ಮೈಸೂರು : ಸೋಲಿನ ಭಯದಿಂದ ಕಳೆದ ಮೂರು ವರ್ಷಗಳಿಂದ ನಗರಪಾಲಿಕೆಯ ಚುನಾವಣೆ ನಡೆಸಲು ಕಾಂಗ್ರೆಸ್ ಮುಂದಾಗದಿರುವುದು ಖಂಡನೀಯ ಎಂದು ಜಾತ್ಯಾತೀತ ಜನತಾದಳದ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ನಗರದ ನಂಜರಾಜ ಬಹುದ್ದೂರ್ ಛತ್ರದಲ್ಲಿ ಆಯೋಜಿಸಿದ್ದ ಮೈಸೂರು ನಗರ ಚಾಮರಾಜ, ಕೃಷ್ಣರಾಜ ಮತ್ತು ನರಸಿಂಹರಾಜ ಕ್ಷೇತ್ರದ ಜನರೊಂದಿಗೆ ಜನತಾದಳ ಕಾರ್ಯಕ್ರಮ ಮತ್ತು ವಿವಿಧ ಘಟಕಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು. ಮೈಸೂರು ನಗರದ ಮೂರು ಕ್ಷೇತ್ರದಲ್ಲಿಯೂ ಜೆಡಿಎಸ್ ಈ ಹಿಂದೆ ಗೆಲುವು ದಾಖಲಿಸಿರುವ ಇತಿಹಾಸ ಪಕ್ಷದ ಅಸ್ತಿತ್ವವನ್ನು ಹೇಳುತ್ತದೆ. ಮೈಸೂರು ರಾಜ್ಯದ ಅಸ್ಮಿತೆ ಹಾಗೂ ಕಲೆ ಮೈಸೂರು ಜಿಲ್ಲೆಗೆ ವರವಾಗಿ ಬಂದಿರುವುದು ಜಿಲ್ಲೆಯ ದೊಡ್ಡ ಇತಿಹಾಸ ಆಗಿದೆ. ಇತಿಹಾಸದ ಚರಿತ್ರೆಯಲ್ಲಿ ಅಳಿಸಲಾಗದ ವ್ಯಕ್ತಿತ್ವ ಎಂದರೆ ರಾಜವಂಶಸ್ಥರದಾಗಿದೆ. ಕೆಆರ್ ಎಸ್ ಅಣೆಕಟ್ಟು ನಿರ್ಮಿಸಿ ರೈತರಿಗೆ ನೆರವಾಗಿದ್ದು, ವಿದ್ಯುತ್ ಉತ್ಪಾದನಾ ಕೇಂದ್ರ ಸ್ಥಾಪನೆಯನ್ನು ನಾವೆಲ್ಲರೂ ಸ್ಮರಿಸಬೇಕಿದೆ. ಸೂರ್ಯ, ಚಂದ್ರರು ಇರುವಷ್ಟೇ ಸತ್ಯ ಮಹಾರಾಜರ ಕೊಡುಗೆಯೂ ಅಷ್ಟೇ ಸತ್ಯವಾಗಿದೆ. ಕಳೆದ ಮೂರು ವರ್ಷದಲ್ಲಿ ಸಾಂಸ್ಕೃತಿಕ ನಗರ ಎಂದು ಕರೆಯುತ್ತಿದ್ದೇವೆ. ಸಂಸ್ಕೃತಿ, ಅಳಿಸಲು ಹೋಗಲು ಈ ಸರ್ಕಾರ ಹೊರಟಿದೆ ಎಂದರು.
