ನವದೆಹಲಿ : ಮಹಿಳಾ ಮೀಸಲಾತಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ದೇಶದ ಮಹಿಳೆಯರ ಕ್ಷಮೆಯಾಚಿಸಿದರು ಮತ್ತು ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಭಾಷಣದ ಪ್ರಮುಖ ಮುಖ್ಯಾಂಶಗಳು ಹೀಗಿದೆ:
ನಾರಿ ಶಕ್ತಿಯ ಕ್ಷಮೆಯಾಚನೆ: ಪ್ರಧಾನಿಯವರು ತಮ್ಮ ಭಾಷಣವನ್ನು ಭಾವನಾತ್ಮಕವಾಗಿ ಆರಂಭಿಸುತ್ತಾ, “ನಾನು ನನ್ನ ದೇಶದ ನಾರಿ ಶಕ್ತಿಯ ಕ್ಷಮೆಯಾಚಿಸುತ್ತೇನೆ. ಇಂದು ಭಾರತದ ಪ್ರತಿಯೊಬ್ಬ ನಾಗರಿಕನೂ ಗಮನಿಸುತ್ತಿದ್ದಾನೆ – ಹೇಗೆ ಭಾರತದ ಮಹಿಳೆಯರ ಕನಸುಗಳನ್ನು ಕ್ರೂರವಾಗಿ ಹತ್ತಿಕ್ಕಲಾಗಿದೆ ಎಂದು. ನಮ್ಮ ಶಕ್ತಿಮೀರಿ ಪ್ರಯತ್ನಿಸಿದರೂ ನಾವು ಯಶಸ್ವಿಯಾಗಲಿಲ್ಲ. ‘ನಾರಿ ಶಕ್ತಿ ವಂದನ್ ಅಧಿನಿಯಮ’ ಸಂಸತ್ತಿನಲ್ಲಿ ಅಂಗೀಕಾರವಾಗದಿದ್ದಕ್ಕಾಗಿ ನಾನು ತಾಯಂದಿರು ಮತ್ತು ಸಹೋದರಿಯರಲ್ಲಿ ಕ್ಷಮೆ ಕೇಳುತ್ತೇನೆ,” ಎಂದರು.
ಆಶೀರ್ವಾದ ನಮ್ಮೊಂದಿಗಿದೆ: “ಮಸೂದೆ ಪಾಸ್ ಮಾಡಲು ಬೇಕಾದ ಶೇ. 66 ರಷ್ಟು ಮತಗಳು ನಮಗೆ ಸಿಗದೇ ಇರಬಹುದು, ಆದರೆ ದೇಶದ ಶೇ. 100 ರಷ್ಟು ನಾರಿ ಶಕ್ತಿಯ ಆಶೀರ್ವಾದ ನಮ್ಮ ಮೇಲಿದೆ ಎಂಬುದು ನನಗೆ ಗೊತ್ತು. ಮಹಿಳಾ ಮೀಸಲಾತಿಯ ಹಾದಿಯಲ್ಲಿ ಬರುವ ಪ್ರತಿಯೊಂದು ಅಡೆತಡೆಯನ್ನೂ ನಾವು ತೊಡೆದುಹಾಕುತ್ತೇವೆ ಎಂದು ನಾನು ಭರವಸೆ ನೀಡುತ್ತೇನೆ,” ಎಂದು ಮೋದಿ ಹೇಳಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ : ಕಾಂಗ್ರೆಸ್ ಸದಾ ಸುಧಾರಣೆಗಳನ್ನು ತಡೆಯುವ ಕೆಲಸ ಮಾಡಿದೆ ಎಂದು ಟೀಕಿಸಿದ ಅವರು, “ವಿಷಯವನ್ನು ತೂಗುಹಾಕುವುದು, ದಾರಿ ತಪ್ಪಿಸುವುದು ಮತ್ತು ಅಡ್ಡಿಪಡಿಸುವುದು ಇದೇ ಕಾಂಗ್ರೆಸ್ ನ ಸಿದ್ಧಾಂತ ಮತ್ತು ಕೆಲಸದ ಸಂಸ್ಕೃತಿ,” ಎಂದು ಕಿಡಿಕಾರಿದರು.
ಟಿಎಂಸಿ ಮತ್ತು ಎಸ್ ಪಿ ಮಹಿಳಾ ವಿರೋಧಿ : ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ – ಈ ಮೂರೂ ಪಕ್ಷಗಳು ಮಹಿಳಾ ವಿರೋಧಿಗಳು ಎಂದು ಪ್ರಧಾನಿ ಕರೆದರು. ಸಮಾಜವಾದಿ ಪಕ್ಷವು ಈ ಮಸೂದೆಯನ್ನು ವಿರೋಧಿಸುವ ಮೂಲಕ ಲೋಹಿಯಾ ಅವರ ಆದರ್ಶಗಳನ್ನು ತುಳಿದು ಹಾಕಿದೆ ಎಂದು ಅವರು ಆರೋಪಿಸಿದರು.
