Thursday, May 28, 2026
Google search engine

Homeಸ್ಥಳೀಯಕನ್ನಡ ಚಿತ್ರರಂಗದ ಶ್ರೇಷ್ಠ ಸಾಹಿತಿ ಚಿ ಉದಯ ಶಂಕರ್ ಸ್ಮರಣೆ ಕಾರ್ಯಕ್ರಮ

ಕನ್ನಡ ಚಿತ್ರರಂಗದ ಶ್ರೇಷ್ಠ ಸಾಹಿತಿ ಚಿ ಉದಯ ಶಂಕರ್ ಸ್ಮರಣೆ ಕಾರ್ಯಕ್ರಮ

ಚಾಮರಾಜನಗರ : ಕನ್ನಡ ಚಿತ್ರರಂಗದ ಅಭೂತಪೂರ್ವ ಸಾಹಿತಿ ಚಿ ಉದಯ ಶಂಕರ್. ಭಾರತದ ಇತಿಹಾಸದಲ್ಲೇ ವಿಶೇಷವಾದ ಪ್ರತಿಭಾನ್ವಿತ ಸಾಹಿತಿ. 3000ಕ್ಕೂ ಹೆಚ್ಚು ಗೀತೆಗಳನ್ನು ರಚಿಸಿ ಗಿನ್ನಿಸ್ ದಾಖಲೆಗೆ ದಾಖಲಾಗಿರುವ ಉದಯ ಶಂಕರ್ ಅಮರ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಸಾಹಿತ್ಯ ಶಿಲ್ಪಿ ಚಿ ಉದಯ ಶಂಕರ್ ನೆನಪು ಹಾಗೂ ಕೊಡುಗೆಗಳು ಕುರಿತು ಮಾತನಾಡುತ್ತಾ ಗೀತ ರಚನೆಕಾರರಾಗಿ, ಸಂಭಾಷಣಾಕಾರರಾಗಿ, ಮೂರು ದಶಕಗಳ ಕಾಲ ಚಲನಚಿತ್ರಗಳಿಗೆ ಗೀತೆಗಳು ಹಾಗೂ ಭಕ್ತಿ ಗೀತೆಗಳು ರಚಿಸುವ ಮೂಲಕ ಕನ್ನಡಿಗರ ಜನ ಮಾನಸದಲ್ಲಿ ಉಳಿದಿದ್ದಾರೆ. ಇವರ ಸಾಹಿತ್ಯವು ಅತ್ಯಂತ ಸರಳ, ಮಧುರ, ಕಾವ್ಯಾತ್ಮಕವಾದ ಸೊಗಸನ್ನು ಕಾಣಬಹುದು. ಇವರ ಗೀತೆಗಳಲ್ಲಿ ಭಾವನಾತ್ಮಕವಾದ ಆಳವಾದ ಚಿಂತನೆ, ಗಹನವಾದ ಅರ್ಥನಿರೋಪಣೆ, ವಿಶೇಷವಾದದ್ದು.

ಉದಯ ಶಂಕರವರಿಗೆ ಹಾಗೂ ಡಾ. ರಾಜಕುಮಾರ್ ಅವರಿಗೆ ಅಪಾರವಾದ ಒಡನಾಟ. ಇಬ್ಬರಿಗೂ ಜನಪ್ರಿಯತೆ ಅಪಾರ ಯಶಸ್ಸು ತಂದಕೊಟ್ಟದ್ದು ಗೀತೆಗಳು ಹಾಗೂ ಸಂಭಾಷಣೆ ನಟನೆಯ ಮೂಲಕ ಡಾ. ರಾಜಕುಮಾರ್ ಅವರ ಬಂಗಾರದ ಮನುಷ್ಯ,ಶಂಕರ್ ಗುರು,ಗಂಧದಗುಡಿ ಚಿತ್ರಗಳು ಹಲವು ದಶಕಗಳ ನಂತರವೂ ಕನ್ನಡ ಸಾಮ್ರಾಜ್ಯದಲ್ಲಿ ನಿತ್ಯ ನಿರಂತರವಾಗಿ ಉಳಿದಿದೆ. ಕಸ್ತೂರಿ ನಿವಾಸ ಚಿತ್ರದ ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು ಗೀತೆಗಳ ಸಾಲು ಕನ್ನಡಿಗರಲ್ಲಿ ಹೊಸ ಸ್ಪೂರ್ತಿಯನ್ನು ತಂದಿತು. ಮತ್ತೆ ಮತ್ತೆ ಕೇಳಬೇಕು ಎನ್ನುವಂತೆ ಸಾಹಿತ್ಯದ ಶ್ರೇಷ್ಠ ಶಬ್ದಗಳು, ಪದಗಳು, ಅರ್ಥಗಳು,ಸರಳವಾಗಿ ಸುಂದರವಾಗಿ ಪ್ರತಿ ಜನಸಾಮಾನ್ಯ ಕನ್ನಡಿಗನಿಗೂ ಅರ್ಥವಾಗುವಂತೆ ಗೀತೆಗಳನ್ನು ರಚಿಸಿದ ಕೀರ್ತಿ ಉದಯಶಂಕರವರಿಗೆ ಸಲ್ಲುತ್ತದೆ.

