ಐಪಿಎಲ್ನ 27ನೇ ಪಂದ್ಯದಲ್ಲಿ CSK ಮತ್ತು SRH ತಂಡಗಳು ಮುಖಾಮುಖಿಯಾಗಲಿದೆ. ಇಂದು ಹೈದರಾಬಾದ್‌ನ ಉಪ್ಪಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಧೋನಿ ಆಟ ಆಡಲಿದ್ದಾರಾ ಎಂಬ ಕುತೂಹಲ ಮೂಡಿದೆ. ಏಕೆಂದರೆ ಮಹೇಂದ್ರ ಸಿಂಗ್ ಧೋನಿ ಈ ಬಾರಿಯೂ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ತೀರಾ ಕಡಿಮೆ ಇದೆ ಎಂದು ತಿಳಿದುಬರುತ್ತಿದೆ.
ಸೀಸನ್ ಆರಂಭಕ್ಕೂ ಮುನ್ನ ತರಬೇತಿಯ ಅವಧಿಯಲ್ಲಿ ಉಂಟಾದ ಸ್ನಾಯು ಸೆಳೆತದಿಂದ (Calf Strain) ಧೋನಿ ಬಳಲುತ್ತಿದ್ದಾರೆ. ಇದೇ ಕಾರಣದಿಂದ ಧೋನಿ ಈ ಐಪಿಎಲ್ ಮೊದಲ ಐದು ಪಂದ್ಯಗಳಿಂದ ಹೊರಗುಳಿದಿದ್ದರು. ಇಂದಿನ ಪಂದ್ಯಕ್ಕಾಗಿ ಅವರು ತಂಡದೊಂದಿಗೆ ಹೈದರಾಬಾದ್‌ಗೆ ಪ್ರಯಾಣಿಸಿದ್ದಾರೆ ಆದರು, ಧೋನಿ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎಂದು ತಿಳಿದುಬಂದಿದೆ.
ನಿನ್ನೆ ಸಂಜೆ ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಧೋನಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿರುವುದು ಕಂಡ ಬಂದಿದೆ. ಈ ವೇಳೆ ಅವರ ಬ್ಯಾಟಿಂಗ್ಗೆ ಅಭಿಮಾನಿಗಳು ಫಿದ್ದಾ ಆಗಿದ್ದಾರೆ. ಆದರೆ ಟೂರ್ನಿಯ ದೀರ್ಘಾವಧಿಯನ್ನು ಗಮನದಲ್ಲಿಟ್ಟುಕೊಂಡು ಮ್ಯಾನೇಜ್‌ಮೆಂಟ್ ಅವರಿಗೆ ವಿಶ್ರಾಂತಿ ನೀಡಲು ನಿರ್ಧರಿಸಿದೆ.
ಧೋನಿ ಅವರ ಅನುಪಸ್ಥಿತಿಯಲ್ಲಿ ತಂಡದ ಸ್ಟಾರ್ ಆಟಗಾರ ಸಂಜು ಸ್ಯಾಮ್ಸನ್ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಮುಂದುವರಿಸಲಿದ್ದಾರೆ. ಪ್ರಸ್ತುತ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿರುವ ಚೆನ್ನೈ ತಂಡಕ್ಕೆ ಇಂದಿನ ಪಂದ್ಯ ಗೆಲ್ಲುವುದು ಅತ್ಯಂತ ಅವಶ್ಯಕವಾಗಿದೆ.
ಮೂಲಗಳ ಪ್ರಕಾರ, ಏಪ್ರಿಲ್ 23 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಹೈ-ವೋಲ್ಟೇಜ್ ಪಂದ್ಯದ ಮೂಲಕ ಧೋನಿ ಮೈದಾನಕ್ಕೆ ಮರಳುವ ಸಾಧ್ಯತೆಯಿದೆ. ಹೀಗಾಗಿ ಥಲಾ ಕಂಬ್ಯಾಕ್ಗಾಗಿ ಸಿಎಸ್ಕೆ ಅಭಿಮಾನಿಗಳು ಮತ್ತಷ್ಟು ದಿನಗಳು ಕಾಯಬೇಕಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ: ರುತುರಾಜ್ ಗಾಯಕ್‌ವಾಡ್ (ನಾಯಕ), ಆಯುಷ್ ಮ್ಹಾತ್ರೆ, ಎಂಎಸ್ ಧೋನಿ, ಸಂಜು ಸ್ಯಾಮ್ಸನ್, ಡೆವಾಲ್ಡ್ ಬ್ರೆವಿಸ್, ಉರ್ವಿಲ್ ಪಟೇಲ್, ಶಿವಂ ದುಬೆ, ಜೇಮಿ ಓವರ್‌ಟನ್, ರಾಮಕೃಷ್ಣ ಘೋಷ್, ನೂರ್ ಅಹ್ಮದ್, ಅನ್ಶುಲ್ ಕಂಬೋಜ್, ಗುರ್ಜಪ್ನೀತ್ ಸಿಂಗ್, ಶ್ರೇಯಸ್ ಗೋಪಾಲ್, ಮುಖೇಶ್ ಚೌಧರಿ, ಅಕೇಲ್ ಹೊಸೈನ್, ಪ್ರಶಾಂತ್ ವೀರ್, ಕಾರ್ತಿಕ್ ಶರ್ಮಾ, ಮ್ಯಾಥ್ಯೂ ಶಾರ್ಟ್, ಅಮನ್ ಖಾನ್, ಸರ್ಫರಾಝ್ ಖಾನ್, ಮ್ಯಾಟ್ ಹೆನ್ರಿ, ರಾಹುಲ್ ಚಹರ್, ಝಾಕ್ ಫೌಲ್ಕ್ಸ್, ಖಲೀಲ್ ಅಹ್ಮದ್ (ಔಟ್)



