ನವದೆಹಲಿ : ಭಾರತೀಯ ಮೂಲದ ನಾಸಾ (NASA) ಗಗನಯಾತ್ರಿ ಅನಿಲ್ ಮೆನನ್ ಅವರು ತಮ್ಮ ಮೊದಲ ಬಾಹ್ಯಾಕಾಶ ಯಾನದ ಅಂಗವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು (ISS) ತಲುಪಿದ್ದಾರೆ. ಇವರು ಎಂಟು ತಿಂಗಳ ಸುದೀರ್ಘ ವೈಜ್ಞಾನಿಕ ಸಂಶೋಧನಾ ಕಾರ್ಯಗಳಿಗಾಗಿ ಈ ಐತಿಹಾಸಿಕ ಪ್ರಯಾಣ ಕೈಗೊಂಡಿದ್ದಾರೆ.
ರಷ್ಯಾದ ಸೋಯುಜ್ MS-29 ಬಾಹ್ಯಾಕಾಶ ನೌಕೆಯ ಮೂಲಕ ಅನಿಲ್ ಮೆನನ್ ಅವರು ಕಜಕಿಸ್ತಾನದ ಬೈಕೊನೂರ್ ಕಾಸ್ಮೋಡ್ರೋಮ್ನಿಂದ ಉಡಾವಣೆಗೊಂಡರು. ಸುಮಾರು ಮೂರು ಗಂಟೆಗಳ ಪ್ರಯಾಣದ ನಂತರ ನೌಕೆಯು ಐಎಸ್ಎಸ್ನ ‘ಪ್ರಿಚಲ್’ ಮಾಡ್ಯೂಲ್ಗೆ ಯಶಸ್ವಿಯಾಗಿ ಲಂಗರು ಹಾಕಿತು. ಇವರೊಂದಿಗೆ ರೊಸ್ಕೊಸ್ಮೊಸ್ನ ಗಗನಯಾತ್ರಿಗಳಾದ ಪ್ಯೊತ್ರ್ ಡುಬ್ರೊವ್ ಮತ್ತು ಅನ್ನಾ ಕಿಕಿನಾ ಅವರು ಸಹ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದ್ದಾರೆ.
ಏಪ್ರಿಲ್ 2027ರವರೆಗೆ ಐಎಸ್ಎಸ್ನಲ್ಲಿ ನೆಲೆಸಲಿರುವ ಅನಿಲ್ ಮೆನನ್ ಅವರು ಅತ್ಯಾಧುನಿಕ ವೈಜ್ಞಾನಿಕ ಪ್ರಯೋಗಗಳಲ್ಲಿ ತೊಡಗಿಕೊಳ್ಳಲಿದ್ದಾರೆ.
ಸೆಮಿಕಂಡಕ್ಟರ್ ಸಂಶೋಧನೆ : ಬಾಹ್ಯಾಕಾಶದಲ್ಲಿ ಸೆಮಿಕಂಡಕ್ಟರ್ ಕ್ರಿಸ್ಟಲ್ಗಳ ಉತ್ಪಾದನೆಯನ್ನು ಉತ್ತಮಗೊಳಿಸುವ ಮೂಲಕ ಹೈ-ಪರ್ಫಾರ್ಮೆನ್ಸ್ ಕಂಪ್ಯೂಟರ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮತ್ತು ವೈದ್ಯಕೀಯ ಉಪಕರಣಗಳ ತಯಾರಿಕೆಗೆ ವೇಗ ನೀಡುವ ಸಂಶೋಧನೆ ನಡೆಸಲಿದ್ದಾರೆ.
ವೈದ್ಯಕೀಯ ತಂತ್ರಜ್ಞಾನ: ಆಗ್ಮೆಂಟೆಡ್ ರಿಯಾಲಿಟಿ (AR) ಮತ್ತು AI ಬಳಸಿ ಅಲ್ಟ್ರಾಸೌಂಡ್ ಪರೀಕ್ಷೆಗಳನ್ನು ನಡೆಸಲಿದ್ದಾರೆ. ಇದು ಭವಿಷ್ಯದ ಬಾಹ್ಯಾಕಾಶ ಯಾನಗಳಲ್ಲಿ ಭೂಮಿಯ ವೈದ್ಯಕೀಯ ನೆರವಿನ ಅಗತ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಜೈವಿಕ ಸಂಶೋಧನೆ : ಬಾಹ್ಯಾಕಾಶದ ಮೈಕ್ರೋಗ್ರಾವಿಟಿಯಲ್ಲಿ (ಗುರುತ್ವಾಕರ್ಷಣೆಯಿಲ್ಲದ ಸ್ಥಿತಿ) ‘ಬಯೋಪ್ರಿಂಟಿಂಗ್ ವ್ಯಾಸ್ಕುಲರ್ ಕನ್ಸ್ಟ್ರಕ್ಟ್ಸ್’ನ ಪರೀಕ್ಷೆ ನಡೆಸಲಿದ್ದು, ಇದು ಮಾನವನ ವಯಸ್ಸಾದ ಪ್ರಕ್ರಿಯೆ ಮತ್ತು ಹೊಸ ಚಿಕಿತ್ಸಾ ಪದ್ಧತಿಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಜೊತೆಗೆ, ಬಾಹ್ಯಾಕಾಶದಲ್ಲಿ ರಕ್ತ ಪರಿಚಲನೆಯ ಬದಲಾವಣೆಗಳ ಕುರಿತಾದ ಅಧ್ಯಯನದಲ್ಲೂ ಅವರು ಭಾಗವಹಿಸಲಿದ್ದಾರೆ.
ತಮ್ಮ ಈ ಯಾನದ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಹಂಚಿಕೊಂಡಿರುವ ಅನಿಲ್ ಮೆನನ್, “ಯುನೈಟೆಡ್ ಸ್ಟೇಟ್ಸ್ ಸ್ಪೇಸ್ ಫೋರ್ಸ್ಗೆ ಸೇವೆ ಸಲ್ಲಿಸಲು ಮತ್ತು ನಾಸಾ ಹಾಗೂ ನಮ್ಮ ಅಂತರರಾಷ್ಟ್ರೀಯ ಸಹಯೋಗಿಗಳನ್ನು ಬೆಂಬಲಿಸಲು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರುತ್ತಿರುವುದು ಹೆಮ್ಮೆಯ ವಿಷಯ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಅನಿಲ್ ಮೆನನ್ ಅವರ ಆಗಮನದಿಂದಾಗಿ, ಪ್ರಸ್ತುತ ಐಎಸ್ಎಸ್ನಲ್ಲಿರುವ ಸಿಬ್ಬಂದಿಗಳ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಜುಲೈ 25ರಂದು ನಿಲ್ದಾಣದ ಕಮಾಂಡ್ ಜವಾಬ್ದಾರಿಯನ್ನು ಜೆಸ್ಸಿಕಾ ಮೀರ್ ಅವರಿಗೆ ಹಸ್ತಾಂತರಿಸುವ ಸಮಾರಂಭ ನಡೆಯಲಿದ್ದು, ಜುಲೈ 26ರಿಂದ ‘ಎಕ್ಸ್ಪೆಡಿಶನ್ 75’ ಅಭಿಯಾನವು ಅಧಿಕೃತವಾಗಿ ಪ್ರಾರಂಭವಾಗಲಿದೆ.



