ಬೆಂಗಳೂರು : ರಾಜ್ಯದ ವಿವಿಧ ಬಂದೀಖಾನೆಗಳಲ್ಲಿ ಇರುವ ಕೈದಿಗಳಿಗೆ ಅಗತ್ಯ ವೈದ್ಯಕೀಯ ಸೇವೆಗಳ ಕೊರತೆ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಜೈಲು ಆಸ್ಪತ್ರೆಗಳಿಗೆ ಪೂರೈಕೆಯಾಗುವ ಅಗತ್ಯ ಔಷಧಗಳಲ್ಲಿ ಶೇ. 40ರಿಂದ 50ರಷ್ಟು ಕೊರತೆ ಉಂಟಾಗಿದ್ದು, ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ಕೈದಿಗಳ ಆರೋಗ್ಯದ ಬಗ್ಗೆ ಆತಂಕ ಹೆಚ್ಚಿದೆ.
ಮಾಹಿತಿಯ ಪ್ರಕಾರ, ಜೈಲುಗಳಲ್ಲಿ ಸಾಮಾನ್ಯ ಜ್ವರ ಮತ್ತು ಕೆಮ್ಮಿನಂತಹ ಮೂಲಭೂತ ಔಷಧಗಳೂ ಲಭ್ಯವಿಲ್ಲ. ಈ ಪರಿಸ್ಥಿತಿಯಿಂದ ಜೈಲು ಆಡಳಿತ ಅಧಿಕಾರಿಗಳು ಕೂಡ ಆತಂಕ ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಸಮರ್ಪಕ ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದ ಸುಮಾರು 126 ಕೈದಿಗಳು ಮೃತಪಟ್ಟಿರುವುದು ಸಮಸ್ಯೆಯ ತೀವ್ರತೆಯನ್ನು ತೋರಿಸುತ್ತದೆ. ಕೈದಿಗಳಿಗೆ ತಕ್ಷಣ ವೈದ್ಯಕೀಯ ನೆರವು ಹಾಗೂ ಅಗತ್ಯ ಔಷಧಗಳನ್ನು ಒದಗಿಸುವಂತೆ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಇದುವರೆಗೆ ನಿರೀಕ್ಷಿತ ಮಟ್ಟದ ಸ್ಪಂದನೆ ದೊರೆತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ, ಮಾನವೀಯತೆ ದೃಷ್ಟಿಯಿಂದ ಕೆಲವು ಜೈಲು ಅಧಿಕಾರಿಗಳು ತಮ್ಮ ಸ್ವಂತ ವೆಚ್ಚದಲ್ಲಿ ಹಾಗೂ ಕೆಲವು ಸ್ವಯಂಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಕೈದಿಗಳಿಗೆ ಅಗತ್ಯ ಔಷಧಗಳನ್ನು ಒದಗಿಸುತ್ತಿದ್ದಾರೆ. ಈ ಹಿನ್ನೆಲೆ ಜೈಲುಗಳಲ್ಲಿನ ಔಷಧ ಕೊರತೆಯನ್ನು ತಕ್ಷಣ ನಿವಾರಿಸಿ ಕೈದಿಗಳ ಆರೋಗ್ಯ ರಕ್ಷಣೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.



