ಬೆಂಗಳೂರು: ಬೇಸಿಗೆಯ ಸುಡುವ ಬಿಸಿಲಿನಿಂದ ಈಗಾಗಲೇ ಸಂಕಷ್ಟ ಅನುಭವಿಸುತ್ತಿರುವ ಕರ್ನಾಟಕದ ಜನತೆಗೆ ಮತ್ತೊಂದು ಆರ್ಥಿಕ ಹೊರೆ ಎದುರಾಗುತ್ತಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ರಾಜ್ಯದಲ್ಲಿ ವಿದ್ಯುತ್ ದರವನ್ನು ಪ್ರತಿ ಯೂನಿಟ್‌ಗೆ 56 ಪೈಸೆ ಹೆಚ್ಚಿಸಲು ಆದೇಶ ಹೊರಡಿಸಿದ್ದು, ಈ ಹೊಸ ದರ ಮೇ 1, 2026ರಿಂದ ಜಾರಿಗೆ ಬರಲಿದೆ. ‘ಟ್ರೂ ಅಪ್ ಚಾರ್ಜ್’ ಎಂಬ ಹೆಸರಿನಲ್ಲಿ ಈ ಹೆಚ್ಚುವರಿ ಶುಲ್ಕವನ್ನು ಗ್ರಾಹಕರ ವಿದ್ಯುತ್ ಬಿಲ್‌ನಲ್ಲಿ ಪ್ರತ್ಯೇಕವಾಗಿ ಸೇರಿಸಲಾಗುತ್ತದೆ.
ಈ ದರ ಏರಿಕೆಯ ಪ್ರಮುಖ ಕಾರಣವೆಂದರೆ 2024-25ನೇ ಆರ್ಥಿಕ ವರ್ಷದಲ್ಲಿ ವಿದ್ಯುತ್ ಸರಬರಾಜು ಕಂಪನಿಗಳಿಗೆ ಉಂಟಾದ ಆದಾಯ ಕೊರತೆ. ವಿಶೇಷವಾಗಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ)ಗೆ ಸುಮಾರು 2,024 ಕೋಟಿ ರೂಪಾಯಿ ನಷ್ಟ ಉಂಟಾಗಿದೆ. ಈ ನಷ್ಟವನ್ನು ಸಮತೋಲನಗೊಳಿಸಲು ಕೆಇಆರ್‌ಸಿ ಈ ದರ ಏರಿಕೆಗೆ ಅನುಮತಿ ನೀಡಿದೆ. ಪರಿಣಾಮವಾಗಿ, ತಿಂಗಳಿಗೆ ಸರಾಸರಿ 200 ಯೂನಿಟ್ ವಿದ್ಯುತ್ ಬಳಸುವ ಒಂದು ಸಾಮಾನ್ಯ ಕುಟುಂಬಕ್ಕೆ ಕನಿಷ್ಠ 112 ರೂಪಾಯಿಗಳ ಹೆಚ್ಚುವರಿ ಹೊರೆ ಬೀಳಲಿದೆ.
ಇದು ಕೇವಲ ಗೃಹ ಬಳಕೆದಾರರಿಗಷ್ಟೇ ಸೀಮಿತವಾಗದೇ, ವಾಣಿಜ್ಯ ಹಾಗೂ ಕೈಗಾರಿಕಾ ವಲಯಕ್ಕೂ ಅನ್ವಯವಾಗಲಿದೆ. ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಬಳಸುವ ಕೈಗಾರಿಕೆಗಳಿಗೆ ಇದು ದೊಡ್ಡ ಆರ್ಥಿಕ ಹೊರೆ ಆಗುವ ಸಾಧ್ಯತೆ ಇದೆ. ವಿದ್ಯುತ್ ವೆಚ್ಚ ಹೆಚ್ಚುವುದರಿಂದ ಉತ್ಪಾದನಾ ವೆಚ್ಚವೂ ಏರಿಕೆಯಾಗುವ ಆತಂಕ ವ್ಯಕ್ತವಾಗಿದೆ.
ಆದರೆ, ಎಲ್ಲ ಎಸ್ಕಾಂಗಳ ಪರಿಸ್ಥಿತಿ ಒಂದೇ ತರಹದಲ್ಲಿಲ್ಲ. ಕೆಲವು ವಿದ್ಯುತ್ ಸರಬರಾಜು ಕಂಪನಿಗಳು ಲಾಭದಲ್ಲಿರುವುದರಿಂದ ಅವುಗಳ ಗ್ರಾಹಕರಿಗೆ ಮರುಪಾವತಿ ನೀಡುವಂತೆ ಕೆಇಆರ್‌ಸಿ ಸೂಚಿಸಿದೆ. ಹುಬ್ಬಳ್ಳಿ ಹೆಸ್ಕಾಂ ತನ್ನ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ 10 ಪೈಸೆ, ಕಲಬುರಗಿಯ ಜೆಸ್ಕಾಂ 10 ಪೈಸೆ, ಮಂಗಳೂರಿನ ಮೆಸ್ಕಾಂ 9 ಪೈಸೆ ಹಾಗೂ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸರಬರಾಜು ಸಹಕಾರ ಸೊಸೈಟಿ (ಹೆಚ್‌ಆರ್‌ಇಸಿಎಸ್) ತನ್ನ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ 155 ಪೈಸೆ ಮರುಪಾವತಿ ನೀಡಬೇಕು ಎಂದು ಆದೇಶಿಸಲಾಗಿದೆ.
