ಹನೂರು : ನೀರು ಕುಡಿಯಲು ಬಂದು ಕೆಸರಿನಲ್ಲಿ ಸಿಲುಕಿಕೊಂಡು ನಿತ್ರಾಣಗೊಂಡಿದ್ದ ಹೆಣ್ಣಾನೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದೆ.
ಮಲೆ ಮಹದೇಶ್ವರ ವನ್ಯಜೀವಿಧಾಮದ ಬಫರ್ ವಲಯದ ಅಜ್ಜೀಪುರ ಸಮೀಪದ ಉಡುತೊರೆ ಹಳ್ಳ ಜಲಾಶಯಕ್ಕೆ ಶನಿವಾರ ಸಂಜೆ ನಾಲ್ಕು ಕಾಡಾನೆಗಳು ನೀರು ಕುಡಿಯಲು ಎಂದಿನಂತೆ ಬಂದಿದ್ದವು. ಈ ಪೈಕಿ ಮೂರು ಕಾಡಾನೆಗಳು ಕೆಸರಿನಲ್ಲಿ ಸಿಲುಕಿಕೊಂಡಿದ್ದವು.
ವಿಚಾರ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಉಡುತೊರೆ ಹಳ್ಳ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸಹಕಾರದೊಂದಿಗೆ ಮೂರು ಆನೆಗಳನ್ನು ರಕ್ಷಣೆ ಮಾಡಲಾಗಿತ್ತು. ಎರಡು ಆನೆಗಳು ಚೇತರಿಸಿಕೊಂಡು ಕಾಡಿನತ್ತ ತೆರಳಿದ್ದವು. ಇನ್ನೊಂದು ಹೆಣ್ಣಾನೆ ನಿತ್ರಾಣಗೊಂಡಿತ್ತು.
ಕಳೆದ ಮೂರು ದಿನಗಳಿಂದಲೂ ಸಹ ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಪಶು ವೈದ್ಯಾಧಿಕಾರಿ ಡಾ. ರಮೇಶ್ ನೇತೃತ್ವದಲ್ಲಿ ನಿತ್ರಾಣಗೊಂಡಿದ್ದ ಕಾಡಾನೆಗೆ ಸಾಕಷ್ಟು ಔಷಧೋಪಚಾರಗಳು ನಡೆಯುತ್ತಿತ್ತು. ಮೂರು ದಿನಗಳಿಂದ ನಿರಂತರವಾಗಿ ಚಿಕಿತ್ಸೆಯನ್ನ ನೀಡಲಾಗುತ್ತಿತ್ತು. ಸ್ಥಳದಲ್ಲಿಯೇ ಆನೆಗೆ ಬೇಕಾದಂತಹ ಪೌಷ್ಠಿಕ ಆಹಾರ ಸಹಿತವಾಗಿ ವೈದ್ಯಾಧಿಕಾರಿಗಳು ಕೂಡ ಅಲ್ಲೇ ಮೊಕ್ಕಾಂ ಹೂಡಿದ್ದರು. ಆದರೆ ಕೊನೆಗೂ ಚಿಕಿತ್ಸೆ ಫಲಿಸದೆ ಆನೆ ಕೊನೆಯುಸಿರೆಳೆದಿದೆ