ಮೈಸೂರು ನಗರದ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ೪೦೦ ಕೋಟಿಯಷ್ಟು ಮಾದಕ ವಸ್ತುಗಳನ್ನು ಕೇಂದ್ರ ಗುಪ್ತಚರ ಮಾಹಿತಿ ಮೇರೆಗೆ ದಾಳಿ ನಡೆಸಿದೆ. ಮತ್ತೊಮ್ಮೆ ಮಹಾರಾಷ್ಟ್ರ ಪೊಲೀಸರು ೧೮೨ ಕೆಜಿ ಮಾದಕ ಪತ್ತೆ ಮಾಡಿದ್ದಾರೆ. ಹೀಗಿರುವಾಗ ರಾಜ್ಯ ಸರ್ಕಾರದ ಗುಪ್ತಚರ ಇಲಾಖೆ ಏನೂ ಮಾಡುತ್ತಿದೆ. ಗೃಹ ಸಚಿವರು ನಮಗೆ ಏನೂ ಗೊತ್ತಿಲ್ಲ ಎನ್ನುತ್ತಾರೆ. ಹೀಗೆ ಸಿಎಂ ಪ್ರತಿನಿಧಿಸುವ ಜಿಲ್ಲೆಯಲ್ಲಿ ಎಂತಹ ದೌಭಾರ್ಗ್ಯ ಸ್ಥಿತಿ ನಿರ್ಮಾಣವಾಗಿದೆ. ಮೈಸೂರು ನಗರದ ಸಂಸ್ಕೃತಿ ನಶಿಸಿ ಹೋಗುತ್ತಿದೆ. ಕಳೆದ ಮೂರು ವರ್ಷಗಳಿಂದ ಪಾಲಿಕೆ ಚುನಾವಣೆ ನಡೆಸುವ ಕಾರ್ಯಕ್ಕೆ ಮುಂದಾಗುತ್ತಿಲ್ಲ. ಬಿಬಿಎಂಪಿ ಚುನಾವಣೆಯನ್ನು ನಡೆಸದೇ ೧೧ ವರ್ಷದಿಂದ ಸುಮ್ಮನಾಗಿದ್ದಾರೆ. ಈಗ ಸುಪ್ರೀಕೋರ್ಟ್ ನಿರ್ದೇಶನ ನೀಡಿದರೂ ಸಹ ಜಿಬಿಎ ಹೆಸರು ಬದಲಾಯಿಸಿ ಚುನಾವಣೆ ಮುಂದೂಡುವ ಪ್ರಯತ್ನ ಮಾಡುತ್ತಿದ್ದಾರೆಂದರು.
ಅದೇ ರೀತಿ ಮೈಸೂರಿನಲ್ಲೂ ಗ್ರೇಟರ್ ಮೈಸೂರು ಮಾಡಲು ಹೊರಟಿದ್ದಾರೆ. ಮಹಾರಾಜರಿಗಿಂತಲೂ ದೂರದೃಷ್ಠಿಯ ಅಭಿವೃದ್ಧಿ ಗ್ರೇಟರ್ ಮೈಸೂರು ಇದೆಯೇ? ನಿಮಗೆ ನಿಜಕ್ಕೂ ದೂರದೃಷ್ಠಿ ಇದ್ದಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಚುನಾವಣೆ ನಡೆಸಿ ಜನಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿಸಿ ಅಭಿವೃದ್ಧಿ ಮಾಡುತ್ತಿದ್ದಿರಿ. ನಿಮಗೆ ಅಂತಹ ಆಲೋಚನೆ ಇಲ್ಲ. ಅಧಿಕಾರಿಗಳು ಮನಸೋ ಇಚ್ಛೆ ಕೆಲಸ ಮಾಡುತ್ತಿದ್ದು, ಯಾವುದೇ ಕೆಲಸ ಆಗದೇ ಜನರು ರೋಸಿ ಹೋಗಿದ್ದಾರೆ. ಇಂತಹ ವೇಳೆ ಚುನಾವಣೆ ನಡೆದರೆ ಕಾಂಗ್ರೆಸ್ ಪಕ್ಷವನ್ನು ಮನೆಗೆ ಕಳುಹಿಸುತ್ತಾರೆಂಬ ಭಯದಿಂದಲೇ ಚುನಾವಣೆ ವಿಳಂಬ ಮಾಡುತ್ತಿದ್ದಾರೆಂದರು.