ಉದಾಹರಣೆಗೆ, ಮೆಸ್ಕಾಂ ವ್ಯಾಪ್ತಿಯ ಗ್ರಾಹಕರು ತಿಂಗಳಿಗೆ 100 ಯೂನಿಟ್ ವಿದ್ಯುತ್ ಬಳಸಿದರೆ, ಪ್ರತಿ ಯೂನಿಟ್‌ಗೆ 9 ಪೈಸೆಯಂತೆ ಅವರಿಗೆ ಮರುಪಾವತಿ ಲಭಿಸುತ್ತದೆ. ಈ ಮೊತ್ತವನ್ನು ‘ಎಫ್‌ವೈ 25 ಟ್ರೂ ಅಪ್ ಚಾರ್ಜ್’ ಹೆಸರಿನಲ್ಲಿ ವಿದ್ಯುತ್ ಬಿಲ್‌ನಲ್ಲಿ ಪ್ರತ್ಯೇಕವಾಗಿ ತೋರಿಸಲಾಗುತ್ತದೆ.
ಇನ್ನೊಂದೆಡೆ, ಮೈಸೂರು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಕ್ಕೂ ಆದಾಯ ಕೊರತೆ ಉಂಟಾಗಿರುವುದರಿಂದ ಪ್ರತಿ ಯೂನಿಟ್‌ಗೆ 15 ಪೈಸೆ ಹೆಚ್ಚಳ ಮಾಡಲಾಗಿದೆ. ಹೀಗಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ವಿದ್ಯುತ್ ದರದಲ್ಲಿ ವ್ಯತ್ಯಾಸ ಕಂಡುಬರುತ್ತಿದೆ.
ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಈ ದರ ಏರಿಕೆಯ ನೇರ ಹೊರೆ ಬೀಳುವುದಿಲ್ಲ. ಆದರೆ, ಈ ಹೆಚ್ಚುವರಿ ವೆಚ್ಚವನ್ನು ಸರ್ಕಾರವೇ ಭರಿಸಬೇಕಾಗುತ್ತದೆ. ಇತರ ಗ್ರಾಹಕರಿಗೆ ಮಾತ್ರ ಈ ದರ ಏರಿಕೆಯ ಪರಿಣಾಮ ನೇರವಾಗಿ ಕಾಣಿಸಿಕೊಳ್ಳಲಿದೆ.
ಒಟ್ಟಾರೆ, ವಿದ್ಯುತ್ ಸರಬರಾಜು ಕಂಪನಿಗಳು ಆರ್ಥಿಕ ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ದರ ಏರಿಕೆ ಅನಿವಾರ್ಯವಾಗಿದೆ ಎಂದು ಕೆಇಆರ್‌ಸಿ ಸ್ಪಷ್ಟಪಡಿಸಿದೆ. 2024-25ರಲ್ಲಿ ನಿರೀಕ್ಷಿತ ಆದಾಯಕ್ಕಿಂತ ಸಾವಿರಾರು ಕೋಟಿ ರೂಪಾಯಿಗಳ ಕೊರತೆ ಉಂಟಾದ ಕಾರಣ, ಗ್ರಾಹಕರಿಂದಲೇ ಈ ಮೊತ್ತವನ್ನು ವಸೂಲಿಸುವ ಮಾರ್ಗವನ್ನು ಆಯ್ಕೆ ಮಾಡಲಾಗಿದೆ.
ಈ ಹೊಸ ದರ ವ್ಯವಸ್ಥೆ 2026ರ ಮೇ 1ರಿಂದ 2027ರ ಏಪ್ರಿಲ್ 31ರವರೆಗೆ ಅನ್ವಯವಾಗಲಿದೆ. ವಿದ್ಯುತ್ ಬಳಕೆಯನ್ನು ನಿಯಂತ್ರಿಸುವುದು ಮತ್ತು ಪರ್ಯಾಯ ಶಕ್ತಿ ಮೂಲಗಳನ್ನು ಬಳಸುವ ಬಗ್ಗೆ ಜನರು ಚಿಂತನೆ ನಡೆಸಬೇಕಾದ ಅಗತ್ಯವೂ ಹೆಚ್ಚಾಗಿದೆ.