ದೇಶದ ಹಿತವೇ ಮೊದಲು: “ನಮಗೆ ದೇಶದ ಹಿತಾಸಕ್ತಿಯೇ ಸರ್ವೋಚ್ಚ. ಆದರೆ ಕೆಲವರಿಗೆ ಪಕ್ಷದ ಹಿತಾಸಕ್ತಿಯೇ ದೇಶಕ್ಕಿಂತ ದೊಡ್ಡದಾದಾಗ, ಅದರ ಪರಿಣಾಮವನ್ನು ನಾರಿ ಶಕ್ತಿ ಮತ್ತು ದೇಶ ಅನುಭವಿಸಬೇಕಾಗುತ್ತದೆ. ಈ ಬಾರಿಯೂ ಅದೇ ಆಗಿದೆ,” ಎಂದು ಪ್ರಧಾನಿ ಮೋದಿ ವಿಷಾದ ವ್ಯಕ್ತಪಡಿಸಿದರು
ಬಿಲ್‌ನ ಪ್ರಮುಖ ಉದ್ದೇಶಗಳು ಮತ್ತು ವಿಶೇಷತೆಗಳು ಹೀಗಿತ್ತು :
ಹಕ್ಕಿನ ಮರುಸ್ಥಾಪನೆ : ಕಳೆದ 40 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಹಿಳೆಯರ ಹಕ್ಕನ್ನು 2029ರ ಲೋಕಸಭಾ ಚುನಾವಣೆಯಿಂದ ಜಾರಿಗೆ ತರುವ ಪ್ರಾಮಾಣಿಕ ಪ್ರಯತ್ನ ಇದಾಗಿತ್ತು.
ಅಭಿವೃದ್ಧಿಯಲ್ಲಿ ಪಾಲುದಾರಿಕೆ : ಭಾರತದ ಅಭಿವೃದ್ಧಿ ಪಯಣದಲ್ಲಿ ಮಹಿಳೆಯರನ್ನು ಸಮಾನ ಸಹಭಾಗಿಗಳನ್ನಾಗಿ ಮಾಡುವುದು ಮತ್ತು ಅವರ ಮುಂದಿರುವ ಅಡೆತಡೆಗಳನ್ನು ನಿವಾರಿಸುವುದು ಈ ‘ಮಹಾಯಜ್ಞ’ದ ಗುರಿಯಾಗಿತ್ತು.
ರಾಜ್ಯಗಳ ಸಬಲೀಕರಣ : ಸಣ್ಣ ಅಥವಾ ದೊಡ್ಡ ರಾಜ್ಯ ಎನ್ನದೆ, ಎಲ್ಲಾ ರಾಜ್ಯಗಳ ಶಕ್ತಿಯನ್ನು ಸಮಾನವಾಗಿ ವೃದ್ಧಿಸುವ ಮತ್ತು ಸಂಸತ್ತಿನಲ್ಲಿ ರಾಜ್ಯಗಳಿಗೆ ಹೆಚ್ಚಿನ ಬಲ ನೀಡುವ ಪ್ರಯತ್ನ ಇದಾಗಿತ್ತು.
ವಿರೋಧ ಪಕ್ಷಗಳ ವಿರುದ್ಧ ‘ಭ್ರೂಣ ಹತ್ಯೆ’ ಆರೋಪ
ಪ್ರಧಾನಿ ಮೋದಿ ಅವರು ಈ ಮಸೂದೆಯ ಸೋಲನ್ನು ‘ಭ್ರೂಣ ಹತ್ಯೆ’ ಎಂದು ಕರೆದಿದ್ದಾರೆ
ಸಂಚು ಮತ್ತು ದ್ರೋಹ : ಕಾಂಗ್ರೆಸ್, ಟಿಎಂಸಿ, ಸಮಾಜವಾದಿ ಪಕ್ಷ ಮತ್ತು ಡಿಎಂಕೆ ಅಂತಹ ಪಕ್ಷಗಳು ಈ ಮಸೂದೆಯನ್ನು ಸೋಲಿಸುವ ಮೂಲಕ ‘ಭ್ರೂಣ ಹತ್ಯೆ’ ಮಾಡಿವೆ. ಇವರು ದೇಶದ ಸಂವಿಧಾನ ಮತ್ತು ನಾರಿ ಶಕ್ತಿಯ ಅಪರಾಧಿಗಳು ಎಂದು ಅವರು ಕಿಡಿಕಾರಿದರು.
ಕಾಂಗ್ರೆಸ್ ವಿರುದ್ಧ ಟೀಕೆ : ಕಾಂಗ್ರೆಸ್ ಮೊದಲಿನಿಂದಲೂ ಮಹಿಳಾ ಮೀಸಲಾತಿಯನ್ನು ದ್ವೇಷಿಸುತ್ತಾ ಬಂದಿದೆ. ಪ್ರತಿ ಬಾರಿಯೂ ಯಾವುದೋ ಒಂದು ನೆಪವೊಡ್ಡಿ ಅಥವಾ ಸುಳ್ಳುಗಳನ್ನು ಹರಡಿ ಈ ಪ್ರಕ್ರಿಯೆಗೆ ಅಡ್ಡಿಪಡಿಸುತ್ತಿದೆ.
ಮುಖವಾಡ ಕಳಚಿದೆ : ಈ ಬಾರಿ ಸಂಖ್ಯೆಯ ಆಧಾರದ ಮೇಲೆ ಅಥವಾ ಇನ್ಯಾವುದೋ ತಾಂತ್ರಿಕ ಕಾರಣಗಳನ್ನು ನೀಡಿ ದೇಶವನ್ನು ದಾರಿ ತಪ್ಪಿಸಲು ಕಾಂಗ್ರೆಸ್ ಪ್ರಯತ್ನಿಸಿದೆ. ಈ ಮೂಲಕ ಆ ಪಕ್ಷಗಳ ಅಸಲಿ ಮುಖವಾಡ ಕಳಚಿ ಬಿದ್ದಿದೆ ಎಂದು ಮೋದಿ ಹೇಳಿದರು.