ಮೈಸೂರು ನಗರದಲ್ಲಿ ಜನತಾದಳ ಪಕ್ಷ ಅತ್ಯಂತ ಬಲಿಷ್ಠ, ಪ್ರಬಲವಾಗಿದೆ ಎಂಬುದನ್ನು ತೋರಿಸುವ ನಿಟ್ಟಿನಲ್ಲಿ ಇಲ್ಲಿ ಸೇರಿರುವುದೇ ಸಾಕ್ಷಿಯಾಗಿದೆ. ಭಾರತ ದೇಶವನ್ನು ಪ್ರತಿನಿಧಿಸುವ ಯುವಪೀಳಿಗೆ, ಮಹಿಳೆಯರು ಹೆಚ್ಚಾಗಿ ಸೇರಿದ್ದೀರಿ. ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ ಕಾಲಘಟ್ಟದಿಂದಲೂ ಒಪ್ಪಿ ಇಲ್ಲಿಯವರಿಗೂ ಇದ್ದೀರಿ. ರಾಮನಗರ ಭಾಗದಲ್ಲಿ ಹಳ್ಳಿಗಳಲ್ಲಿ ತೋರುವ ಪ್ರೀತಿ ಸೌಜನ್ಯ ದಿಂದ ಬರಲು ತಡವಾಯಿತು. ಜನ ನನ್ನನ್ನು ಪ್ರೀತಿಸುತ್ತಿರುವುದು ನನ್ನ ಪುಣ್ಯವಾಗಿದೆ. ಈ ಸರ್ಕಾರದ್ದು ಇಂತಹ ಸಾಕಷ್ಟು ವೈಫಲ್ಯ, ಹಗರಣ ಎಲ್ಲವನ್ನೂ ಮುಂದಿನ ದಿನಗಳಲ್ಲಿ ತಿಳಿಸಲಿದ್ದು, ಮುಂದಿನ ದಿನಗಳಲ್ಲಿ ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡುವಂತೆ ಹೇಳಿದರು.

ಶಾಸಕ ಜಿ.ಡಿ.ಹರೀಶ್ ಗೌಡ , ಜೆಡಿಎಸ್ ನಗರಾಧ್ಯಕ್ಷ ಎಸ್ ಬಿಎಂ ಮಂಜು, ಜಿಲ್ಲಾಧ್ಯಕ್ಷ ಅಶ್ವಿನ್ಕುಮಾರ್, ಯುವನಗರ ಅಧ್ಯಕ್ಷರಾಗಿ ಮದನ್, ಮಹಿಳಾ ಜಿಲ್ಲಾ ಅಧ್ಯಕ್ಷರಾಗಿ ಹೇಮಾವತಿ ಅವರಿಗೆ ಪಕ್ಷದ ಬಾವುಟ ನೀಡಿ ಅಧಿಕಾರ ಸ್ವೀಕರಿಸಿದರು. ನಗರದ ಜೆಕೆ ಮೈದಾನದಿಂದ ರೋಡ್ ಶೋ ಪ್ರಾರಂಭಿಸಿ ನಂಜನರಾಜ ಬಹುದ್ದೂರ್ ಛತ್ರದವರೆಗೂ ಮೆರವಣಿಗೆ ಮಾಡಿದರು. ಈ ವೇಳೆ ಬೃಹತ್ ಹೂವಿನ ಹಾರ ಹಾಕಿ ಸಂಭ್ರಮಿಸಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಸಿ.ಎನ್.ಮಂಜೇಗೌಡ, ವಿವೇಕಾನಂದ, ಮಾಜಿ ಶಾಸಕ ಮಹದೇವು, ಜೆಡಿಎಸ್ ಮುಖಂಡ ಎಂ.ರಾಮು, ನಗರಪಾಲಿಕೆ ಮಾಜಿ ಸದಸ್ಯರಾದ ಮಾದೇಶ್, ಭಾಗ್ಯ ಮಾದೇಶ್, ಮಾಜಿ ಮೇಯರ್ ಬೈರಪ್ಪ, ಎಂ.ಜೆ.ರವಿಕುಮಾರ್, ನಗರಪಾಲಿಕೆ ಮಾಜಿ ಸದಸ್ಯರಾದ ಕೆ.ವಿ.ಶ್ರೀಧರ್, ಪ್ರೇಮಾಶಂಕರೇಗೌಡ, ಭಾಗ್ಯ ಇನ್ನಿತರರು ಉಪಸ್ಥಿತರಿದ್ದರು.