ಆಪರೇಷನ್ ಡೈಮಂಡ್ ರಾಕೆಟ್ ಚಿತ್ರದಲ್ಲಿ ಆಂಗ್ಲ ಭಾಷೆಯ ಗೀತೆಯನ್ನು ವಿಭಿನ್ನವಾಗಿ ರಚನೆ ಮಾಡಿ ಹೊಸ ಪ್ರಯೋಗವನ್ನು ಮಾಡಿದವರು. ರಾಜ್ಯ ಪ್ರಶಸ್ತಿ ಸೇರಿದಂತೆ ನಾಡಿನ ಹಲವು ಗೌರವಕ್ಕೆ ಪಾತ್ರರಾದ ಉದಯಶಂಕರವರು ಸಾಹಿತ್ಯ ಶಿಲ್ಪಿ ಗೌರವಕ್ಕೆ ಪಾತ್ರರಾದವರು ಎಂದು ಋಗ್ವೇದಿ ತಿಳಿಸಿದರು.

ಚಿ.ಉದಯಶಂಕರ್ ಅವರ ಕುರಿತು ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯ ಜನಪದ ರವಿಚಂದ್ರಪ್ರಸಾದ್ ಕಹಳೆ ಉದಯ ಶಂಕರವರು ನೂರಾರು ಯುವ ಗೀತ ರಚನಕಾರರಿಗೆ ಸಂಭಾಷಣಕಾರರಿಗೆ ಮಾದರಿ. ಉದಯ ಶಂಕರ್ ಅವರ ಚಿತ್ರಗಳ ಸಂಭಾಷಣೆ ಎಂದೆಂದೂ ಮರೆಯಲಾಗದು. ಪ್ರತಿ ಚಿತ್ರದಲ್ಲೂ ಸಂಭಾಷಣೆಗಳು ಹಾಗೂ ಗೀತೆಗಳ ಮೂಲಕ ಕುಟುಂಬದ ನಡುವೆ ಹೊಸ ಶಕ್ತಿಯನ್ನು ಕಟ್ಟಿಕೊಟ್ಟವರು. ಸಾಮಾಜಿಕ ಮೌಲ್ಯಗಳನ್ನು ಬೆಳೆಸಿದವರು.ಆಧ್ಯಾತ್ಮಿಕವಾದ ಗೀತೆಗಳು ತನ್ನನ್ನು ತಾನು ಮರೆಯುವಂತೆ ರಚಿಸಿದ ಉದಯಶಂಕರವರ ಕುರಿತು ಕಾರ್ಯಕ್ರಮವನ್ನು ರೂಪಿಸಿದ ಕನ್ನಡ ಸಾಹಿತ್ಯ ಪರಿಷತ್ತಿಗೆ ಧನ್ಯವಾದಗಳು ಅರ್ಪಿಸುತ್ತೇವೆ.

ಕನ್ನಡ ಚಿತ್ರರಂಗಕ್ಕೆ ಶ್ರೇಷ್ಠ ಸಾಹಿತ್ಯ ರಚನಾ ಕಾರ್ಯದ ಅಗತ್ಯವಿದೆ ಎಂದು ಇದೇ ಸಂದರ್ಭದಲ್ಲಿ ಅಭಿಪ್ರಾಯ ಪಟ್ಟರು. ಯುವಕರನ್ನು ಸೆಳೆಯುವ ದೃಷ್ಟಿಯಲ್ಲಿ ಅರ್ಥ ರಹಿತವಾದ ಗೀತೆಗಳ ಬದಲು ಅರ್ಥ ಸಹಿತವಾದ ಸದಾ ಕಾಲ ಉಳಿಯುವ ಗೀತಗಳ ರಚನೆಗೆ ಪ್ರಾಮುಖ್ಯತೆಯನ್ನು ನೀಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಬಿಕೆ ಆರಾಧ್ಯ, ಶಿವಲಿಂಗ ಮೂರ್ತಿ, ಮಂಜುನಾಥ್,ಮಹೇಶ್, ಶಿವಲಿಂಗ ಶೆಟ್ಟಿ,ರಾಚಯ್ಯ, ಬಿಳಿಗಿರಿ ಇದ್ದರು.

RELATED ARTICLES
- Advertisment -
Google search engine

Most Popular