ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಮಾಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಚ್.ಸಿ. ಬಾಲಕೃಷ್ಣ, ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಇಕ್ಬಾಲ್ ಹುಸೇನ್, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿ.ಪಿ. ಯೋಗೇಶ್ವರ್, ವಿಧಾನಪರಿಷತ್ ಸದಸ್ಯರಾದ ಸುಧಾಮ್ ದಾಸ್, ರಾಜ್ಯ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ಸೂರಜ್ ಹೆಗಡೆ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಕೆ. ರಾಜು, ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷರಾದ ಗಂಗಾಧರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅನ್ಮೋಲ್ ಜೈನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್‌ಗೌಡ, ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ವೇದಿಕೆಯಲ್ಲಿದ್ದರು.
ಕೆಡಿಪಿ ಸಭೆಯ ನಾಮನಿರ್ದೇಶಿತ ಸದಸ್ಯರಾದ ಗುರುಮೂರ್ತಿ, ಮುಕುಂದ, ಸುಕನ್ಯಾ, ದೌಲತ್ ಪಾಷ ಅವರು ವಿವಿಧ ಸಮಸ್ಯೆಗಳ ಕುರಿತು ಸಭೆಯಲ್ಲಿ ಪ್ರಸ್ತಾಪಿಸಿದರು.
ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು



