ಗುಡಿಬಂಡೆ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿದ್ದು, ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಸರ್ಕಾರ ರಾಜ್ಯವನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ಆರೋಪಿಸಿದರು.
ಪಟ್ಟಣದ ಗಾಯತ್ರಿ ಪ್ರಸಾದ ಭವನದಲ್ಲಿ ನಡೆದ ಬಿಜೆಪಿ ಮಹಿಳಾ ಮೋರ್ಚಾ ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಜನರ ಹಿತಾಸಕ್ತಿಗಿಂತ ರಾಜಕೀಯಕ್ಕೇ ಹೆಚ್ಚು ಆದ್ಯತೆ ನೀಡುತ್ತಿದೆ ಎಂದು ಟೀಕಿಸಿದರು.
ಅಲ್ಲದೆ ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ನಿರಂತರವಾಗಿ ಟೀಕಿಸುವುದರಲ್ಲೇ ಕಾಂಗ್ರೆಸ್ ಸರ್ಕಾರ ಕಾಲಹರಣ ಮಾಡುತ್ತಿದ್ದು, ಅಭಿವೃದ್ಧಿ ಕಾರ್ಯಗಳಲ್ಲಿ ಸಂಪೂರ್ಣ ವಿಫಲವಾಗಿರುವ ಸರ್ಕಾರ, ಕೇವಲ ಟೀಕೆ ಮಾಡುವುದರಲ್ಲಿ ಮಾತ್ರ ಮುಂದಿದೆ ಎಂದರು. ಇನ್ನೂ ಗ್ಯಾರಂಟಿ ಯೋಜನೆಗಳ ಮೂಲಕ ಬಡವರು ಮತ್ತು ಮಹಿಳೆಯರನ್ನು ಮೋಸಗೊಳಿಸಲಾಗುತ್ತಿದೆ. ಜನರಿಂದ 10 ರೂಪಾಯಿ ಕಸಿದುಕೊಂಡು 2 ರೂಪಾಯಿ ಹಿಂತಿರುಗಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಆಡಳಿತದ ವಿರುದ್ಧ ಜನರಲ್ಲಿ ಅಸಮಾಧಾನ ಹೆಚ್ಚುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.
ಇದೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಚಿನ್ನ ಖರೀದಿ ಕುರಿತ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು ಮೋದಿ ಹೇಳಿಕೆಯನ್ನು ಕಾಂಗ್ರೆಸ್ ತಿರುಚಿ ಅರ್ಥೈಸುತ್ತಿದೆ. ದೇಶದ ಆರ್ಥಿಕ ಹಿತದೃಷ್ಟಿಯಿಂದ ಅಗತ್ಯವಿದ್ದರೆ ಮಾತ್ರ ಚಿನ್ನ ಖರೀದಿಸಬೇಕು ಎಂಬುದು ಮೋದಿ ಅವರ ಆಶಯವಾಗಿದ್ದು, ಕಾಂಗ್ರೆಸ್ ಅದನ್ನು ತಪ್ಪಾಗಿ ಬಿಂಬಿಸುತ್ತಿದೆ ಎಂದು ಹೇಳಿದರು.
ಮಹಿಳಾ ಮೋರ್ಚಾ ಪದಾಧಿಕಾರಿಗಳು ಪಕ್ಷದ ಸಂಘಟನೆಯನ್ನು ಬಲಪಡಿಸಿ, ಕ್ಷೇತ್ರದಲ್ಲಿ ಬಿಜೆಪಿ ಬೆಳೆಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಬಳಿಕ ಮಹಿಳಾ ಮೋರ್ಚಾ ತಾಲೂಕು ಘಟಕದ ಅಧ್ಯಕ್ಷೆ ಲಕ್ಷ್ಮೀ ವೇಣುಗೋಪಾಲ್ ಮಾತನಾಡಿ ಪಕ್ಷ ನೀಡಿದ ಜವಾಬ್ದಾರಿಯನ್ನು ಪ್ರಾಮಾಣಿಕತೆಯಿಂದ ನಿರ್ವಹಿಸುವುದಾಗಿ ತಿಳಿಸಿದರು. ಬೂತ್ ಮಟ್ಟದಿಂದಲೇ ಪಕ್ಷವನ್ನು ಬಲಪಡಿಸಲು ಹೆಚ್ಚಿನ ಸದಸ್ಯರನ್ನು ಸೇರ್ಪಡೆಗೊಳಿಸುವ ಕೆಲಸ ಮಾಡಲಾಗುವುದು ಎಂದರು.
ಕಾರ್ಯಕ್ರಮ ದಲ್ಲಿ ಕಳೆದ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು. ಈ ವೇಳೆ ಬಿಜೆಪಿ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಜಿ.ಎ.ಅಮರೇಶ, ಮದನ ಮೋಹನ ರೆಡ್ಡಿ, ಮಹಿಳಾ ಮೋರ್ಚಾ ಕಾರ್ಯದರ್ಶಿ ಅರುಣಾ, ಜ್ಯೋತಿ, ಮಂಜುಳಾ ಸಿಂಗ್, ಮುಖಂಡರಾದ ಪ್ರೆಸ್ ಶಿವಪ್ಪ, ಗಗನ, ವರುಣ್, ಪ್ರಹ್ಲಾದ ರಾವ್, ರವಿಕುಮಾರ್, ದಪ್ಪರ್ತಿ ಹರೀಶ್, ನವೀನ್ ಸೇರಿದಂತೆ ಹಲವರಿದ್ದರು.



