ಹೈದರಾಬಾದ್ : ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ 31ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ (SRH) ವಿರುದ್ಧ 47 ರನ್ ಗಳ ಸೋಲು ಅನುಭವಿಸಿದ ನಂತರ ಡೆಲ್ಲಿ ಕ್ಯಾಪಿಟಲ್ಸ್ (DC) ನಾಯಕ ಅಕ್ಷರ್ ಪಟೇಲ್ ತಮ್ಮ ತಂಡದ ಫೀಲ್ಡಿಂಗ್ ವೈಫಲ್ಯದ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಭಿಷೇಕ್ ಶರ್ಮಾ ಅಬ್ಬರಕ್ಕೆ ಬೆಲೆ ತೆತ್ತ ಡೆಲ್ಲಿ
ರಾಜೀವ್ ಗಾಂಧಿ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹೈದರಾಬಾದ್, ಕೇವಲ 2 ವಿಕೆಟ್ ನಷ್ಟಕ್ಕೆ 242 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಕೇವಲ 68 ಎಸೆತಗಳಲ್ಲಿ 20 ಬೌಂಡರಿಗಳ ನೆರವಿನಿಂದ ಅಜೇಯ 135 ರನ್ ಚಚ್ಚಿದರು.
ಪಂದ್ಯದ ನಂತರ ಮಾತನಾಡಿದ ಅಕ್ಷರ್ ಪಟೇಲ್, “ನಮಗೆ ಸಿಕ್ಕ ರನ್-ಔಟ್ ಮತ್ತು ಕ್ಯಾಚ್ ಪಡೆಯುವ ಅವಕಾಶಗಳನ್ನು ನಾವು ಬಳಸಿಕೊಂಡಿದ್ದರೆ, ಅವರನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಬಹುದಿತ್ತು. ಆದರೆ ಅಭಿಷೇಕ್ ಬ್ಯಾಟಿಂಗ್ ಮಾಡಿದ ರೀತಿ ಅದ್ಭುತವಾಗಿತ್ತು, ಅವರ ಶ್ರಮಕ್ಕೆ ಕ್ರೆಡಿಟ್ ನೀಡಲೇಬೇಕು,” ಎಂದಿದ್ದಾರೆ.
ನಿಯಂತ್ರಣ ತಪ್ಪಿದ ಫೀಲ್ಡಿಂಗ್: “ಫೀಲ್ಡಿಂಗ್ ನಮ್ಮ ಕೈಯಲ್ಲಿದೆ. ಕ್ಯಾಚ್‌ಗಳನ್ನು ಹಿಡಿಯುವುದು ಮತ್ತು ರನ್-ಔಟ್ ಮಾಡುವುದು ಪಂದ್ಯದ ಮೇಲೆ ನಿಯಂತ್ರಣ ತರುತ್ತದೆ. ಇಂತಹ ಸಂದರ್ಭಗಳಲ್ಲಿ ಬೌಲರ್‌ಗಳಿಗೆ ಫೀಲ್ಡರ್‌ಗಳ ಬೆಂಬಲ ಬಹಳ ಮುಖ್ಯ,” ಎಂದು ಅಕ್ಷರ್ ಹೇಳಿದರು.
ಕ್ಲಾಸನ್ ಅಬ್ಬರಕ್ಕೆ ಬೌಲರ್‌ಗಳ ತಪ್ಪಿಲ್ಲ: 13 ಎಸೆತಗಳಲ್ಲಿ 37 ರನ್ ಗಳಿಸಿದ ಹೆನ್ರಿಚ್ ಕ್ಲಾಸನ್ ಬಗ್ಗೆ ಮಾತನಾಡುತ್ತಾ, “ಬ್ಯಾಟರ್ ಅಷ್ಟು ಚೆನ್ನಾಗಿ ಆಡುವಾಗ ಬೌಲರ್‌ಗಳನ್ನು ದೂಷಿಸಲು ಸಾಧ್ಯವಿಲ್ಲ. ಯೋಜನೆ ಸರಿಯಾಗಿದ್ದರೂ ಬ್ಯಾಟರ್ ಅಸಾಧಾರಣ ಶಾಟ್ ಹೊಡೆದರೆ ನಾವು ಅದನ್ನು ಒಪ್ಪಿಕೊಂಡು ಮುಂದೆ ಸಾಗಬೇಕು,” ಎಂದರು.
ಬದಲಾವಣೆ ಇಲ್ಲ: ಮುಂದಿನ ಪಂದ್ಯಗಳಲ್ಲಿ ತಂಡದಲ್ಲಿ ದೊಡ್ಡ ಬದಲಾವಣೆ ಮಾಡುವ ಯೋಚನೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಇದೊಂದು “ಕೆಟ್ಟ ದಿನ” ಎಂದು ಭಾವಿಸಿ ಮರೆತು ಮುನ್ನಡೆಯುವುದಾಗಿ ಅವರು ತಿಳಿಸಿದರು. (ಏಜೆನ್ಸಿಸ್)



