ಒಂದೆಡೆ ಅಡುಗೆ ಅನಿಲದ (ಸಿಲಿಂಡರ್) ಬೆಲೆ ಏರಿಕೆ, ಮತ್ತೊಂದೆಡೆ ದಿನಬಳಕೆ ವಸ್ತುಗಳು ಹಾಗೂ ತರಕಾರಿಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಸಾಮಾನ್ಯ ಜನರಿಗೆ ಈಗ ಅಡುಗೆ ಎಣ್ಣೆಯ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಳೆದ ಕೇವಲ ಒಂದು ತಿಂಗಳ ಅವಧಿಯಲ್ಲಿ ಅಡುಗೆ ಎಣ್ಣೆಯ ಬೆಲೆಗಳು ಅಂದಾಜು ಶೇ. 22 ರಷ್ಟು ಹೆಚ್ಚಳವಾಗಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ.
ಬೆಲೆಗಳು ಏಕಾಏಕಿ ಲೀಟರ್‌ಗೆ 30 ರೂಪಾಯಿವರೆಗೆ ಏರಿಕೆಯಾಗಿದ್ದು, ಹಲವು ಜಿಲ್ಲೆಗಳಲ್ಲಿ ಸದ್ಯದ ಅಡುಗೆ ಎಣ್ಣೆಗಳ ಬೆಲೆಗಳನ್ನು ಗಮನಿಸಿದರೆ: ಸನ್‌ಫ್ಲವರ್ ಆಯಿಲ್ ರೂ. 180 ರಿಂದ ರೂ. 200 ಕ್ಕೆ, ಪಾಮ್ ಆಯಿಲ್ ರೂ. 120 ರಿಂದ ರೂ. 145 ಕ್ಕೆ ಏರಿಕೆಯಾಗಿದೆ. ಇನ್ನು ಶೇಂಗಾ ಎಣ್ಣೆ (ಕಡಲೆಕಾಯಿ ಎಣ್ಣೆ) ದರ ಲೀಟರ್‌ಗೆ ರೂ. 15 ರಿಂದ ರೂ. 20 ರಷ್ಟು ಹೆಚ್ಚಾಗಿದೆ. 5 ಕಿಲೋ ಡಬ್ಬಿಯ ಬೆಲೆ ರೂ. 1000 ರಿಂದ ರೂ. 1150 ಕ್ಕೆ ಏರಿದರೆ, 15 ಕಿಲೋ ಟಿನ್ (ಹೋಲ್‌ಸೇಲ್) ಬೆಲೆ ರೂ. 2300 ರಿಂದ ರೂ. 2400 ರವರೆಗೆ ಹೆಚ್ಚಾಗಿದೆ. ಅದೇ ರೀತಿ ರೈಸ್ ಬ್ರಾನ್ ಎಣ್ಣೆಯ ಬೆಲೆ ಲೀಟರ್‌ಗೆ ರೂ. 150 ರಿಂದ ರೂ. 165 ಕ್ಕೆ ಏರಿಕೆಯಾಗಿದೆ. ವನಸ್ಪತಿ ಬೆಲೆ ಲೀಟರ್‌ಗೆ ರೂ. 130 ರಿಂದ ರೂ. 160 ಕ್ಕೆ ಹಾಗೂ ಸೋಯಾಬೀನ್ ಎಣ್ಣೆ ರೂ. 150 ರಿಂದ ರೂ. 170 ಕ್ಕೆ ತಲುಪಿದೆ. ಸಾಸಿವೆ ಎಣ್ಣೆ ರೂ. 130 ರಿಂದ ರೂ. 160 ಕ್ಕೆ ಏರಿಕೆಯಾಗಿದೆ.
ಬೆಲೆ ಏರಿಕೆಗೆ ಮುಖ್ಯ ಕಾರಣಗಳನ್ನ ನೋಡುವುದಾದರೆ, ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ ಹಾಗೂ ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಭಾರತಕ್ಕೆ ಅಗತ್ಯವಿರುವ ಸನ್‌ಫ್ಲವರ್ ಎಣ್ಣೆಯ ಬಹುಪಾಲು ಈ ದೇಶಗಳಿಂದಲೇ ಆಮದಾಗುತ್ತದೆ. ಆಮದು ಕಡಿಮೆಯಾಗಿರುವುದರಿಂದ ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಷ್ಟು ದಾಸ್ತಾನು ಇಲ್ಲದಂತಾಗಿದೆ. ಹೀಗಾಗಿ ಈ ಬೆಲೆ ಏರಿಕೆ ಸಮಸ್ಯೆ ಗ್ರಾಹಕರನ್ನ ಕಾಡುತ್ತಿದೆ.
ಬೆಲೆ ಏರಿಕೆಯ ನಡುವೆಯೇ ಕೆಲವು ವ್ಯಾಪಾರಿಗಳು ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಅದರಂತೆ ಕಂಪನಿಗಳ ಮಾರಾಟದ ಬೆಲೆ 750 ರಿಂದ 960 ರೂ. ಆಸುಪಾಸಿನಲ್ಲಿದ್ದರೂ, ಎಂಆರ್‌ಪಿ (MRP) ದರವನ್ನು 1118 ರೂ.ವರೆಗೆ ಮುದ್ರಿಸಿ ಗ್ರಾಹಕರಿಂದ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹೀಗಾಗಿ ಸನ್‌ಫ್ಲವರ್ ಎಣ್ಣೆ ದುಬಾರಿಯಾದ ಕಾರಣ ಜನರು ಅನಿವಾರ್ಯವಾಗಿ ಸ್ವಲ್ಪ ಕಡಿಮೆ ಬೆಲೆಗೆ ಸಿಗುವ ರೈಸ್ ಬ್ರಾನ್ ಅಥವಾ ಸೋಯಾಬೀನ್ ಎಣ್ಣೆಯ ಮೊರೆ ಹೋಗುತ್ತಿದ್ದಾರೆ.
ಒಟ್ಟಾರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಪೂರೈಕೆ ವ್ಯವಸ್ಥೆ ಸುಧಾರಿಸುವವರೆಗೆ ಬೆಲೆ ಇಳಿಕೆಯಾಗುವ ಲಕ್ಷಣಗಳಿಲ್ಲ. ಆದರೆ, ಸ್ಥಳೀಯವಾಗಿ ವ್ಯಾಪಾರಿಗಳ ಮೇಲೆ ಸೂಕ್ತ ನಿಗಾ ವಹಿಸದಿದ್ದರೆ ಸಾಮಾನ್ಯ ಜನರ ಬದುಕು ಮತ್ತಷ್ಟು ದುಸ್ತರವಾಗುವುದರಲ್ಲಿ ಸಂಶಯವಿಲ್ಲ.



