ಕೋಲ್ಕತ್ತಾ: ಪಶ್ಚಿಮ ಬಂಗಾಳದ ಹೈವೋಲ್ಟೇಜ್ ಕ್ಷೇತ್ರವಾದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಈ ಬಾರಿ ಬಿಜೆಪಿಯ ಪ್ರಭಾವಿ ನಾಯಕ ಸುವೇಂದು ಅಧಿಕಾರಿ ಅವರು ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಪವಿತ್ರ ಕರ್ ಅವರನ್ನು 9 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸುವ ಮೂಲಕ ಭರ್ಜರಿ ಜಯ ಸಾಧಿಸಿದ್ದಾರೆ.
ಚುನಾವಣಾ ಆಯೋಗದ (ECI) ಮಾಹಿತಿಯಂತೆ ಸುವೇಂದು ಅಧಿಕಾರಿ (ಬಿಜೆಪಿ): 1,27,301 ಮತಗಳು, ಪವಿತ್ರ ಕರ್ (ಟಿಎಂಸಿ): 1,17,636 ಮತಗಳು.
ರಾಜಕೀಯ ಕೇಂದ್ರಬಿಂದು ನಂದಿಗ್ರಾಮ
ನಂದಿಗ್ರಾಮವು ಕೇವಲ ಒಂದು ವಿಧಾನಸಭಾ ಕ್ಷೇತ್ರವಲ್ಲ, ಅದು ಪಶ್ಚಿಮ ಬಂಗಾಳದ ರಾಜಕೀಯದ ದಿಕ್ಸೂಚಿಯಾಗಿದೆ. ಈ ಹಿಂದಿನ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಲನ್ನನುಭವಿಸುವ ಮೂಲಕ ಟಿಎಂಸಿಗೆ ದೊಡ್ಡ ಹಿನ್ನಡೆಯಾಗಿತ್ತು.
2021ರ ಚುನಾವಣೆಯ ನೆನಪು:
2021ರಲ್ಲಿ ಮಮತಾ ಬ್ಯಾನರ್ಜಿ ಅವರು ತಮ್ಮ ಸಾಂಪ್ರದಾಯಿಕ ಕ್ಷೇತ್ರವನ್ನು ಬಿಟ್ಟು ನಂದಿಗ್ರಾಮದಿಂದ ಸ್ಪರ್ಧಿಸಿದ್ದರು. ಅಂದು ತಮ್ಮ ಮಾಜಿ ಆಪ್ತ, ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಕೇವಲ 2 ಸಾವಿರಕ್ಕಿಂತ ಕಡಿಮೆ ಮತಗಳ ಅಂತರದಿಂದ ಮಮತಾ ಬ್ಯಾನರ್ಜಿ ಸೋತಿದ್ದರು. ಆ ಫಲಿತಾಂಶ ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು.
ಕ್ಷೇತ್ರದ ಇತಿಹಾಸ ಮತ್ತು ರಾಜಕೀಯ ಹಿನ್ನೆಲೆ
ಚುನಾವಣಾ ಇತಿಹಾಸ : ಈ ಕ್ಷೇತ್ರದಲ್ಲಿ ಇದುವರೆಗೆ 16 ವಿಧಾನಸಭಾ ಚುನಾವಣೆಗಳು ನಡೆದಿವೆ. ಆರಂಭದ ದಶಕಗಳಲ್ಲಿ ಸಿಪಿಐ (CPI) ಪಕ್ಷವು 9 ಬಾರಿ ಗೆಲ್ಲುವ ಮೂಲಕ ಇಲ್ಲಿ ಪ್ರಬಲ ಹಿಡಿತ ಹೊಂದಿತ್ತು. ನಂತರ ಕಾಂಗ್ರೆಸ್ ಮತ್ತು ಟಿಎಂಸಿ ಕೂಡ ಇಲ್ಲಿ ಜಯಗಳಿಸಿದ್ದವು. ಆದರೆ ಬಿಜೆಪಿ 2021ರಲ್ಲಿ ಮೊದಲ ಬಾರಿಗೆ ಇಲ್ಲಿ ಗೆಲುವಿನ ಖಾತೆ ತೆರೆಯಿತು.
ಭೌಗೋಳಿಕತೆ: ಪೂರ್ವ ಮಿದ್ನಾಪುರ ಜಿಲ್ಲೆಯ ತಮ್ಲುಕ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಈ ಕ್ಷೇತ್ರವು ನಂದಿಗ್ರಾಮ-1 ಮತ್ತು ನಂದಿಗ್ರಾಮ-2 ಬ್ಲಾಕ್ ಗಳನ್ನು ಒಳಗೊಂಡಿದೆ.
ನಂದಿಗ್ರಾಮ ಚಳುವಳಿಯ ಪ್ರಭಾವ
2007ರ ಭೂಸ್ವಾಧೀನ ವಿರೋಧಿ ಹೋರಾಟ ನಂದಿಗ್ರಾಮವನ್ನು ಇತಿಹಾಸದ ಪುಟಗಳಲ್ಲಿ ದಾಖಲಿಸಿತು. ಅಂದಿನ ಎಡರಂಗ ಸರ್ಕಾರವು ಕೆಮಿಕಲ್ ಹಬ್ ನಿರ್ಮಾಣಕ್ಕಾಗಿ ನಡೆಸಿದ ಭೂಸ್ವಾಧೀನದ ವಿರುದ್ಧ ನಡೆದ ಹೋರಾಟದಲ್ಲಿ 14 ಗ್ರಾಮಸ್ಥರು ಪ್ರಾಣ ಕಳೆದುಕೊಂಡಿದ್ದರು. ಈ ಘಟನೆಯೇ ಮಮತಾ ಬ್ಯಾನರ್ಜಿ ಅವರ ಬೆಳವಣಿಗೆಗೆ ಶಕ್ತಿಯಾಗಿ ಪರಿಣಮಿಸಿ, 2011ರಲ್ಲಿ 34 ವರ್ಷಗಳ ಎಡರಂಗದ ಆಡಳಿತವನ್ನು ಕೊನೆಗಾಣಿಸಲು ನೆರವಾಗಿತ್ತು.
ಜನಸಂಖ್ಯಾ ವಿವರ
ನಂದಿಗ್ರಾಮವು ಪ್ರಮುಖವಾಗಿ ಗ್ರಾಮೀಣ ಪ್ರದೇಶವಾಗಿದ್ದು, ಇಲ್ಲಿನ ಮತದಾರರ ವಿವರ ಹೀಗಿದೆ. ಗ್ರಾಮೀಣ ಮತದಾರರು: ಶೇ. 96.65,ಮುಸ್ಲಿಂ ಮತದಾರರು: ಅಂದಾಜು ಶೇ. 23.60,ಪರಿಶಿಷ್ಟ ಜಾತಿ (SC) ಮತದಾರರು: ಶೇ. 16.46.
ಮತದಾನದ ಪ್ರಮಾಣ : 2021ರಲ್ಲಿ ಇಲ್ಲಿ ಶೇ. 88.51 ರಷ್ಟು ದಾಖಲೆ ಮಟ್ಟದ ಮತದಾನವಾಗಿತ್ತು, ಇದು ಈ ಕ್ಷೇತ್ರದ ರಾಜಕೀಯ ಜಾಗೃತಿಯನ್ನು ಎತ್ತಿ ತೋರಿಸುತ್ತದೆ



