Friday, May 22, 2026
Google search engine

Homeರಾಜ್ಯಕರ್ನಾಟಕ ದೇಶದ ಐದನೇ ಅತ್ಯಂತ ಭ್ರಷ್ಟ ರಾಜ್ಯ : ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ

ಕರ್ನಾಟಕ ದೇಶದ ಐದನೇ ಅತ್ಯಂತ ಭ್ರಷ್ಟ ರಾಜ್ಯ : ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ

ಮಂಡ್ಯ: ರಾಜ್ಯದ ವಿವಿಧ ಇಲಾಖೆಗಳಲ್ಲಿನ ಭ್ರಷ್ಟಾಚಾರ ಮಿತಿಮೀರಿದ್ದು, ಕರ್ನಾಟಕ ದೇಶದ ಅತ್ಯಂತ ಭ್ರಷ್ಟ ರಾಜ್ಯಗಳಲ್ಲಿ ಐದನೇ ಸ್ಥಾನದಲ್ಲಿದೆ ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಂಡ್ಯ ಹಾಗೂ ಮಳವಳ್ಳಿ ತಾಲೂಕುಗಳಲ್ಲಿ ಬಾಕಿ ಉಳಿದಿದ್ದ ಲೋಕಾಯುಕ್ತ ಪ್ರಕರಣಗಳ ವಿಚಾರಣೆ ಪೂರ್ಣಗೊಳಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರ ನಿಯಂತ್ರಣಕ್ಕೆ ಬರದಿದ್ದರೆ ಭವಿಷ್ಯದಲ್ಲಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಅವಕಾಶ ಕಲ್ಪಿಸುವ ಉದ್ದೇಶ ಹೊಂದಿದ್ದರೂ, ಭ್ರಷ್ಟಾಚಾರವು ಅದರ ಮೂಲ ಆಶಯವನ್ನೇ ದುರ್ಬಲಗೊಳಿಸುತ್ತಿದೆ ಎಂದು ಹೇಳಿದರು. ರಾಜ್ಯದ 16 ಜಿಲ್ಲೆಗಳಲ್ಲಿ ಒಟ್ಟು 1,281 ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದ ಅವರು, ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ಪ್ರಕಟಿಸಿರುವ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕವನ್ನು ಉಲ್ಲೇಖಿಸಿದರು. 180 ರಾಷ್ಟ್ರಗಳ ಪೈಕಿ ಭಾರತ 91ನೇ ಸ್ಥಾನದಲ್ಲಿದ್ದು, 100ರಲ್ಲಿ ಕೇವಲ 39 ಅಂಕಗಳನ್ನು ಪಡೆದಿದೆ ಎಂದು ಹೇಳಿದರು.

ಅಧಿಕಾರಿಗಳನ್ನು ಜನಸೇವೆಗೆ ನೇಮಿಸಲಾಗಿದೆ. ಅವರು ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಬೇಕು. ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನ್ಯಾ.ವೀರಪ್ಪ ಎಚ್ಚರಿಕೆ ನೀಡಿದರು.

ಅಲ್ಲದೆ 2024ರಲ್ಲಿ ಕಾಂಗ್ರೆಸ್ ಸರ್ಕಾರದಿಂದ ಉಪಲೋಕಾಯುಕ್ತರಾಗಿ ನೇಮಕಗೊಂಡಿದ್ದ ನ್ಯಾ.ಬಿ.ವೀರಪ್ಪ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ವೇಳೆ ಲೋಕ ಅದಾಲತ್‌ಗಳ ಮೂಲಕ ಒಂದು ಕೋಟಿಗೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಗೊಳಿಸಿ ರಾಷ್ಟ್ರೀಯ ಮಟ್ಟದಲ್ಲಿ ದಾಖಲೆ ನಿರ್ಮಿಸಿದ್ದರು. ಭ್ರಷ್ಟಾಚಾರ ನಿರ್ಮೂಲನೆಗೆ ಪ್ರತಿಯೊಬ್ಬ ನಾಗರಿಕರೂ ಜಾಗೃತರಾಗಬೇಕು ಎಂದು ಕರೆ ನೀಡಿದ ಅವರು, “ಬದಲಾವಣೆ ಅಧಿಕಾರಿಗಳಿಂದ ಮಾತ್ರವಲ್ಲ, ನಾಗರಿಕರಿಂದಲೂ ಆಗಬೇಕು” ಎಂದು ಹೇಳಿದರು.

RELATED ARTICLES
- Advertisment -
Google search engine

Most Popular